ಸುದ್ದಿವಿಜಯ, ಜಗಳೂರು: ತಾಲೂಕಿನಾದ್ಯಂತ ಸೋಮವಾರ ಬೆಳೆಗಿನ ಜಾವ ಮತ್ತು ಮಧ್ಯಾಹ್ನ ಸುರಿದ ನಿರಂತರ ಮಳೆಗೆ ಮೂರು ಮನೆಗಳಿಗೆ ಭಾಗಶಃ ಹಾನಿಯಾಗಿವೆ ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ತಿಳಿಸಿದ್ದಾರೆ.
ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ಬಸವರಾಜಪ್ಪ ಮತ್ತು ಉಮೇಶ್‍ಗೆ ಸೇರಿದ ತಲಾ ಒಂದು ಮನೆ ಮತ್ತು ಜಗಳೂರು ಪಟ್ಟಣದ ಬುಡೇನ್ ಸಾಬ್ ಅವರ ಮನೆ ಭಾಗಶಃ ಹಾನಿಯಾಗಿದೆ.
30 ಮೇಕೆ ಸಿಡಿಲಿಗೆ ಬಲಿ:ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಡಿ ಗ್ರಾಮ ಗಡಿಗುಡಾಳ್ ನಲ್ಲಿ ಮೇಕೆ ಮತ್ತು ಕುರಿಗಳನ್ನು ಮೇಯಿಸಲು ಹೋಗಿದ್ದಾಗ ತಳವಾರ್ ಬಸವರಾಜಪ್ಪ, ಛಲವಾದಿ ಬಸವರಾಜ್ ಗೆ ಸೇರಿದ 29 ಮೇಕೆಗಳು ಮತ್ತು 1 ಕುರಿ ಸಿಡಿಲಿಗೆ ಬಲಿಯಾಗಿವೆ. ಮಳೆ ರಭಸವಾಗಿ ಬರುತ್ತಿದ್ದ ಕಾರಣ ಮರದ ಕೆಳಗೆ ನಿಲ್ಲಿಸಿಕೊಂಡ ಪರಿಣಾಮ ಸಿಡಿಲು ಬಡಿದ ಪರಿಣಾಮ 30 ಜೀವಗಳು ಬಲಿಯಾಗಿವೆ.
ಪ್ರಸ್ತುತ ವರ್ಷದಲ್ಲೇ ಸೋಮವಾರ ಧಾರಾಕಾರವಾಗಿ ಸುರಿದ ಮಳೆಗೆ ರೈತರ ಮುಖದಲ್ಲಿ ಒಂದೆಡೆ ಸಂಭ್ರಮ ಮನೆ ಮಾಡಿದ್ದರೆ ಮತ್ತೊಂದೆಡೆ ಕೈಗೆ ಬಂದ ಅಷ್ಟೊ ಇಷ್ಟೊ ಮೆಕ್ಕೆಜೋಳ, ಶೇಂಗಾ, ರಾಗಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿ ಅನ್ನದಾತರಲ್ಲಿ ದಿಗ್ಭ್ರಮೆ ಮೂಡಿಸಿದೆ.
ತಾಲೂಕಿನ ಬಿಳಿಚೋಡು, ಸೊಕ್ಕೆ ಮತ್ತು ಕಸಬ ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದ್ದು ಕೆಳಗೋಟೆ, ಬಿಳಿಚೋಡು, ಸೊಕ್ಕೆ, ಪಲ್ಲಾಗಟ್ಟೆ, ದಿದ್ದಿಗೆ, ಹೊಸಕೆರೆ, ಬಿದರಕೆರೆ, ಮೆದಗಿನಕೆರೆ, ಕಟ್ಟಿಗೆಹಳ್ಳಿ, ಅರಿಶಿಣಗುಂಡಿ, ದೊಣೆಹಳ್ಳಿ, ಜಮ್ಮಾಪುರ, ಕಲ್ಲೇದೇವರಪುರ ಗ್ರಾಮಗಳಲ್ಲಿ ಹದ ಮಳೆಯಾಗಿದೆ.
ಕೆಸರುಗೆದ್ದೆಯಾದ ರಸ್ತೆಗಳು:
ಪಟ್ಟಣದ ಒಳಭಾಗ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ವಾಹನ ಸವಾರರನ್ನು ಹೈರಾಣು ಗೊಳಿಸಿದವು. ಜೋರು ಮಳೆಯಿಂದ ಮಣ್ಣಿನ ರಸ್ತೆಗಳು ಅಕ್ಷರಶಃ ಕೆಸರು ಗದ್ದೆಗಳಂತೆ ಕಂಡವು.ಜಗಳೂರು ಪಟ್ಟಣದಲ್ಲಿ ಗುಂಡಿ ಬಿದ್ದ ರಸ್ತೆಗಳಲ್ಲಿ ವಾಹನ ಸವಾರರ ಪರದಾಟ
ಕಡಲೆ ಬಿತ್ತನೆಗೆ ಅಣಿ:
ಹಿಂಗಾರಿ ಬೆಳೆಯಾದ ಕಡಲೆ ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಸಜ್ಜಾಗಿದ್ದು ತಾಲೂಕಿನ ಹೊಸಕೆರೆ, ಬಿಳಿಚೋಡು, ಜಗಳೂರು ಪಟ್ಟಣದ ಎಪಿಎಂಸಿ ಮತ್ತು ಬಿದರಕೆರೆ ಗ್ರಾಮದ ತರಳಬಾಳು ಅಮೃತ ರೈತ ಉತ್ಪಾದಕ ಪಂಪನಿಯಲ್ಲಿ ಅಂದಾಜು 75 ಟನ್ ಬಿತ್ತನೆ ಬೀಜವನ್ನು ದಾಸ್ತಾನು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ತಿಳಿಸಿದ್ದಾರೆ.
ಪ್ರಸ್ತತ ವರ್ಷ 4 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು ಬಿತ್ತನೆ ಅವಧಿ ಅಕ್ಟೋಬರ್ 31ಕ್ಕೆ ಕೊನೆಗೊಂಡರೂ ಹದವಾದ ಮಳೆ ಸುರಿದ ಕಾರಣ ರೈತರು ಬಿತ್ತನೆ ಮಾಡಲು ಮುಂದೆ ಬರುತ್ತಿದ್ದಾರೆ. ಬಿತ್ತನೆ ಬೀಜ ತರಿಸಿ ಎಂದು ಕೇಳುತ್ತಿದ್ದಾರೆ. ಹೀಗಾಗಿ ಬೇಡಿಕೆಗೆ ತಕ್ಕಂತೆ ಬಿತ್ತನೆ ಕಡಲೆ ಬೀಜ ಪೂರೈಕೆಗೆ ಇಲಾಖೆ ಸಿದ್ದವಾಗಿದೆ ಎಂದರು.