ಸುದ್ದಿವಿಜಯ, ಜಗಳೂರು: ಬಾಳೆ ಬೆಳೆದು ಬಾಳು ಬಂಗಾರವಾಗಿಸಿಕೊಳ್ಳುವ ರೈತರ ಆಸೆಗೆ ವರುಣಾರ್ಭಟ ತಣ್ಣೀರು ಎರಚಿದೆ. ಭಾನುವಾರ ಬೀಸಿದ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಮಠದದ್ಯಾಮೇನಹಳ್ಳಿ ಗ್ರಾಮದ ಅನೇಕ ರೈತರು ಬೆಳೆದ ಕೈಗೆ ಬಂದಿದ್ದ ಬಾಳೆ ನೆಲಕ್ಕುರುಳಿ ರೈತರ ಬಾಳು ಗೋಳಾಗಿದೆ.
ನಿನ್ನೆ ಸಂಜೆಯಿಂದ ಆರಂಭವಾದ ಗುಡುಗುಸಹಿತ ಬಿರುಗಾಳಿ ಮಳೆಗೆ ಮಠದದ್ಯಾಮೇನಹಳ್ಳಿಯ ಎಂ.ಪಿ.ತಿಪ್ಪೇಸ್ವಾಮಿ ಅವರು 2 ಎಕರೆ ಗೊನೆ ಬಿಟ್ಟಿದ್ದ ಬಾಳೆ ನೆಲಕ್ಕಪ್ಪಳಿಸಿ ಅಂದಾಜು ಎರಡು ಲಕ್ಷ ರೂ ನಷ್ಟವಾಗಿದೆ. ಅದೇ ಗ್ರಾಮದ ನಾಗಭೂಷಣ್ ಅವರ ಎರಡು ಎಕರೆ ಬಾಳೆ ಸಂಪೂರ್ಣವಾಗಿ ನೆಲಕ್ಕಪ್ಪಳಿಸಿ ಅಕ್ಷರಶಃ ರಣರಂಗದಂತೆ ಕಾಣುತ್ತಿದೆ.
ಕೈಗೆ ಬಂದ ಬಾಳೆ ಸಂಪೂರ್ಣ ನೆಲಕ್ಕಪ್ಪಳಿಸಿದ್ದು 2 ಲಕ್ಷರೂ ನಷ್ಟು ನಷ್ಟವಾಗಿದೆ. ಅದೇ ರೀತಿ ಪ್ರತಾಪ್ ಮತ್ತು ತಿಪ್ಪೇರುದ್ರ ಅವರಿಗೆ ಸೇರಿದ ಎರಡು ಕೆರೆ ಬಾಳೆ ತೋಟ ಸಂಪೂರ್ಣ ಹಾಳಾಗಿದ್ದು ರೈತರಿಗೆ ಮಳೆ ವರವಾಗದೇ ಶಾಪವಾಗಿ ಪರಿಣಮಿಸಿದೆ.
ತಾಲೂಕಿನ ಸೊಕ್ಕೆ, ಮೆಲೆಮಾಚಿಕೆರೆ, ಗುರುಸಿದ್ದಾಪುರ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಇದೇ ರೀತಿ 25ಕ್ಕೂ ಹೆಚ್ಚು ಬಾಳೆ ತೋಟಗಳು ನಾಶವಾಗಿದ್ದು, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವೆಂಕಟೇಶ್ ಮೂರ್ತಿ ಸೇರಿದಂತೆ ಅನೇಕ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಸಿಡಿಲಿಗೆ ಎತ್ತು ಬಲಿ:
ಬೇವಿನ ಮರದ ಅಡಿ ಕಟ್ಟಿಹಾಕಿದ್ದ ಎತ್ತು ಭಾನುವಾರ ಸಂಜೆ ಸಿಡಿಲಿಗೆ ಬಲಿಯಾಗಿದೆ. ತಾಲೂಕಿನ ಚಿಕ್ಕ ಉಜ್ಜಿನಿ ಗ್ರಾಮದ ಚಂದ್ರಶೇಖರ್ ಸ್ವಾಮಿ ಅವರಿಗೆ ಸೇರಿದ ಅಂದಾಜು 50 ಸಾವರ ಬೆಲೆ ಬಾಳುವ ಎತ್ತು ಸಿಡಿಲಿಗೆ ಬಲಿಯಾಗಿದೆ. ಚಂದ್ರಶೇಖರ್ ಸ್ವಾಮಿ ಅವರು ಜಗಳೂರು ಪಟ್ಟಣದ ಪೊಲೀಸ್‍ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ.
ಸರಕಾರಕ್ಕೆ ವರದಿ
ಆಯಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಎಷ್ಟು ಬೆಳೆ ನಷ್ಟವಾಗಿದೆ, ಸಂಬಂಧಪಟ್ಟ ರೈತರ ಬಗ್ಗೆ ಮಾಹಿತಿ ಪಡೆಯುವಂತೆ ವಿಎಗಳಿಗೆ ಸೂಚನೆ ನೀಡಲಾಗಿದೆ. ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮತ್ತು ತೋಟಗಾರಿಕೆ ಇಲಾಖೆಯ ಎಲ್ಲ ಅಧಿಕಾರಿಗಳು ಗ್ರಾಮವಾರು ಭೇಟಿ ನೀಡಿ ಪರಿಶೀಲಿಸಿ ಸರಕಾರಕ್ಕೆ ವರದಿಸಲ್ಲಿಸಲಾಗುವುದು.
-ವೆಂಕಟೇಶ್ ಮೂರ್ತಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಜಗಳೂರು