ಸುದ್ದಿವಿಜಯ,ಜಗಳೂರು:ದೇಶಕ್ಕೆ ಬೆನ್ನೆಲುಬಾದ ರೈತರಿಗೆ ಬೆಂಬಲ ಬೆಲೆ ಇಲ್ಲದೆ ಸರಕಾರಗಳು ಬೆನ್ನು ಮೂಳೆ ಮುರಿಯುತ್ತಿವೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ತಾಯಿಟೋಣಿ ಗ್ರಾಮದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಹಮ್ಮಿಕೊಂಡಿದ್ದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೇ ಸಂಕಷ್ಟದಲ್ಲಿ ಬದುಕುವಂತವಾಗಿದೆ. ರೈತರು ಬೆಳೆದ ಬೆಳೆಗಳು ವರ್ಷದಿಂದ ವರ್ಷಕ್ಕೆ ಬೆಲೆ ಕಡಿಮೆಯಾದರೆ, ಸರಕಾರಿ ನೌಕರರಿಗೆ ವೇತನ ದ್ವಿಗುಣವಾಗಿ ಬೆಳೆಯುತ್ತಿದೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು ನಿಜವಾಗಿಯೂ ರೈತರಿಗೆ ಸರಕಾರಗಳು ನೆರವು ನೀಡಬೇಕು.
ಒಮ್ಮೆ ರೈತರು ಭೂಮಿಗೆ ಬಿತ್ತನೆ ಮಾಡಿ ಬೆಳೆ ತೆಗೆಯದಿದ್ದರೇ ಅನ್ನವಿಲ್ಲದೇ ಮನುಷ್ಯ ಸೇರಿದಂತೆ ಪ್ರಾಣಿ ಪಕ್ಷಿಗಳ ಸಂಕುಲವೇ ನಾಶವಾಗುತ್ತದೆ ಇದನ್ನು ನಮ್ಮನ್ನಾಳುವ ನಾಯಕರುಗಳು ಅರ್ಥ ಮಾಡಿಕೊಳ್ಳಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ ಹೊಳೆ ಚಿರಂಜೀವಿ ಮಾತನಾಡಿ, ರೈತರ ಬಗ್ಗೆ ಯಾರಿಗೂ, ಯಾವ ಪಕ್ಷಕ್ಕೂ ಕಾಳಜಿ ಇಲ್ಲ.
ಯಾವ ಸರಕಾರಗಳು ರೈತರನ್ನು ಉದ್ದಾರ ಮಾಡುವುದಿಲ್ಲ. ಬಿತ್ತನೆ ಬೀಜ , ಗೊಬ್ಬರ ವಿದ್ಯುತ್ ನೀಡುವಲ್ಲಿ ಸರಕಾರಗಳು ವಿಫಲವಾಗಿವೆ. ಎಲ್ಲಾ ರೀತಿಯ ಸೌಕರ್ಯಗಳನ್ನು ಕಲ್ಪಿಸಿದರೆ ನಗರ ಪ್ರದೇಶಗಳಿಗೆ ವಲಸೆ ಹೋಗು ರೈತರನ್ನು ತಪ್ಪಿಸಬಹುದು ಎಂದು ತಿಳಿಸಿದರು.
ರೈತರು ವ್ಯವಸಾಯದ ಮೇಲೆ ತೆಗೆದುಕೊಂಡಿರುವ ಎಲ್ಲಾ ಸಾಲವನ್ನು ಮನ್ನಾ ಮಾಡಲು ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು. ಬೆಳೆಗಳಿಗೆ ಬೆಂಬಲ ಬೆಲೆ ಇತರೆ ಸಮಸ್ಯೆಗಳನ್ನುಬಗೆಹರಿಸಿಕೊಳ್ಳಬೇಕಾದರೇ ರೈತರು ಒಗ್ಗಟ್ಟಿನಿಂದ ಸಂಘಟಿತರಾಗಿ ಹೋರಾಟದ ಮೂಲಕ ನ್ಯಾಯ ಪಡೆಯಬೇಕಾಗಿದೆ ಎಂದರು.
ಪ್ರಗತಿಪರ ಹೋರಾಟಗಾರ ಎಚ್.ಎಂ ಹೊಳೆ ಮಹಾಲಿಂಗಪ್ಪ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಳು ಕಳೆದರೂ ರೈತರ ಸಮಸ್ಯೆಗಳನ್ನು ಪರಿಹರಿಸಲು ಸರಕಾರಗಳಿಂದ ಸಾಧ್ಯವಾಗಿಲ್ಲ. ಯುವ ಜನತೆ ಒಗ್ಗಟ್ಟಿನಿಂದ ಹೋರಾಟ ಮಾಡಬೇಕು, ವಿದ್ಯಾವಂತರು ಸೇರಿದಂತೆ ಗ್ರಾಮೀಣ ಜನರ ವಲಸೆ ಹೆಚ್ಚಿದ್ದು, 2025ಕ್ಕೆ 53 ಕೋಟಿಯಷ್ಟು ಜನರು ನಗರದಲ್ಲಿ ಕೇಂದ್ರಿಕೃತವಾಗಲಿದ್ದಾರೆ.
ಸರ್ಕಾರಗಳು ಈಬಗ್ಗೆ ಗಮನಹರಿಸಬೇಕಾಗಿದೆ. ಇಲ್ಲದಿದ್ದರೇ ಆಹಾರ ಉತ್ಪಾದನೆ ಸೇರಿದಂತೆ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ನಗರ ಘಟಕದ ಅಧ್ಯಕ್ಷ ಬೈರನಾಯಕನಹಳ್ಳಿ ರಾಜು, ರೈತ ಮುಖಂಡಾದ ಕಾನನಕಟ್ಟೆ ತಿಪ್ಪೇಸ್ವಾಮಿ, ಹೊನ್ನೂರು ಅಲಿ, ದಿಬ್ಬದಹಳ್ಳಿ ಗಂಗಾಧರಪ್ಪ, ಮಹಾದೇವರೆಡ್ಡಿ, ಸಣ್ಣ ಪಾಲಜ್ಜ, ಅರವಿಂದ್ ಪಾಟೀಲ್, ಪರಸಪ್ಪ ಮಡ್ರಳ್ಳಿ, ಚಿಕ್ಕ ಉಜ್ಜಯಿನಿ ಸುಪುತ್ರ, ಕಲ್ಲೇದೇವರಪುರ ಮೇಘನಾಥ್, ಅಂಜಿನಪ್ಪ, ಚಿಕ್ರೇಶ್ ಸೇರಿದಂತೆ ಮತ್ತಿತರಿದ್ದರು.