ಜಗಳೂರು ಪಟ್ಟಣದ ರಸ್ತೆ ವಿಸ್ತರಣೆಗೆ ವಕೀಲರ ಆಗ್ರಹ

Suddivijaya
Suddivijaya July 10, 2024
Updated 2024/07/10 at 3:17 PM

suddivijaynews10/07/2024

ಸುದ್ದಿವಿಜಯ, ಜಗಳೂರು: ಪಟ್ಟಣದ ದಾವಣಗೆರೆ-ಚಳ್ಳಕೆರೆಗೆ ಸಂಪರ್ಕ ಕಲ್ಪಿಸುವ ಮಲ್ಪೆ ಮೊಳಕಾಲ್ಮೂರು ಹೆದ್ದಾರಿಯನ್ನು ವಿಸ್ತರಣೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಬುಧವಾರ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಅವರ ನಿವಾಸದಲ್ಲಿ ಮನವಿ ಸಲ್ಲಿಸಿದರು.

ತಾಲೂಕು ಕೇಂದ್ರವಾಗಿರುವ ಜಗಳೂರು ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ದಿಗೊಳ್ಳುತ್ತಿದೆ. ಹಲವು ದಶಕಗಳಿಂದ ರಸ್ತೆ ವಿಸ್ತರಣೆಮಾಡದ ಕಾರಣ ಚಳ್ಳಕೆರೆ ಟೋಲ್ ಗೇಟ್ ನಿಂದ ದಾವಣಗೆರೆ ರಸ್ತೆಯ ನ್ಯಾಯಾಲಯದವರೆಗೂ ಕಿರಿದಾದ ರಸ್ತೆಯಲ್ಲಿ ಸರಕು ಹೊತ್ತ ಬೃಹತ್ ವಾಹನಗಳು, ಬಸ್, ದ್ವಿಚಕ್ರವಾಹನಗಳು ಹಾಗೂ ಪಾದಾಚಾರಿಗಳು ಸಂಚರಿಸುಬೇಕಾದ ಅನಿವಾರ್ಯತೆಯಿದೆ.

ವಾಹನ ದಟ್ಟಣೆಯಿಂದ ಪ್ರತಿನಿತ್ಯ ಚಿಕ್ಕಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತವೆ. ಜನರು ಅಂಗೈಯಲ್ಲಿ ಜೀವಹಿಡಿದುಕೊಂಡು ಸಂಚರಿಸುವಂತಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್ ಹೇಳಿದರು.

ಎಲ್ಲೆಡೆ ತಾಲೂಕು ಕೇಂದ್ರ ಮತ್ತು ಹೋಬಳಿ ಕೇಂದ್ರಗಳಲ್ಲಿ ರಸ್ತೆ ವಿಸ್ತರಣೆ ಮಾಡಿ ವಿಶಾಲವಾದ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ ಪಟ್ಟಣದಲ್ಲಿ ದಶಕಗಳಿಂದ ಅದೇ ಕಿರಿದಾದ ರಸ್ತೆಯಲ್ಲಿ ಸಾಲು ಸಾಲು ವಾನಹನಗಳು ಹಾಗೂ ಜನರು ಅಪಾಯಕಾರಿ ಸ್ಥಿತಿಯಲ್ಲಿ ಸಂಚರಿಸಬೇಕಿದೆ.

ರಸ್ತೆಯ ಇಕ್ಕೆಲಗಳಲ್ಲಿ ಕೆಲವು ವರ್ತಕರು ಪಾದಚಾರಿ ರಸ್ತೆಯನ್ನೇ ಒತ್ತುವರಿ ಮಾಡಿದ್ದು, ಪಾದಚಾರಿಗಳಿಗೆ ರಸ್ತೆಯೇ ಇಲ್ಲದಂತಾಗಿದೆ. ಪಟ್ಟಣ ಮತ್ತು ತಾಲೂಕಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೂಡಲೇ ರಸ್ತೆ ವಿಸ್ತರಣೆ ಮಾಡುವ ಮೂಲಕ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ರಸ್ತೆ ಬದಿಯಲ್ಲಿ ಸಾಲು ಮರಗಳನ್ನು ಬೆಳೆಸಬೇಕು ಎಂದು ವಕೀಲ ಡಿ. ಶ್ರೀನಿವಾಸ್ ಒತ್ತಾಯಿಸಿದರು.

ಜಗಳೂರಿನಲ್ಲಿ ಬುಧವಾರ ಪಟ್ಟಣದ ರಸ್ತೆ ವಿಸ್ತರಣೆಗೆ ಆಗ್ರಹಿಸಿ ವಕೀಲರ ಸಂಘದಿಂದ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಜಗಳೂರಿನಲ್ಲಿ ಬುಧವಾರ ಪಟ್ಟಣದ ರಸ್ತೆ ವಿಸ್ತರಣೆಗೆ ಆಗ್ರಹಿಸಿ ವಕೀಲರ ಸಂಘದಿಂದ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕಾನೂನು ಚೌಕಟ್ಟಿನಲ್ಲಿ ಕ್ರಮ: ವಕೀಲರ ಸಂಘದ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಬಿ.ದೇವೇಂದ್ರಪ್ಪ, ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ವಿಸ್ತರಣೆ ಕಾಮಗಾರಿಗೆ ಸರಕಾರದಿಂದ ರೂ.20 ಕೋಟಿ ಅನುದಾನ ಮಂಜೂರಾಗಿದೆ.

ಕಾನೂನಿನ ಚೌಕಟ್ಟಿನಲ್ಲಿ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವ ಮಾತೇ ಇಲ್ಲ. ವರ್ತಕರ ಸಭೆ ಕರೆದು ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು.

ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಸಂಘ ಸಂಸ್ಥೆಯವರ ಸಹಕಾರ ಅಗತ್ಯವಿದೆ. ಪಟ್ಟಣದ ಅಭಿವೃದ್ದಿ ಕುರಿತು ವಕೀಲರ ಸಂಘದ ಕಾಳಜಿಗೆ ಸ್ವಾಗತಾರ್ಹ’ ಎಂದರು.

ವಕೀಲ ಸಂಘದ ಕಾರ್ಯದರ್ಶಿ ಎ.ಕೆ. ಪರಶುರಾಮ್, ವಕೀಲರಾದ ಎಚ್.ಬಸವರಾಜಪ್ಪ, ಇ.ಓಂಕಾರಪ್ಪ, ಎಸ್.ಐ. ಕುಂಬಾರ್, ಸಣ್ಣೋಬಯ್ಯ, ಎನ್.ಜೆ. ತಿಪ್ಪೇಸ್ವಾಮಿ, ದೊಡ್ಡಬೋರಯ್ಯ, ಬುಳ್ಳಳ್ಳಿ ನಾಗಪ್ಪ, ಭೂಪತಿ, ತಿಪ್ಪೇಸ್ವಾಮಿ, ನಾಗೇಶ್, ಅಂಜಿನಪ್ಪ, ಬಸವರಾಜ್ ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!