ಸುದ್ದಿವಿಜಯ, ಜಗಳೂರು: ತಾಲೂಕಿನ ಗೌರಿಪುರ ಗ್ರಾಮದ ರಾಮಕೃಷ್ಣನ ಕೊಲೆ ಖಂಡಿಸಿ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಕರುನಾಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಅರುಣಕುಮಾರ್ ನೇತೃತ್ವದಲ್ಲಿ ಮಂಗಳವಾರ ನೂರಾರು ಕಾರ್ಯಕರ್ತರು ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಇದೇ ಜ.7 ರಂದು ಕರುನಾಡ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಿ.ರಾಮಕೃಷ್ಣ ಅವರನ್ನು ಹೊಸಕೆರೆ ಡಾಬಾವೊಂದರಲ್ಲಿ ಹತ್ಯೆ ಮಾಡಲಾಗಿತ್ತು. ಸಾಮಾಜಿಕ ಹೋರಾಟಗಾರರಾದ ಅವರು ಕ್ಯಾಸೇನಹಳ್ಳಿ ಸೇರಿದಂತೆ ವಿವಿಧ ಗ್ರಾಪಂಗಳಲ್ಲಿ ನಡೆದ ಮನರೇಗಾ ಯೋಜನೆ ಅಡಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಕೇಳಿದ್ದಕ್ಕೆ ಪಿಡಿಒ ಎ.ಟಿ.ನಾಗರಾಜ್ ಮತ್ತು ಅವರ ಬೆಂಬಲಿಗರು ಹತ್ಯೆ ಮಾಡಿದ್ದಾರೆ. ಈಗಾಗಲೇ ಪ್ರಮುಖ ಆರೋಪಿ ಪೊಲೀಸರಿಗೆ ಶರಣಾಗಿದ್ದಾರೆ.
ಉಳಿದ ಆರೋಪಿಗಳು ತಲೆ ಮರೆಸಿಕೊಂಡಿದ್ದು ಹತ್ಯೆಗೊಳಗಾದ ರಾಮಕೃಷ್ಣ ಅವರ ಬಡ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಉದಯಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ರಾಜ್ಯ ಕಾರ್ಯದರ್ಶಿ ಕೆಂಪೇಗೌಡ್ರು, ರಾಜ್ಯ ಮಹಿಳಾ ಅಧ್ಯಕ್ಷೆ ರಾಜೇಶ್ವರಿ, ಜಿಲ್ಲಾಧ್ಯಕ್ಷ ಬಿಳಿಚೋಡು ಚನ್ನಬಸಪ್ಪ, ಪ್ರೇಮಕುಮಾರ್, ಮಾರುತಿ, ಲಿಂಗರಾಜ್, ಹೊಯ್ಸಳ, ಶೃತಿ, ಚಳ್ಳಕೆರೆ ಜಿ.ಪುಟ್ನಂಜ, ಪಾಲಯ್ಯ, ಮೊಳಕಾಲ್ಮೂರು ಪಾಪಣ್ಣ, ಸೇರಿದಂತೆ ಭಾಗವಹಿಸಿದ್ದರು.