ವಿಶೇಷ ವರದಿ: ಮಹಾಲಿಂಗಪ್ಪ, ಎಚ್.ಎಂ.ಹೊಳೆ ಗೊಲ್ಲರಹಟ್ಟಿ
ಸುದ್ದಿವಿಜಯ, ಜಗಳೂರು: ತಾಲೂಕಿನ ತೋರಣಗಟ್ಟೆ ಗ್ರಾಮದ ಬಳಿ ಸಮಾಧಿಯಲ್ಲಿ ಐಕ್ಯರಾಗಿರುವ ಮೆಲ್ಲಜ್ಜ ಕಾಡುಗೊಲ್ಲರ ಅವಧೂತ ಪರಂಪರೆಯ ಸಂತ ಎಂದೇ ಖ್ಯಾತಿಯಾಗಿದ್ದಾರೆ. ಅಷ್ಟೇ ಅಲ್ಲ ‘ನಡೆದಾಡುವ ಮಳೆ ದೇವರು’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಕಳೆದ ವರ್ಷ ಮಳೆ ಕೈಕೊಟ್ಟ ಕಾರಣ ರೈತಾಪಿ ವರ್ಗದ ಜನ ಮಳೆಗಾಗಿ ಪ್ರಾರ್ಥಿಸುತ್ತಿದ್ದು ಪ್ರಸ್ತುತ ವರ್ಷವೂ ಮೆಲ್ಲಜ್ಜನ ಮೊರೆ ಹೋಗಿದ್ದಾರೆ.
ಹೌದು, ತೀವ್ರ ಬರಗಾಲ ಎದುರಿಸುತ್ತಿರುವ ಜಗಳೂರು ತಾಲೂಕಿನ ಜನತೆ ಕಂಗಾಲಾಗಿದ್ದಾರೆ. ಮಳೆಗಾಗಿ ಗ್ರಾಮಗಳಲ್ಲಿ ಜಾತ್ರೆ, ರಥೋತ್ಸವಗಳು ಸೇರಿದಂತೆ ಆಯಾ ಗ್ರಾಮಗಳಲ್ಲಿ ಪ್ರತಿವರ್ಷ ನಡೆಯುವಂತೆ ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದಾರೆ.
ಆದರೂ ಮಳೆ ಧರೆಗಿಳಿಯದ ಕಾರಣ ಬುಡಕಟ್ಟು ಸಂಸ್ಕøತಿಯ ಆರಾಧ್ಯ ದೈವ ‘ಮಳೆ ಪುರುಷ’ ಎಂದೇ ಹೆಸರಾಗಿರುವ ಮೆಲ್ಲಜ್ಜನಿಗೆ ಮೊರೆ ಹೋಗಿದ್ದಾರೆ.
ಮೆಲ್ಲಜ್ಜನ ಪವಾಡ:
ಕಾಡುಗೊಲ್ಲರ ಕಲ್ಡೇರ ಬೆಡಗಿನ ಬಡಮುತ್ತಜ್ಜ, ನಾಗಮ್ಮ ದಂಪತಿಯ 2ನೇ ಪುತ್ರನಾದ ಮೆಲ್ಲಣ್ಣ ಜನಿಸುತ್ತಾರೆ. ಒಮ್ಮೆ ಮೆಲ್ಲಣ್ಣನ ಕನಸಿನಲ್ಲಿ ಯೋಗಿ ಪುರುಷನೊಬ್ಬ ಬಂದು ತನ್ನ ವಂಶದ ದೊಡ್ಡಣ್ಣ ದೇವರುಗಳ ಆತ್ಮಲಿಂಗ ದರ್ಶನ ಕೊಡುತ್ತಾರೆ.
ಅಂದಿನಿಂದ ಮೆಲ್ಲಣ್ಣನು ದೊಡ್ಡಣ್ಣ, ಬಡಣ್ಣರ ಮೂಲ ನೆಲೆಯನ್ನು ತೋರಿಸುವ ಹಂಬಲ ವ್ಯಕ್ತಪಡಿಸುತ್ತಾರೆ.ಪ್ರಳಯ ಕಾಲದ ರುದ್ರನಂತೆ ಅನೇಕ ಪವಾಡಗಳನ್ನು ಮಾಡಿ ಧಾರ್ಮಿಕ ಪುರುಷನಾಗಿ ತೋರಣಗಟ್ಟೆಯಲ್ಲೇ ನೆಲೆಸಿದ್ದಾರೆ.
ಕಂಬಳಿ ಬೀಸಿ ಮಳೆ ತರಿಸಿದರು:
ಅವಧೂತ ಖ್ಯಾತಿಯ ಮೆಲ್ಲಜ್ಜ ಹಿಂದೊಮ್ಮೆ ಇಂತಹದ್ದೇ ಬರಗಾಲ ಬಂದಾಗ ಭಕ್ತರು, ಗ್ರಾಮಸ್ಥರು ಮಳೆಗಾಗಿ ಮೆಲ್ಲಜ್ಜನ ಮೊರೆ ಹೋಗುತ್ತಾರೆ. ಭಕ್ತಿಯಿಂದ ಮೆಲ್ಲಜ್ಜನಲ್ಲಿ ಪ್ರಾರ್ಥಿಸುತ್ತಾರೆ. ಕುರಿ, ಮೇಕೆಗಳಿಗೆ, ದನ ಕರುಗಳಿಗೆ ನೀರಿಲ್ಲ, ಗುಳೇ ಹೋಗುವ ಸ್ಥಿತಿ ಬಂದಿದೆ ಎಂದು ಪರಿಪರಿಯಾಗಿ ಬೇಡುತ್ತಾರೆ.
ಆಗ ಮುಗಿಲು ನೋಡಿದ ಮೆಲ್ಲಜ್ಜ ತಾವು ಹೆಗಲ ಮೇಲೆ ಸದಾ ಹಾಕುತ್ತಿದ್ದ ಕಂಬಳಿಯನ್ನು ಬೀಸುತ್ತಾರೆ. ಪವಾಡವೆಂಬಂತೆ ಅದೇ ದಿನ ಮಳೆ ಆರಂಭವಾಗುತ್ತದೆ.
ಆ ವರ್ಷ ಸತತ ಮಳೆ ಸುರಿದು ಸುಭೀಕ್ಷ ಕಾಲ ಉಂಟಾಗಿ ದನಕರು, ಕುರಿ ಮೇಕೆಗಳಿಗೆ ಮೇವು, ಉತ್ತಮ ಬೆಳೆ ಬಂದು ಜನರು ನೆಮ್ಮದಿಯಿಂದ ಜೀವಿಸುತ್ತಾರೆ. ಇದಕ್ಕೆಲ್ಲಾ ಕಾರಣ ಪವಾಡ ಪುರುಷನ ಮೆಲ್ಲಜ್ಜನ ಮಹಿಮೆ ಎಂದು ಸ್ಮರಿಸಿದರಂತೆ.ಹೀಗೆ ಅನೇಕ ಅಪ್ರತಿಮ ಪವಾಡಗಳಿಂದ ಸುತ್ತಲ ಪ್ರದೇಶಕ್ಕೆ ಪ್ರಸಿದ್ಧರಾಗಿದ್ದ ಮೆಲ್ಲಜ್ಜ ಕ್ರಿಶ.1841ರಲ್ಲಿ ಸಮಾಧಿಯಾದ ನಂತರ ಇಲ್ಲಿ ಭಕ್ತರೆಲ್ಲ ಸೇರಿ ದೇವಸ್ಥಾನ ಕಟ್ಟಿಸಿದ್ದಾರೆ.
ಮೆಲ್ಲಜ್ಜನ ಪವಾಡಗಳು ವಿನಾಶಕಾರಿ ರೂಪದ್ದಾಗಿರದೇ ಜನರಿಗೆ ಒದಗಿ ಬರುವ ಸಂಕಷ್ಟಗಳ ನಿವಾರಣೆಯ ಜನಸ್ಪಂದನಾ ರೂಪವಾಗಿದ್ದು ಊರಿನ ಜನ ಮೆಲ್ಲಜ್ಜನ ಸೂಚನೆಯಂತೆ ಮೊದಲೆಲ್ಲ 5 ವರ್ಷಗಳಿಗೊಮ್ಮೆ ಪರವು ಆಚರಿಸಿಕೊಂಡು ಬರುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ 15 ರಿಂದ 20 ವರ್ಷಗಳಿಗೊಮ್ಮೆ ಆಚರಿಸಲಾಗುತ್ತಿದೆ.
ಬೇಡಿದಾಗ ಮಳೆ ತರಿಸುವ ಪವಾಡ ಮೆರೆದ ಮೆಲ್ಲಜ್ಜನ ಪರುವನ್ನು ತೋರಣಗಟ್ಟೆ ಗ್ರಾಮದಲ್ಲಿರುವ ಸಮಾಧಿ ಸ್ಥಳದಲ್ಲೇ ಅವರ ನೆನೆಪಿನಲ್ಲಿ ನಿಷ್ಠೆಯಿಂದ ಮೆಲ್ಲಜ್ಜನ ಪರವು ಆಚರಿಸುತ್ತಾ ಬಂದರೆ ಯಾವ ಸಂಕಟವು ಬರುವುದಿಲ್ಲ ಎಂಬುದು ನಂಬಿಕೆ.
ಸೋಮವಾರ ವಿಶೇಷ ಪೂಜೆ: ತೋರಣಗಟ್ಟೆಯ ಮೆಲ್ಲಜ್ಜನ ಗುಡಿಯಲ್ಲಿ ಪ್ರತಿ ಸೋಮವಾರ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅಂದು ಸುತ್ತಮುತ್ತಲ ಗ್ರಾಮದವರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸೇರುತ್ತಾರೆ.
ಮೆಲ್ಲಜ್ಜನಲ್ಲಿ ಮಳೆಗಾಗಿ ಮೊರೆ!
ಮಳೆಗಾಗಿ ಮೆಲ್ಲಜ್ಜನ ಮೊರೆ ಹೋಗುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪವಾಡ ಪುರುಷ ಮೆಲ್ಲಜ್ಜನಲ್ಲಿ ಮಳೆಗಾಗಿ ಪ್ರಾರ್ಥಿಸುತ್ತಿದ್ದಾರೆ.
ಪವಾಡ ಪುರುಷ ಮೆಲ್ಲಜ್ಜನ ಪವಾಡ ಒಂದೆರಡಲ್ಲ. ಅಂಗೈ ಅಗಲ ಮೋಡವಿದ್ದಾಗ ಕಂಬಳಿ ಬೀಸಿ ಮಳೆ ತರಿಸಿದ್ದಾರೆ. ಈಗ ಸಂಕಷ್ಟ ಎದುರಾಗಿದೆ. ಭಕ್ತಿಯಿಂದ ನಾವೆಲ್ಲ ಮಳೆಗಾಗಿ ಮೆಲ್ಲಜ್ಜನ ಮೊರೆ ಹೀಗಿದ್ದೇವೆ. ಈ ವರ್ಷ ಉತ್ತಮ ಮಳೆ ಬರುತ್ತದೆ ಎನ್ನುವ ನಂಬಿಕೆಯಿದೆ ಎಂದು ಗ್ರಾಮದ ಜಿ.ಬಿ.ಜೀವಣ್ಣ ಭರವಸೆ ವ್ಯಕ್ತಪಡಿಸಿದ್ದಾರೆ.
ಹಿರಿಯ ಸಾಹಿತಿ ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್ ಬರೆದಿರುವ ಜಗಲೂರು ಸೀಮೆಯ ಜಾತ್ರೆಗಳು ಕೃತಿಯಲ್ಲಿ ಬುಡಕಟ್ಟು ವೀರರ ಪರುವುಗಳಲ್ಲಿ ತೋರಣಗಟ್ಟೆ ಮೆಲ್ಲಜ್ಜನ ಪವಾಡಗಳ ಬಗ್ಗೆಯೂ ಪ್ರಸ್ತಾಪವಾಗಿದ್ದು, ಮೆಲ್ಲಜ್ಜನ ವಾಸ್ತವ ಘಟನೆಗಳನ್ನು ನಮೂದಿಸಿರುವುದು ವಿಶೇಷ.