ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜೊತೆ ಬಶೀರ್ ಅಹಮದ್ ‘ಮಾನಸ ಸರೋವರ’ ನೆನಪು

Suddivijaya
Suddivijaya August 18, 2023
Updated 2023/08/18 at 4:16 PM

ಸುದ್ದಿವಿಜಯ,ಜಗಳೂರು,(ವಿಶೇಷ): ಕನ್ನಡದ ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಸ್ನೇಹಿತ, ಒಡನಾಡಿಯಾಗಿದ್ದ ಜಗಳೂರು ಪಟ್ಟಣದ ಆಯುರ್ವೇದ ತಜ್ಞ ಜೆ.ಜೆ.ಬಶೀರ್ ಅಹಮದ್ ಅವರಿಗೂ ದಶಕಗಳ ಸ್ನೇಹ ಮಿಲನ.

ಜಗಳೂರು ಇಮ್ಮಣ್ಣ ಎಂದೇ ಹೆಸರಾಗಿರುವ ಜೆಎಂ ಇಮಾಂ ಸಾಹೇಬರ ಸಹೋದರ ಖಾಸೀಂ ಸಾಬ್ ಪುತ್ರರಾದ ಜೆ.ಜೆ.ಬಶೀರ್ ಅಹಮದ್ ಅವರಿಗೆ ಈಗ 92 ವರ್ಷ ಪೂರೈಸಿ 93ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ ಸಿನಿಮಾ ರಂಗದ ಅನೇಕ ಖ್ಯಾತ ನಟ, ನಿರ್ದೇಶಕರ ಜೊತೆ 1970-80 ರ ದಶದಲ್ಲಿ ಸಿನಿಮಾ ನಂಟು ಹೊಂದಿದ್ದ ಬಶೀರ್ ಅಹಮದ್ ನಿರ್ದೇಶಕರು ನಟ, ನಟಿಯರ ಜೊತೆ ಸ್ನೇಹ ಮತ್ತು ಸಿನಿಮಾ ಬದ್ಧತೆ ಬಗ್ಗೆ ಹೇಳುವುದು ನೋಡಿದರೆ ಅವರೊಬ್ಬ ಸಿನಿಮಾ ರಂಜಕ ಎಂದೇ ಹೇಳಬಹುದು.

ನಿರ್ದೇಶಕ ಕಣಗಾಲ್ ಜೊತೆ ಬಶೀರ್ ಅಹಮದ್ ಅವರಿಗೂ ಸಾಕಷ್ಟು ಸ್ನೇಹ ಮತ್ತು ಸಿನಿಮಾ ನಂಟಿನ ಬಗ್ಗೆ ಈಗಲೂ ತಮ್ಮ ಸ್ಮೃತಿಯಲ್ಲಿ ಅಚ್ಚಳಿಯದೆ ಉಳಿದಿದೆ. ಅವರ ನೆನಪಿನ ಬುತ್ತಿಯಲ್ಲಿ ಮಾಸದ ‘ಮಾನಸ ಸೋರವರ’ ಚಿತ್ರೀಕರಣದ ನೆನಪಿನ ಪಯಣ ನಿಜಕ್ಕೂ ಅದ್ಭುತವಾದುದು.

‘ನಾನು ಜಗಳೂರು ಸ್ನೇಹಿತರ ಜೊತೆ ಸೇರಿ ‘ಶ್ರೀದೇವಿ’ ಸಿನಿಮಾ ಮುಗಿಸಿದೆವು. ಅದನ್ನು ವೀಕ್ಷಿಸಿದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ತಮ್ಮ ಜೊತೆ ಸಲಹೆ ನೀಡಲು ಇರಿ ಎಂದು ಶೂಟಿಂಗ್ ಸ್ಪಾಟ್‍ಗೆ ಕರೆದೊಯ್ಯುತ್ತಿದ್ದರು.

ಕಣಗಾಲ್ ಅವರ ನಿರ್ದೇಶನದ ನಟ ಶ್ರೀನಾಥ್ ನಟಿಸಿರುವ ಮಾನಸ ಸರೋವರ ಶೂಟಿಂಗ್ ವೇಳೆ ನನ್ನನ್ನು ಅವರ ಜೊತೆ ಕರೆದೊಯ್ಯುತ್ತಿದ್ದರು. ಚಿತ್ರ ಮುಗಿಯುವವರೆಗೂ ಅವರ ಜೊತೆಯಲ್ಲಿದ್ದು ಸಲಹೆ ಸೂಚನೆಗಳನ್ನು ನೀಡುತ್ತಿದ್ದೆ ಎಂದು ಹಳೆಯ ನೆನಪುಗಳನ್ನು ಬಶೀರ್ ಅಹಮದ್ ಸುದ್ದಿವಿಜಯ ವೆಬ್ ನ್ಯೂಸ್ ಜೊತೆ ಮೆಲುಕು ಹಾಕಿದರು’.

ಅಷ್ಟೇ ಅಲ್ಲ ಖ್ಯಾತ ನಟಿ ದಿವಂಗತ ಜಯಂತಿ ಅವರು ಬಶೀರ್ ಅಹಮದ್ ಅವರ ಒಡನಾಡಿಯಾಗಿದ್ದರಂತೆ. ಬಳ್ಳಾರಿಗೆ ಹೋಗುವಾಗಲೆಲ್ಲ ಬಶೀರ್ ಅಹಮದ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಊಟ ಮಾಡಿಯೇ ಹೋಗುತ್ತಿದ್ದರು. ‘ಬಯ್ಯಾ’ ಎಂದು ಕರೆದು ನಮಸ್ಕರಿಸುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ಅಷ್ಟೇ ಅಲ್ಲ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮಾವ ನಟ ರಾಜೇಶ್ ಮತ್ತು ಹಿರಿಯ ಪೋಷಕ ನಟ ಅಶ್ವಥ್ ಅವರ ಜೊತೆಯೂ ಸ್ನೇಹ ಮರೆಯಾಲಾಗುವುದಿಲ್ಲ ಎಂದು ಬಶೀರ್ ಅಹಮದ್ ಸ್ಮರಿಸುತ್ತಾರೆ.

ಕಣಗಾಲ್ ಅವರು ಒಂದು ಸಿನಿಮಾ ತೆಗೆದರೆ ಅದಕ್ಕೆ ಅವರು ಜೀವ ತುಂಬುತ್ತಿದ್ದರು. ತನ್ನದೇ ಆದ ವೈಶಿಷ್ಟ್ಯವನ್ನು ಸ್ಕ್ರೀನ್ ಮೇಲೆ ಮತ್ತು ನೋಡುಗರ ಹೃದಯಕ್ಕೆ ಇಳಿಸುವ ಪ್ರಬುದ್ಧ ನಿರ್ದೇಶಕ ಅವರು. ಅವರೊಬ್ಬ ತ್ರಿಲ್ ನಿರ್ದೇಶಕ. ಗುಣಮಟ್ಟ ಬರುವವರೆಗೂ ಸ್ಕ್ರೀನ್‍ಗಳನ್ನು ತೆಗೆಯುತ್ತಿದ್ದರು ಎಂದು ಮೆಲುಕುಹಾಕಿದರು.

ಜಗಳೂರಿನಲ್ಲಿ 1950 ನಮ್ಮ ತಂದೆ ಖಾಸೀಂ ಸಾಬ್ ಭಾರತ್ ಟಾಕಿಸ್ ಕಟ್ಟಿ ಸಿನಿಮಾ ಸ್ಕ್ರಿನ್ ಮೇಲೆ ಬರುವಂತೆ ಮಾಡಿದರು. ಆಗಿನ ಸಿನಿಮಾಗಳನ್ನು ಜನ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದರು. ಆದರೆ ಕೋವಿಡ್ ನಂತರ ಟಾಕಿಸ್‍ಗಳಿಗೆ ಜನ ಬಾರದೇ ಇರುವ ಕಾರಣ ಪ್ರಸ್ತುತ ವರ್ಷ ಬಂದ್ ಆಯಿತು.

ಒಟಿಟಿಗಳ ಹಾವಳಿಯಿಂದ ಥಿಯೇಟರ್‍ಗಳು ಬಂದ್ ಆಗುತ್ತಿರುವುದು ನೋವಿನ ಸಂಗತಿ. ಹೆಚ್ಚು ಬಜೆಟ್ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಗಳಿಗೆ ಬರುತ್ತಾರೆ. ಹಾಗಾಗಿ ಸಣ್ಣ ಚಿತ್ರಗಳು ಚಿತ್ರಮಂದಿರಗಳಲ್ಲಿ ಸ್ಕ್ರೀನ್ ಮೇಲೆ ಬರುವುದು ಕಡಿಮೆಯಾಗುತ್ತಿವೆ ಎಂದು ನೋವು ತೋಡಿಕೊಳ್ಳುತ್ತಾರೆ ಜೆ.ಜೆ.ಬಶೀರ್ ಅಹಮದ್.

ತಮ್ಮ 93ನೇ ವಯಸ್ಸಿನಲ್ಲಿ ಅದ್ಭುತವಾದ ನೆನಪಿನ ಶಕ್ತಿ ಹೊಂದಿರುವ ಬಷೀರ್ ಅಹಮದ್ ಅವರಿಗೆ ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷರೂ ಆದ ಮರೇನಹಳ್ಳಿ ಗ್ರಾಮದ ಎಂ.ಎಸ್.ನಜೀರ್ ಅಹಮದ್ ಮತ್ತು ಸ್ನೇಹಿತರು ಸನ್ಮಾನಿಸಿದರು.

ಈವೇಳೆ ಬಶೀರ್ ಅಹಮದ್ ಅವರ ಮೊಮ್ಮಗ ಫರ್ವೇಜ್ ಅಹಮದ್, ನಿವೃತ್ತ ಬೆಸ್ಕಾಂ ಲೈನ್‍ಮನ್ ಮೆಹಬೂಬ್ ಸಾಬ್, ದಾನಿಸಾಬ್, ಡಿಷ್ ಖಲೀಲ್, ಫೋಟೋ ಬಾಬು, ಕಲಂದರ್, ತಿಪ್ಪೇಸ್ವಾಮಿ, ಧನ್ಯಕುಮಾರ್ ಸೇರಿದಂತೆ ಅನೇಕರು ಬಷೀರ್ ಅಹಮದ್ ಅವರನ್ನು ಸನ್ಮಾನಿಸಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!