ರಂಗಯ್ಯನ ದುರ್ಗ ಕೊಂಡುಕುರಿ ಕಾಡಿಗೆ ಕೊಡಲಿ ಪೆಟ್ಟು, ಅರಣ್ಯಾಧಿಕಾರಿಗಳ ನಿರ್ಲಷ್ಯಕ್ಕೆ ಮರಗಳ ಮಾರಣಹೋಮ!

Suddivijaya
Suddivijaya July 8, 2023
Updated 2023/07/08 at 3:11 AM

ಸುದ್ದಿವಿಜಯ,ಜಗಳೂರು: ಅದು ಏಷ್ಯದಲ್ಲಿಯೇ ಎಲ್ಲೂ ಕಾಣಸಿಗದ ಅಪರೂಪದ ವನ್ಯಜೀವಿ ನಾಲ್ಕು ಕೊಂಬಿನ ಜಿಂಕೆ ಪ್ರಭೇದದ ಕೊಂಡುಕುರಿಗಳ ಆವಾಸಸ್ಥಾನ. ಆದರೆ ಮರಗಳ್ಳರ ಕಡಿತಲೆಗೆ ಸಿಲುಕಿ ಕಾನನ ಲೂಟಿ ಆಗುತ್ತಿದ್ದರೂ ಅರಣ್ಯ ಅಧಿಕಾರಿಗಳು ಮಾತ್ರ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬ ರೀತಿಯಲ್ಲಿ ಕಣ್ಮುಚ್ಚಿಕೊಂಡು ಕೆಲಸ ಮಾಡುತ್ತಿದ್ದಾರೆ.

ಹೌದು, ಜಗಳೂರು ತಾಲೂಕಿನ ಹಚ್ಚ ಹಸಿರಿನ ಕಾನನ ರಂಗಯ್ಯನ ದುರ್ಗ ಅಭಯಾರಣ್ಯ.2011ರ ಜನವರಿ 10ರಂದು ರಾಜ್ಯ ಸರಕಾರ ಕೊಂಡುಕುರಿ ವನ್ಯಧಾಮ ಎಂದು ಇದನ್ನು ಘೋಷಿಸಿತ್ತು. ಇದರ ವ್ಯಾಪ್ತಿ 77.23 ಚದರ ಕಿ.ಮೀ. ಆದರೆ ಇದರ ವ್ಯಾಪ್ತಿ ಪ್ರಸ್ತುತ ಕುಗ್ಗುತ್ತಿದೆ.

ಶ್ರೀಗಂಧ, ಹೊಳೆಮತ್ತಿ, ಕಮರಾ, ದಿಂಡಗ, ಕಾಚು, ಮರಾಲೆ, ಪಚಾಲಿ, ಜಾನೆ, ಹೊನ್ನೆ, ನಗರಿ, ಬೆಟ್ಟದ ತಾವರೆಯಂತಹ ಗಿಡಮರಗಳಿದ್ದು, ಆಯುರ್ವೇದಕ್ಕೆ ಬಳಸುವ ಬೆಟ್ಟದ ನೆಲ್ಲಿ, ಕಾಡು ಕೊತ್ತಂಬರಿ, ಮಧುನಾಶಿನಿ, ಮೆಕ್ಕೆಗಿಡ (ಹೃದಯ ರೋಗಿಗಳಿಗೆ ದಿವ್ಯೌಷಧಿ), ಕಾಡು ಈರಳ್ಳಿ (ಪಶು ಚಿಕಿತ್ಸೆಗೆ ಬಳಸುತ್ತಾರೆ), ಆಲಿಕಾ-ಉಳ್ಳಿಕಾ, ತೊಟ್ಲುಕಾಯಿ, ಅಳಿಲು ಕಾಯಿ, ಧೂಪದಂತಹ ಔಷಧಿ ಸಸ್ಯಗಳು ಇವೆ.

ಕೇರಳದ ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಾಣಿಸುವ ಲೆಮನ್ ಗ್ರಾಸ್ ನಂತಹ ಔಷಧಿ ಸಸ್ಯ ಸಮೃದ್ಧವಾಗಿ ಬೆಳೆದಿದೆ. ಕೃಷ್ಣಮೃಗ, ಚಿರತೆ, ಕರಡಿ, ಕೊಂಡುಕುರಿ, ನಕ್ಷತ್ರ ಆಮೆ, ತೋಳ, ಕತ್ತೆ ಕಿರುಬ, ಕಾಡುಬೆಕ್ಕು, ಚಿಪ್ಪು ಹಂದಿ ಉಡ, ನವಿಲು ಇದ್ದು, ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಂಡುಬರುವ ‘ದರವಾಯಿನ’ ಎಂಬ ಹಕ್ಕಿ ಇಲ್ಲಿನ ಅರಣ್ಯ ವಲಯದಲ್ಲಿದೆ.

ರಂಗಯ್ಯನದುರ್ಗ ಅರಣ್ಯ ವಲಯ ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಕಪ್ಪತಗುಡ್ಡ ಮಾದರಿಯಲ್ಲಿದೆ. ಆಯುರ್ವೇದ ಔಷಧಿ ಸಸ್ಯಗಳ ಜತೆಗೆ ಅಳಿವಿನಂಚಿನಲ್ಲಿರುವ ಅತ್ಯಂತ ನಾಚಿಕೆ ಸ್ವಭಾವದ ಕೊಂಡುಕುರಿಯಂತಹ ಅಮೂಲ್ಯ ಪ್ರಾಣಿ ಸಂಕುಲ ಹೊಂದಿರುವ ರಾಜ್ಯದ ಏಕೈಕ ಅರಣ್ಯ ಪ್ರದೇಶವಾಗಿದೆ.

ಆದರೆ ಅರಣ್ಯಾಧಿಕಾರಿಗಳು, ಅರಣ್ಯ ಪಾಲಕರ ನಿಶ್ಕಾಳಜಿಯಿಂದ ಕಾಡಿಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಹೀಗಾಗಿ ಅಪರೂಪದ ಮರಗಳು ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿರುವುದಕ್ಕೆ  ಅರಣ್ಯ ಪ್ರದೇಶಕ್ಕೆ ಭೇಟಿ ಕೊಟ್ಟಾಗ ಕಡಿದ ಮರಗಳ ಸೊಂಗೆಗಳೆ ಸಾಕ್ಷಿ.

ಕಾಡಿನಲ್ಲಿ ಮರಳು ಗಣಿಗಾರಿಕೆ:

ಮಳೆಬಂದಾಗ ಸ್ವಾಭಾವಿಕವಾಗಿ ಬೆಟ್ಟದಿಂದ ಹರಿಯುವ ನೀರು ಮರಳನ್ನು ಹೊತ್ತು ತರುತ್ತದೆ. ತಾರೆಹಳ್ಳಿ ಕೆರೆಬಳಿ ಮರಳಿನ ದಿಬ್ಬಗಳು ಸೃಷ್ಟಿಯಾಗಿವೆ.

ಸದ್ಯ ಕೆರೆಯಲ್ಲಿ ನೀರಿಲ್ಲದ ಕಾರಣ ಮರಳುಗಳ್ಳರು ಸರಾಗವಾಗಿ ಟ್ಯಾಕ್ಟರ್ ಮತ್ತಿತರ ವಾಹನಗಳ ಮೂಲಕ ರಾತ್ರೋರಾತ್ರಿ ಮರಳು ಸಾಗಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅರೋಪಿಸಿದ್ದಾರೆ.

ಅರಣ್ಯ ಅಧಿಕಾರಿಗಳ ಕರ್ತವ್ಯದಲ್ಲಿ ಲೋಪ:

ರೈತರು ಬೆಳೆಯುವ ಟೊಮೆಟೊ, ಸವತೆ ಬಳ್ಳಿ, ಈರೇಬಳ್ಳಿ, ಆಗಲ ಬಳ್ಳಿಗಳನ್ನು ಕಟ್ಟಲು ಕಾಡಿನಲ್ಲಿ ಉದ್ದವಾಗಿ ಬೆಳೆಯುವ ಬೆಲೆ ಬಾಳುವ ಮರಗಳನ್ನು ಎಳೆವೆಯಲ್ಲೇ ಕಟಾವು ಮಾಡುತ್ತಿದ್ದರೂ ಕಾಡು ರಕ್ಷಿಸಬೇಕಾದ ವನಪಾಲಕರು, RFO ಮಹೇಶ್ ನಾಯ್ಕ್ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂಬುದು ವನ್ಯಜೀವಿ ಮತ್ತು ಪರಿಸರಾಸಕ್ತರ ಆರೋಪವಾಗಿದೆ.

ಕುರಿಗಾಹಿಗಳು ಕುರಿ ಮೇಯಿಸಲು ರಂಗಯ್ಯನ ದುರ್ಗ ಅಭಯಾರಣ್ಯದಲ್ಲಿ ಅವಕಾಶವಿಲ್ಲ. ಕೊಡಲಿ ಮತ್ತಿತರ ಆಯುಧಗಳನ್ನು ಒಯ್ಯುವಂತಿಲ್ಲ. ಆದರೆ ಆ ಎಲ್ಲ ಆಯುಧಗಳನ್ನು ಒಯ್ಯಲು ಕುರಿಗಾಹಿಗಳಿಗೆ ಕಾನೂನು ಮೀರಿ ಅವಕಾಶ ನೀಡಲಾಗಿದೆ ಎಂಬ ಅರೋಪ ಕೇಳಿಬಂದಿದೆ.

ಕಾಡಂಚಿನ ಗ್ರಾಮದ ಬುಡಕಟ್ಟು ಸಂಸ್ಕøತಿಯ ಜನರು ತಮ್ಮ ಸೂರಿಗಾಗಿ ಒಂದು ಮರ ಕಡಿದರೆ ಕೇಸ್ ದಾಖಲಿಸುವ ಅರಣ್ಯ ಅಧಿಕಾರಿಗಳು, ಲೂಟಿ ಮಾಡುವ ಕಾಡುಗಳ್ಳರ ವಿರುದ್ಧ ಎಷ್ಟು ಪ್ರಕರಣ ದಾಖಲಿಸಿದ್ದಾರೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ಅರಣ್ಯ ಅಧಿಕಾರಿಗಳೇ ಶಾಮೀಲು?:

ಬೆಲೆ ಬಾಳುವ ಮರಗಳು, ಅಕ್ರಮ ಮರಳು ಸಾಗಾಣೆ ತಮ್ಮ ಕಾಲು ಬುಡದಲ್ಲೇ ನಡೆಯುತ್ತಿದ್ದರೂ ಏನೂ ಗೊತ್ತಿಲ್ಲದಂತೆ ಅಧಿಕಾರಿಗಳು ಜಾಣ ಕುರುಡು ಮೆರೆಯುತ್ತಿದ್ದಾರೆ. ಹೀಗಾಗಿ ಅಕ್ರಮ ಎಸಗುವವರಿಗೆ ಕೈ ಜೋಡಿಸಿದ್ದಾರಾ ಎಂಬ ಪ್ರಶ್ನೆ ಉದ್ಭವಾಗುದೆ.

ದೊಡ್ಡಮಟ್ಟದ ಕಡಿತಲೆ:

ರಂಗಯ್ಯನ ದುರ್ಗ ಅರಣ್ಯ ವಾಪ್ತಿಯಲ್ಲಿ ಬರುವ ಗೋಡೆ, ತಾರೆಹಳ್ಳಿ, ಕೆಚ್ಚೇನಾಹಳ್ಳಿ, ಕೆಲಗೋಟೆ, ಚಿಕ್ಕಮ್ಮನಹಟ್ಟಿ, ಐನಹಳ್ಳಿ ಕಣ್ವಕುಪ್ಪೆ, ಗುಡ್ಡದಲಿಂಗಣ್ಣನಹಳ್ಳಿ,ಉರ್ಲಕಟ್ಟೆ, ಮಡ್ರಳ್ಳಿ, ಮಾಗಡಿ, ಬಸವನಕೋಟೆ, ಸಿದ್ದಮ್ಮನಹಳ್ಳಿ, ಮಲೆಮಾಚಿಕೆರೆ, ಹೊಸಕೋಟೆ ಸೇರಿದಂತೆ 38 ಕಾಡಂಚಿನ ಗ್ರಾಮಗಳ್ಳಿ ಮರಗಳ ಮಾರಣ ಹೋಮ ವ್ಯಾಪಕವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ತಲೆ ಕಡೆಸಿಕೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದರಿಂದ ಸೂಕ್ಷ್ಮ ವನ್ಯಜೀವಿಗಳಾದ ಕೊಂಡುಕುರಿ, ಮೊಲ, ನವಿಲು, ಕಾಡು ಹಂದಿಗಳು ಘಾಸಿಗೊಂಡಿವೆ. ಜೊತೆಗೆ ಕಾಡು ಪ್ರಾಣಿಗಳ ಬೇಟೆ ಎಗ್ಗಿಲ್ಲದೆ ಸಾಗಿದ್ದು ಕಾಡು ಮತ್ತು ಮಧ್ಯೆ ಮಾನವನ ಪ್ರವೇಶಕ್ಕೆ ಅಲ್ಲಿ ಅನೇಕ ಸಾಕ್ಷಿಗಳು ದೊರಕುತ್ತವೆ.

ಜೊತೆಗೆ ಕಾಡಿನಲ್ಲಿ ಮದ್ಯ ಪ್ರಿಯರು ಪಾರ್ಟಿ ಮಾಡಿ ಬಿಸಾಡಿ ಹೋಗಿರುವ ಬಾಟಲ್, ಸ್ಯಾಚೆಟ್ ಗಳನ್ನು ಕಾಣಬಹುದು. ಅರಣ್ಯ ವಲಯಕ್ಕೆ ನೇಮಿಸಿರುವ ಕಾವಲುಗಾರರು ಮತ್ತು ಆರ್ ಎಫ್‍ಒ ಸರಿಯಾಗಿ ಕರ್ತವ್ಯ ನಿರ್ವಹಿಸದೇ ಇರುವುದರಿಂದ ಇಲ್ಲಿ ನೈಸರ್ಗಿಕವಾಗಿ ಬೆಳೆದು ನಿಂತಿರುವ ಗಿಡಮೂಲಿಕೆ ಸಸ್ಯ ಮತ್ತು ವನ ಸಂಪತ್ತು ಲೂಟಿಕೋರರ ದಾಳಿಗೆ ತುತ್ತಾಗತೊಡಗಿದೆ ಎಂದು ಪರಿಸರವಾದಿಗಳು ಹೇಳುತ್ತಾರೆ.

          ಅರಣ್ಯದಲ್ಲಿ ಕಡಿತಕೆ ಆಗಿಲ್ಲ

ರಂಗಯ್ಯನ ದುರ್ಗ ಅರಣ್ಯ ಪ್ರದೇಶದಲ್ಲಿ ಯಾವುದೇ ಅರಣ್ಯ ಕಡಿತಲೆ ಆಗಿಲ್ಲ. ಸ್ಥಳೀಯರೊಬ್ಬರು ಮೊನ್ನೆ ಮರ ಕಡಿಯುವಾಗ ಸಿಕ್ಕಿಬಿದ್ದಿದ್ದು ಅವರ ವಿರುದ್ದ ಪ್ರಕರಣ ದಾಖಲಿಸಿದ್ದೇವೆ.-

ಮಹೇಶ್ ನಾಯ್ಕ್, ಅರಣ್ಯ ಅಧಿಕಾರಿ, ರಂಗಯ್ಯನದುರ್ಗ ಅರಣ್ಯ ವಲಯ.

ಸಮಗ್ರವಾಗಿ ತನಿಖೆಯಾಗಲಿ

ನಮ್ಮ ಮನೆಗಳು ಮಳೆ ಗಾಳಿಗೆ ಸೋರುತ್ತಿವೆ. ಅರಣ್ಯದಲ್ಲಿ ಕಡಿದು ಮನೆ ಕಟ್ಟಿಕೊಳ್ಳಲು ಒಂದೆರಡು ಮರಗಳನ್ನು ಕಡಿದರೆ ಕೇಸ್ ದಾಖಲಿಸುತ್ತಾರೆ. ಆದರೆ ಅರಣ್ಯದಲ್ಲಿ ಸಾವಿರಾರು ಮರಗಳ ಕಡಿತಲೆಯಾಗಿದೆ. ಯಾರು ಕಡಿದ್ದಾರೊ ಅವರ ಮೇಲೆ ಪ್ರಕರಣ ದಾಖಲಾಗಲಿ. ತಪ್ಪಿತಸ್ಥರಿಗರ ಶಿಕ್ಷೆಯಾಗಲಿ ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಕ್ರಮ ಚಟುವಟಿಕೆಗಳ ತಾಣವಾಗುತ್ತಿದೆ.

ಏಷ್ಯಾದಲ್ಲಿ ಅಪರೂಪದ ಪ್ರಬೇಧದ ಕೊಂಡುಕುರಿ ಇರುವ ಅರಣ್ಯದಲ್ಲಿ ಇತ್ತೀಚೆಗೆ ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿದೆ. ರಾತ್ರಿ ವೇಳೆ ನೈಟ್ ವಾಚರ್ಸ್‍ಗಳು ಶಾಮೀಲಾಗಿ ಅರಣ್ಯ ಕಳ್ಳರಿಗೆ ಸಾಥ್ ನೀಡುತ್ತಿದ್ದರೆ. ತಡೆ ಬೇಲಿ ಇಲ್ಲ. ಕಾಡಂಚಿನ ಗ್ರಾಮಗಳಿಗೆ ಕರಡಿ, ಕಿರುಬಗಳು, ಚಿರತೆಗಳು ದಾಳಿ ಮಾಡುತ್ತಿವೆ ಆದರೆ ಜನರಿಗೂ ರಕ್ಷಣೆಯಿಲ್ಲದಂತಾಗಿದೆ.

-ಜೆ.ಮಹಲಿಂಗಪ್ಪ, ಹೋರಾಟಗಾರ, ಜಗಳೂರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!