ಸುದ್ದಿವಿಜಯ, ಜಗಳೂರು: ಮಳೆಯಿಲ್ಲದೇ ಕಂಗಾಲಾಗಿದ್ದ ರೈತರಿಗೆ ಮಂಗಳವಾರ ಸಂಜೆ ಐದರ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು.
ಕನಿಷ್ಠ ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದ ಪಟ್ಟಣದ ಅನೇಕ ರಸ್ತೆಗಳ ಮೇಲೆ ನೀರು ಹರಿದು ಬ್ಯಾಗಡಿ, ಕಸ-ಕಡ್ಡಿಗಳಿಂದ ಕಟ್ಟಿಕೊಂಡಿದ್ದ ಚರಂಡಿಗಳು ಸ್ವಚ್ಛವಾದವು. ಗುಡುಗು ಸಹಿತ ಮಳೆಯ ರಭಸಕ್ಕೆ ಸಣ್ಣಪುಟ್ಟ ಗುಂಡಿಗಳಲ್ಲಿ ನೀರು ತುಂಬಿರುವ ದೃಶ್ಯ ಕಂಡು ಬಂತು.
ತಾಲೂಕಿನ ಹೊಸಕೆರೆ, ಸೊಕ್ಕೆ ಹೊಬಳಿಯ ಅನೇಕ ಗ್ರಾಮಗಳಲ್ಲಿ ಮಳೆಯಾಗಿದೆ. ಕಸಬಾ ಹೋಬಳಿಯಲ್ಲಿ ಅರ್ಧ ಭಾಗ ಮಳೆಯಾಗಿದ್ದು ಮೆದಗಿನಕೆರೆ, ಮೆದಕೇರನಹಳ್ಳಿ, ರಸ್ತೆಮಾಚಿಕೆರೆ, ಮಾಳಮ್ಮನಹಳ್ಳಿ ಜಗಳೂರು ಗೊಲ್ಲರಹಟ್ಟಿ, ಹನುಮಂತಾಪುರ, ಭರಮಸಮುದ್ರ, ದೊಣೆಹಳ್ಳಿ, ಬೆಣೆಹಳ್ಳಿ ಗ್ರಾಮದಲ್ಲಿ ಮಳೆಯಾಗಿದೆ.
ಇನ್ನು ಬಿದರಕೆರೆ, ರಸ್ತೆಮಾಕುಂಟೆ, ನಿಬಗೂರು, ಕಟ್ಟಿಗೆಹಳ್ಳಿ, ತೋರಣಗಟ್ಟೆ, ಕಲ್ಲೇದೇವರಪುರ ಗ್ರಾಮಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ಭರಮಸಮುದ್ರ ಗ್ರಾಮದಲ್ಲಿ ಮಳೆ ಗಾಳಿಯ ರಭಸಕ್ಕೆ ವಿದ್ಯುತ್ ಕಂಬಳು ಧರೆಗುರುಳಿವೆ. ಕಾಮಗೇತನಹಳ್ಳಿ ಮಾರ್ಗವಾಗಿ ಭರಮಸಮುದ್ರಕ್ಕೆ ಬರುವ ಪಾದಚಾರಿಗಳು, ಬೈಕ್‍ಸವಾರರ ಸಂಚಾರಕ್ಕೆ ಅಡ್ಡಿಯಾಯಿತು. ಕಾಮಗೇತನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಮರ ಉರುಳಿಬಿದ್ದಿತ್ತು.