ಸುದ್ದಿವಿಜಯ, ಜಗಳೂರು: ಇಲ್ಲಿನ ಭುವನೇಶ್ವರಿ ವೃತ್ತದಲ್ಲಿ ಸೋಮವಾರ ಡಾ. ರಾಜ್ ವಂಶ ಅಭಿಮಾನಿಗಳ ಸಂಘದಿಂದ ಕರ್ನಾಟಕ ರತ್ನ, ಪವರ್ ಸ್ಟಾರ್ ದಿ.ಡಾ.ಪುನೀತ್ ರಾಜ್ ಕುಮಾರ್ ಅವರ 2ನೇ ವರ್ಷದ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು. ಪುನೀತ್ ರಾಜ್‍ಕುಮಾರ್ ಭಾವ ಚಿತ್ರಕ್ಕೆ ವಿವಿಧ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಡಾ.ರಾಜ್ ವಂಶ ಅಭಿಮಾನಿಗಳ ಸಂಘದ ಅಧ್ಯಕ್ಷ ಎಸ್.ವಿ ಮಂಜುನಾಥ್ ಮಾತನಾಡಿ, ಪುನೀತ್ ರಾಜ್‍ಕುಮಾರ್ ಕೇವಲ ನಟನಲ್ಲ, ಸಮಾಜ ಸೇವಕರಾಗಿದ್ದರು. ಚಿಕ್ಕ ವಯಸ್ಸಿನಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರ ಸಾಧನೆ ಎಲ್ಲ ವರ್ಗದವರು ಮಾದರಿಯಾಗಿದ್ದಾರೆ ಎಂದರು.
ಪಟ್ಟಣದಲ್ಲಿ ಅಭಿಮಾನಿಗಳ ಬಳಗದಿಂದ ಪುನೀತ್ ರಾಜ್ ಕುಮಾರ್ ಅವರ ಪತ್ಥಳಿಯನ್ನು ಸ್ಥಾಪಿಸಲಾಗುವುದು. ಪ್ರತಿ ವರ್ಷ ಅವರ ನೆನಪಿನಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅನ್ನದಾಸೋಹವನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯ ಲುಕ್ಮನ್ ಉಲ್ಲಾ ಖಾನ್, ಸಂಘದ ಪದಾಧಿಕಾರಿಗಳಾದ ಗಿರೀಶ್, ಸಂತೋಷ, ಕುಬೇರ, ಪ್ರದೀಪ್, ರಾಜಪ್ಪ, ತುಷರ್, ಮಂಜುನಾಥ್, ವಿನಯ್ ಸೇರಿದಂತೆ ಮತ್ತಿತರರಿದ್ದರು.