ಸುದ್ದಿವಿಜಯ,ಜಗಳೂರು:ಸ್ಥಗಿತಗೊಂಡಿದ್ದ ಶುದ್ದಕುಡಿಯುವ ನೀರಿನ ಘಟಕ ವಿದ್ಯುತ್ ಗ್ರೌಂಡ್ ಆಗಿ ಎಂಟಕ್ಕೂ ಹೆಚ್ಚು ಯುವಕರಿಗೆ ಶಾಕ್ ಹೊಡೆದಿದ್ದು ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಜಗಳೂರು ತಾಲೂಕಿನ ಕೆಳಗೋಟೆ ಗ್ರಾಮದಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಕಳೆದ ಮರ‍್ನಾಲ್ಕು ತಿಂಗಳಿಂದಲೂ ಆರ್‌ಓ ಘಟಕ ಬಳಕೆ ಇಲ್ಲದೇ ಮೂಲೆ ಸೇರಿತ್ತು. ಯಂತ್ರಗಳು ತುಕ್ಕು ಹಿಡಿದು ವಿದ್ಯುತ್ ವೈರ್‌ಗಳು ತುಂಡಾಗಿ ಎಲ್ಲಂದರಲ್ಲಿ ಬಿದ್ದಿವೆ.
ಬೆಳಗ್ಗೆ ಹತ್ತಾರು ಯುವಕರು ಆರ್‌ಓ ಘಟಕದ ಬಳಿ ಕುಳಿತಿದ್ದಾರೆ. ಇದ್ದಕ್ಕಿದ್ದಂತೆ ವಿದ್ಯುತ್ ಶಾಕ್ ಹೊಡೆದಿದೆ. ನೋಡು ನೋಡುತ್ತಿದ್ದಂತೆ ಮೂರು ಮಂದಿ ಯುವಕರಿಗೆ ಬೆಂಕಿ ಕಾಣಿಸಿಕೊಂಡು ಶರ್ಟ್ ಸುಟ್ಟಿವೆ.
ಇದರಲ್ಲಿ ಕರಿಬಸಪ್ಪ, ಪ್ರವೀಣ್ ಎಂಬುವರಿಗೆ ಬೆನ್ನು ಹಿಂಭಾಗ,ಕೈಗಳು ಸುಟ್ಟು ಗಾಯಗೊಂಡಿದ್ದಾರೆ. ತಕ್ಷಣವೇ ಅಲ್ಲಿಂದ ಹೊರಗಡೆ ಓಡಿ ಬಂದಿದ್ದು, ವಿದ್ಯುತ್ ಸರಬರಾಜು ಕಟ್ ಮಾಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿವಾಸಿಗಳಲ್ಲಿ ಆತಂಕ:
ಆರ್‌ಓ ಘಟಕ ಸುತ್ತಮುತ್ತಲೂ ಮನೆಗಳಿವೆ, ಪಕ್ಕದಲ್ಲಿಯೇ ಕಣಗಳಿವೆ ಬೆಂಕಿ ಜೋರಾಗಿ ಕಾಣಿಸಿಕೊಂಡಿದ್ದರೆ ದೊಡ್ಡ ಅನಾಹುತವೆ ಸಂಭವಿಸುತ್ತಿತ್ತು.
ನಿತ್ಯ ಯುವಕರು ಸೇರಿದಂತೆ ಚಿಕ್ಕ ಮಕ್ಕಳು ಆರ್‌ಓ ಘಟಕದ ಬಳಿಯ ಕೂರುತ್ತಾರೆ. ಕೆಲವರು ಆಟವಾಡುತ್ತಾರೆ. ಆಕಸ್ಮಿಕ ವಿದ್ಯುತ್ ಗ್ರೌಂಡ್ ಕೆಲವೇ ಕ್ಷಣಗಳಲ್ಲಿ ಹತ್ತಾರು ಜನರ ಬಲಿ ಪಡೆಯುತ್ತಿತ್ತು. ಆದರೆ ಯಾವುದೇ ಪ್ರಾಣ ಹಾನಿಯುಂಟಾಗಿಲ್ಲ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.
ಅಧಿಕಾರಿಗಳ ನಿರ್ಲಕ್ಷ:
ಗ್ರಾಮದ ಜನರಿಗೆ ಶುದ್ದವಾದ ನೀರು ಪೂರೈಕೆ ಮಾಡುವ ಉದ್ದೇಶದಿಂದ ಆರ್‌ಓ ಘಟಕ ಸ್ಥಾಪಿಸಲಾಗಿತ್ತು. ಆದರೆ ಹಲವು ತಿಂಗಳಿಂದಲೂ ನೀರು ಪೂರೈಕೆ ಇಲ್ಲದೇ ಸ್ಥಗಿತಗೊಂಡಿದ್ದು, ಯಂತ್ರೋಪಕರಣಗಳು ನಾಪತ್ತೆಯಾಗಿವೆ.
ಆದರೆ ಈ ಬಗ್ಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ ತೋರಿದೆ ಎಂದು ಸಾರ್ವಜನಿಕರು ಆರೋಪಿಸಿದರು.