ಸುದ್ದಿವಿಜಯ, ಜಗಳೂರು: ಪಟ್ಟಣದ ಬಿಲಾಲ್ ಚಿಕನ್ ಸೆಂಟರ್‍ನಲ್ಲಿ ಕೋಳಿ ಮಾಂಸ ತರಲು ಹೋಗಿದ್ದ ಅಶ್ವಥ್‍ರೆಡ್ಡಿ ಬಡಾವಣೆಯ ನಿವಾಸಿ ಕೃಷ್ಣ (15) ಕೋಳಿ ಸ್ವಚ್ಛಗೊಳಿಸುವ ಮಷೀನ್ ಆಕಸ್ಮಿಕವಾಗಿ ಮುಟ್ಟಿದ್ದರಿಂದ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಮಷೀನ್ ಕತ್ತರಿಸುವ ಕೋಳಿಗಳ ಕಾಲುಗಳನ್ನು ಆರಿಸಿಕೊಂಡು ಮನೆಗೆ ಕೊಂಡೊಯ್ಯುತ್ತಿದ್ದ ಯುವಕ ಕೃಷ್ಣ ಎಂದಿನಂತೆ ಮೊಹಮದ್ ರಪೀಕ್ ಮಾಲೀಕರಾಗಿರುವ ಬಿಲಾಲ್ ಚಿಕನ್ ಸೆಂಟರ್ ಬಂದಾಗ ಕೋಳಿ ಕ್ಲೀನ್ ಮಾಡುವ ಯಂತ್ರವನ್ನು ಮುಟ್ಟಿದ್ದಾನೆ. ಬಾಲಕ ಕೃಷ್ಣನಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ.
ತಕ್ಷಣ ಬಾಲಕನನ್ನು ಸ್ಥಳೀಯರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಾಗಲೇ ಕೃಷ್ಣ ಮೃತಪಟ್ಟಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಈ ಘಟನೆ ಸಂಬಂಧ ಮೃತ ಕೃಷ್ಣ ತಂದೆ ಕಾಳ್ಯ ಗೋಸಾವಿ ಅವರು ಚಿಕನ್ ಸೆಂಟರ್ ಮಾಲೀಕರಾದ ಮೊಹಮದ್ ರಫೀಕ್ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಶಾಸಕ ಬಿ.ದೇವೇಂದ್ರಪ್ಪ ಮೃತ ಬಾಲಕನ ಕುಟುಂಬಕ್ಕೆ ವೈಯಕ್ತಿವಾಗಿ 25 ಸಾವಿರ ನೀಡಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ತಮಲೇಹಳ್ಳಿ ಗುರುಮೂರ್ತಿ,
ಗುತ್ತಿಗೆದಾರ ಸುಧೀರ್, ವಕೀಲರಾದ ಲಕ್ಷ್ಮಣ, ಬರ್ಕತ್ ಆಲಿ, ಗ್ರಾಪಂ ಮಾಜಿ ಅಧ್ಯಕ್ಷ ಜಗಳೂರಯ್ಯ, ಪಪಂ ಸದಸ್ಯ ರಮೇಶ್‍ರೆಡ್ಡಿ, ತಾನಾಜಿ ಗೊಸಾಯಿ, ಮುಸ್ತಾಫಾ, ಮಂಜು ಗೊಸಾಯಿ, ಮಾಜಿ ತಾಪಂ ಅಧ್ಯಕ್ಷ ಡಿ.ಆರ್. ಹನುಮಂತಪ್ಪ, ಗೌಸ್ ಅಹಮದ್, ಪಲ್ಲಾಗಟ್ಟೆ ಶೇಖರಪ್ಪ ಮೃತ ಕುಟುಂಬದವರ ಮನೆಗೆ ಭೇಟಿ ಕೊಟ್ಟು ಹಣ ನೀಡಿ ಸಾಂತ್ವನ ಹೇಳಿದರು.