Suddivijayanews24/5/2024
ಸುದ್ದಿವಿಜಯ,ಜಗಳೂರು:ಮಾಳಿಗೆ ಮನೆಯೊಂದು ಕುಸಿದು ಬಿದ್ದು, ಕೂದಲೆಳೆ ಅಂತರದಲ್ಲಿ ಕುಟುಂಬವು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಗಳೂರು ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಗ್ರಾಮದ ಸನಾವುಲ್ಲಾ ಎಂಬಾತನಿಗೆ ಮನೆಯೂ ಸೇರಿದ್ದು, ಗಂಡ, ಹೆಂಡತಿ, ಮಗ, ಸೊಸೆ, ಮೊಮ್ಮಕ್ಕಳು ಸೇರಿದಂತೆ 6 ಮಂದಿ ವಾಸವಿದ್ದ ಈ ಮನೆಯೂ ಸುಮಾರು 35 ವರ್ಷದ್ದಾಗಿದೆ.
ಮನೆಯೂ ಮಣ್ಣು ಮಿಶ್ರಿತ ಕಟ್ಟಡವಾಗಿದ್ದು, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಮನೆ ಸಂಪೂರ್ಣ ತೇವಾಂಶಗೊಂಡಿತ್ತು.
ಸನಾವುಲ್ಲಾ ಕುಟುಂಬದ ಸದಸ್ಯರೆಲ್ಲರು ಮನೆಯೊಳಗೆ ಇದ್ದಾಗ ಇದ್ದಕ್ಕಿದ್ದಂತೆ ಮಾಳಿಗೆಯ ಮೇಲ್ಛಾವಣಿ ಸಂಪೂರ್ಣ ಕುಸಿದು ಬಿದ್ದಿದೆ.
ಮನೆಯ ಹಾಲ್‌ನಲ್ಲಿ ಕೂತಿದ್ದ ಸನಾವುಲ್ಲಾ ಅವರ ಮೇಲೆ ಮಣ್ಣು, ಕಂಬ ಬಿದ್ದು ಸಿಕ್ಕಿಕೊಂಡಿದ್ದಾರೆ. ನೆರೆ ಮನೆಯರ ಸಹಾಯದಿಂದ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ರೂಂಗಳಲ್ಲಿದ್ದ ಕುಟುಂಬದ ಸದಸ್ಯರು ಛೀರಿಕೊಂಡು ಹೊರಗೆ ಓಡಿ ಬರುವ ವೇಳೆ ಚಿಕ್ಕ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದರಲ್ಲಿ ಮಗು ಜಾವೀದ್‌ಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದೆ.
ತಕ್ಷಣವೇ ಆಂಬ್ಯುಲೆನ್ಸ್ ಮೂಲಕ ಸನಾವುಲ್ಲಾ, ಮಗು ಜಾವೀದ್ ಇಬ್ಬರನ್ನು ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ.
ಆದರೆ ಮಗುವನ್ನು ವೈದ್ಯರ ಸಲಹೆಯಂತೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೇಲ್ಛಾವಣಿ ಕುಸಿದು ಬಿದ್ದ ರಭಸಕ್ಕೆ ಮನೆಯೊಳಗಿದ್ದ ಟಿ.ವಿ, ಅಲ್ಮೇರಾ, ಫ್ರೀಡ್ಜ್, ದವಸಧ್ಯಾನ, ಅಡುಗೆ ಸಾಮಾಗ್ರಿಗಳು, ಬೆಲೆ ಬಾಳುವ ವಸ್ತುಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ತಹಸೀಲ್ದಾರ್ ಭೇಟಿ:
ಮನೆ ಕುಸಿದ ಸುದ್ದಿ ತಿಳಿದಾಕ್ಷಣವೇ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ಕಂದಾಯ ನಿರೀಕ್ಷಕ ಧನಂಜಯ್, ಗ್ರಾಮ ಲೆಕ್ಕಾಧಿಕಾರಿ ಸರ್ವಶ್ರೀ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ತುಂಬ ಹಳೆಯ ಮನೆಗಳಿದ್ದರೆ ಮಳೆಗಾಲದಲ್ಲಿ ಎಚ್ಚರಿಕೆಯಿಂದ ಇರಬೇಕು, ಮಲಗಿದ್ದಾಗ ಇಂತಹ ಘಟನೆ ನಡೆದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು.
ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ. ತಾತ್ಕಾಲಿಕವಾಗಿ ಬೇರೆ ಕಡೆ ವಾಸ ಮಾಡಿ, ನಿಮ್ಮೊಂದಿಗೆ ತಾಲೂಕಾಡಳಿತವಿರುತ್ತದೆ ಎಂದು ಧೈರ್ಯತುಂಬಿದರು.
ಮನೆ ಹಾನಿ ಕುರಿತು ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನು ಕೊಡಿಸಲಾಗುವುದು, ಮುಂದಿನ ದಿನಗಳಲ್ಲಿ ಶಾಸಕರೊಂದಿಗೆ ಚರ್ಚಿಸಿ ಮನೆ ಮಂಜೂರು ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.