ಅಣಬೂರು ಗ್ರಾಮದಲ್ಲಿ ‘ಪ್ರೀತಿ-ಆರೈಕೆ’ ಟ್ರಸ್ಟ್ ನಿಂದ ಉಚಿತ ಆರೋಗ್ಯ ತಪಾಸಣೆ

Suddivijaya
Suddivijaya November 10, 2023
Updated 2023/11/10 at 3:17 PM

ಸುದ್ದಿವಿಜಯ, ಜಗಳೂರು: ಬಸವಾದಿ ಶರಣರ ಕಾಲದಿಂದಲೂ ಕನ್ನಡ ನಾಡಿನಲ್ಲಿ ಅನೂಚಾನವಾಗಿ ನಡೆಯುತ್ತ ಬಂದಿರುವ ಶಿಕ್ಷಣ ಮತ್ತು ಅನ್ನ ದಾಸೋಹದ ಪರಿಕಲ್ಪನೆಯನ್ನು ಆರೋಗ್ಯಕ್ಕೂ ವಿಸ್ತರಿಸಿದ್ದು ಪ್ರೀತಿ-ಆರೈಕೆ ಟ್ರಸ್ಟಿನ ಹೆಮ್ಮೆ ಮತ್ತು ಸಾರ್ಥಕತೆ ನಮ್ಮದಾಗಿದೆ ಎಂದು ದಾವಣಗೆರೆ ನಗರದ ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ. ಹೇಳಿದರು.

ಜಗಳೂರು ತಾಲೂಕಿನ ಅಣಬೂರು ಶುಕ್ರವಾರ ಗ್ರಾಮದಲ್ಲಿ ಆಯೋಜಿಸಿದ್ದ 34ನೇ ಆರೋಗ್ಯ ಉಚಿತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಏಪ್ರಿಲ್ ಅಂತ್ಯದಲ್ಲಿ ಲಿಂಗೈಕ್ಯರಾದ ಪ್ರೀತಿ ಅವರ ಸಮಾಜಮುಖಿ ಚಿಂತನೆಗಳ ಸಾಕಾರಕ್ಕಾಗಿ ಟ್ರಸ್ಟ್ ಉದ್ಘಾಟಿಸಲಾಯಿತು. ನಂತರ, ನಿರಂತರವಾಗಿ ದಾವಣಗೆರೆ ಜಿಲ್ಲಾದ್ಯಂತ ಉಚಿತವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಅತ್ಯಂತ ಕಡಿಮೆ ಅವಧಿಯಲ್ಲೇ 35ನೇ ಆರೋಗ್ಯ ಶಿಬಿರವನ್ನು ಯಶಸ್ವಿ ಮಾಡಿದ ಸಾರ್ಥಕತೆಯು ಹರ್ಷ ತಂದಿದೆ. ಬೆಳಕಿನ ಹಬ್ಬ ದೀಪಾವಳಿ ಆಚರಣೆಯ ಹೊಸ್ತಿಲಲ್ಲಿದ್ದೇವೆ. ದೀಪಗಳು ಬದುಕಿನ ಕತ್ತಲೆಯನ್ನು ಕರಗಿಸಿದರೆ, ಸಧೃಡ ಆರೋಗ್ಯವು ಮನಸ್ಸು ಮತ್ತು ದೇಹದ ಕತ್ತಲೆಯನ್ನು ಕರಗಿಸುತ್ತದೆ ಎಂದರು.

 ಜಗಳೂರು ತಾಲೂಕಿನ ಅಣಬೂರು ಗ್ರಾಮದಲ್ಲಿ ಆಯೋಜಿಸಿದ್ದ 34ನೇ ಆರೋಗ್ಯ ಉಚಿತ ಶಿಭಿರದಲ್ಲಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ. ಭಾಗವಹಿಸಿ ರೋಗಿಗಳ ತಪಾಸಣೆ ನಡೆಸುತ್ತಿರುವುದು.
 ಜಗಳೂರು ತಾಲೂಕಿನ ಅಣಬೂರು ಗ್ರಾಮದಲ್ಲಿ ಆಯೋಜಿಸಿದ್ದ 34ನೇ ಆರೋಗ್ಯ ಉಚಿತ ಶಿಭಿರದಲ್ಲಿ ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್ ಟಿ.ಜಿ. ಭಾಗವಹಿಸಿ ರೋಗಿಗಳ ತಪಾಸಣೆ ನಡೆಸುತ್ತಿರುವುದು.

ಜಗಳೂರಿನ ಮಾಜಿ ಶಾಸಕರು, ಟ್ರಸ್ಟ್ ಅಧ್ಯಕ್ಷರಾದ ಟಿ. ಗುರುಸಿದ್ದನಗೌಡರು ಮಾತನಾಡಿ, ಜನಸೇವೆಯೇ ಜನಾರ್ಧನನ ಸೇವೆ ಎಂಬ ಮಾತಿನ ಅನುಷ್ಠಾನಕ್ಕಾಗಿ ಪ್ರೀತಿ ಆರೈಕೆ ಟ್ರಸ್ಟ್ ಸ್ಥಾಪನೆ ಮಾಡಲಾಯಿತು. ಅಂದಿನಿಂದಲೂ ಹಲವು ಸಮಾಜದ ಪರವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗಿದೆ. ಮುಖ್ಯವಾಗಿ ಆರೋಗ್ಯ ಉಚಿತ ತಪಾಸಣೆ ಶಿಬಿರಗಳಿಗೆ ದಾವಣಗೆರೆ ಜಿಲ್ಲೆಯಾದ್ಯಂತ ಹೆಚ್ಚಿನ ಮನ್ನಣೆ, ಮೆಚ್ಚುಗೆ ದೊರೆತಿದೆ.

ಪಂಚಮಸಾಲಿ ಸಮಾಜದ ಮುಖಂಡರು, ಬಿಜೆಪಿ ನಾಯಕರಾದ ಎಂ.ಎಸ್. ಪಾಟೀಲ್ ಮಾತನಾಡಿ, ವೈದ್ಯಕೀಯ ಕ್ಷೇತ್ರದವರು ಕೇವಲ ಹಣ ಗಳಿಕೆಯ ಉದ್ದೇಶ ಹೊಂದಿರುತ್ತಾರೆ ಎಂಬ ಮಾತು ಅಸತ್ಯ ಎಂದು ಪ್ರೀತಿ ಆರೈಕೆ ಟ್ರಸ್ಟ್ ಕಾರ್ಯ ಚಟುವಟಿಕೆ ನೋಡಿ ಮನದಟ್ಟಾಗುತ್ತಿದೆ.ಗ್ರಾಮೀಣ ಭಾಗದ ಜನರಿಗೂ ಆರೋಗ್ಯದ ಅರಿವು, ಜಾಗೃತಿ ಮೂಡಿಸಲು ತಾವಿದ್ದಲ್ಲಿಗೇ ಬಂದು ಸೇವೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ಹೆಚ್ಚೆಚ್ಚು ಕಾರ್ಯಗಳು ನೆರವೇರುವ ಚೈತನ್ಯ ವೃದ್ಧಿಸಲಿ ಎಂದು ಆಶಿಸಿದರು. ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ತಪಾಸಣೆ ನೆರವೇರಿಸಲಾಯಿತು.

ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಾಬು, ಬಿಜೆಪಿ ಮುಖಂಡರಾದ ಗೌರಿಪುರ ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷರಾದ ಮರಿಗುಡ್ಡಪಪ್ಪ, ಗ್ರಾಪಂ ಸದಸ್ಯರಾದ ವೀರೇಶ್, ಶರಣಪ್ಪ, ನಟರಾಜು, ವಕೀಲರಾದ ಮರ್ನಹಳ್ಳಿ ಬಸವರಾಜ್,

ವೈದ್ಯರಾದ ಡಾ. ಶಾಹೀದ್, ರೂಪಾ ಎಚ್.ಕೆ, ಸಿಬ್ಬಂದಿಗಳಾದ ಐಶ್ವರ್ಯ, ಚಿತ್ರಾ, ರಂಜಿತಾ, ದೀಪಾ, ತನು, ಜ್ಯೋತಿ, ಶಿವರಾಮ್, ನಾಗರಾಜ್, ರವಿಕುಮಾರ್, ಕಲ್ಲೇಶ್, ಪ್ರಕಾಶ್, ಮಹೇಂದ್ರ, ವಿಜಯ್, ವಿನೋದ್, ಕಿರಣ್, ರಾಜ್ ಸಾಬ್, ಎಚ್.ಡಿ. ಕುಮಾರ್ ಸೇರಿದಂತೆ ಹಲವರಿದ್ದರು.

 

 

Share this Article
Leave a comment

Leave a Reply

Your email address will not be published. Required fields are marked *

error: Content is protected !!