ಜಗಳೂರು: ವಿದ್ಯುತ್ ಕಣ್ಣಾಮುಚ್ಚಾಲೆ ಖಂಡಿಸಿ ಅ.12 ರಂದು ಬೃಹತ್ ಪ್ರತಿಭಟನೆ

Suddivijaya
Suddivijaya October 10, 2023
Updated 2023/10/10 at 12:32 PM

ಸುದ್ದಿವಿಜಯ, ಜಗಳೂರು: ತೀವ್ರ ಬರದ ಮಧ್ಯೆಯೇ ರಾಜ್ಯದ ಗ್ರಾಮೀಣ ಭಾಗದಲ್ಲಿ ಸದ್ದಿಲ್ಲದೇ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಯಾಗಿದ್ದು, ವಿದ್ಯುತ್‍ನ ಕಣ್ಣಾಮುಚ್ಚಾಲೆ ಆಟಕ್ಕೆ ರೈತರು ಬಸವಳಿದಿದ್ದಾರೆ. ಇದನ್ನು ಖಂಡಿಸಿ ಇದೇ ಅ.12 ರಂದು ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ತಾಲೂಕು ಕಾರ್ಯದರ್ಶಿ ಭೈರನಾಯಕನಹಳ್ಳಿ ರಾಜು ಹೇಳಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿರುವುದರಿಂದ ರೈತರು ಸಂಷಕ್ಟದಲ್ಲಿದ್ದಾರೆ. ತೋಟಗಾರಿಕೆ ಬೆಳೆಗಳು, ಅಲ್ಪ ಸ್ವಲ್ಪ ನೀರಾವರಿ ಬೆಳೆಗಳನ್ನು ಬದುಕಿಸಿಕೊಳ್ಳಲು ವಿದ್ಯುತ್ ಅತ್ಯವಶ್ಯಕ. ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ರೈತ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.ಜಗಳೂರು ಪಟ್ಟಣದ ಪತ್ರಿಕಾಭವನದಲ್ಲಿ ರೈತ ಮುಖಂಡರು ಸುದ್ದಿಗೋಷ್ಠಿ ನಡೆಸಿದರು.

ಸರಕಾರ ಮತ್ತು ಬೆಸ್ಕಾಂ ಅಧಿಕಾರಿಗಳು ಏಳು ತಾಸು ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಹೇಳಿ ಈಗ ನಿಯಮಿತವಾಗಿ ಹಗಲು ಎರಡು ತಾಸು, ರಾತ್ರಿ ಎರಡು ತಾಸು ವಿದ್ಯುತ್ ಪೂರೈಕೆ ಮಾಡುತ್ತಿದೆ. ಅದರ ಮಧ್ಯೆಯೇ ಬೇಕಾ ಬಿಟ್ಟಿ ಲೋಡ್ ಶೆಡ್ಡಿಂಗ್ ಮಾಡುತ್ತಾ ತಾಂತ್ರಿಕ ನೆಪವೊಡ್ಡಿ ನಾಲ್ಕು ಗಂಟೆಯೂ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಹೀಗಾಗಿ ಅಂದು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಯಲು ರಂಗಮಂದಿರದ ಬಳಿ ಇರುವ ನೂತನ ಬೆಸ್ಕಾಂ ಕಚೇರಿಯವರೆಗೆ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ಮುಂಗಾರು ಹಂಗಾಮಿನಲ್ಲಿ ಮಳೆ ನಂಬಿ ಬೆಳೆದಿದ್ದ ಕೃಷಿ ಬೆಳೆಗಳು ಈಗಾಗಲೇ ಸಂಪೂರ್ಣ ನೆಲಕಚ್ಚಿವೆ. ನೀರಾವರಿ ಆಧಾರಿತ ತೋಟಗಾರಿಕೆ ಬೆಳೆಗಳಿಗೆ ಈಗ ವಿದ್ಯುತ್ ಸಮಸ್ಯೆಯಿಂದ ಕಂಟಕ ಎದುರಾಗಿದೆ. ಲೋಡ್ ಶೆಡ್ಡಿಂಗ್ ಕಾರಣಕ್ಕೆ ಪಂಪ್ ಸೆಟ್‍ಗಳು ಸ್ಥಗಿತಗೊಂಡಿರುವುದರಿಂದ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ.

ನೀರಿಲ್ಲದೆ ತಾಪಮಾನ ಹೆಚ್ಚಳದಿಂದ ಬೆಳೆಗಳು ಒಣಗುತ್ತಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ನಮ್ಮ ಕೂಗು ಸರಕಾರಕ್ಕೆ ಮುಟ್ಟಬೇಕಾದರೆ ಬೃಹತ್ ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು. ಈವೇಳೆ ರೈತ ಮುಖಂಡರಾದ ವೀರೇಶ್, ತಿಪ್ಪೇಸ್ವಾಮಿ, ರಂಗಪ್ಪ, ಸೂರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!