suddivijayanews2/09/2024
ಸುದ್ದಿವಿಜಯ, ಜಗಳೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಗೇಟ್‍ವರೆಗೆ ಶೀಘ್ರವೇ ರಸ್ತೆ ಅಗಲೀಕರಣ ಮಾಡಿಯೇ ತೀರುತ್ತೇವೆ. ಈಗಾಗಲೇ 20 ಕೋಟಿ ರೂ ಹಣ ಬಿಡುಗಡೆ ಯಾಗಿದ್ದು 1.3 ಕಿಮೀ ವಿಸ್ತೀಣ ಮಾಡುವುದು ಶತ ಸಿದ್ಧ. ಈ ವಿಷಯದಲ್ಲಿ ಹಿಂದೆ ಸರಿಯುವ ಮಾತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಜಿ.ಎಂ.ಗಂಗಾಧರ್ ಸ್ವಾಮಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆಯ ನಂತರ ಪತ್ರಕರ್ತರಿಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡಿದರು.
ಈಗಾಗಲೇ ಕಳೆದ ಶನಿವಾರದಿಂದ ಪಿಡ್ಲ್ಯೂಡಿ ಇಲಾಖೆ ಅಧಿಕಾರಿಗಳು ಮಾರ್ಕಿಂಗ್ ಮಾಡಿದ್ದಾರೆ. ನ್ಯಾಷನಲ್ ರೋಡ್ ಕಾಂಗ್ರೆಸ್ ಅನುಸಾರ ಭಾರತದ ರಸ್ತೆಗಳ ಗುಣಮಟ್ಟಕ್ಕೆ ಅಫೆಕ್ಸ್ ಬಾಡಿ ಇದೆ. ಅದರ ಪ್ರಕಾರ ಯಾವುದೇ ರಾಜ್ಯ ಹೆದ್ದಾರಿ ಬೌಂಡರಿಯಿಂದ ಆರು ಮೀಟರ್ ಅಗಲವಿರಬೇಕು ಎಂಬುದು ಕಡ್ಡಾಯ ನಿಯಮವಿದೆ.
ಮಾಸ್ಟರ್ ಪ್ಲಾನ್ ಅಂತೆ ರಸ್ತೆಗಳ ಪ್ರಕಾರ ಇಂತಿಷ್ಟು ರಸ್ತೆ, ಅದರ ಎತ್ತರ, ವಿನ್ಯಾಸಗಳನ್ನು ಮಾಡಲಾಗಿದೆ. ಅದರಂತೆ ಈ ಮಹಾಯೋಜನೆಯಡಿ 2008ರಲ್ಲಿ ಈ ರಸ್ತೆ ನೋಟಿಫಿಕೇಷನ್ ಆಗಿದ್ದು, ರಸ್ತೆಯ ಮಧ್ಯೆದಿಂದ ಎರಡೂ ಬದಿಯಲ್ಲಿ 21 ಮೀಟರ್ ವಿಸ್ತರಣೆ ಮಾಡಲು ಈಗಾಗಲೇ ಅಳತೆ ಮಾಡಲಾಗಿದ್ದು ಅದರಂತೆ ವಿಸ್ತರಣೆ ಮಾಡಿಯೇ ತೀರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಇತ್ತೀಚೆಗೆ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತ ಆಗಬಾರದ ಘಟನೆಯೊಂದು ನಡೆಯಿತು.
ಎರಡು ಅಮಾಯಕ ಜೀವಗಳು ಬಲಿಯಾದವು. ಹೀಗಾಗಿ ರಸ್ತೆ ವಿಸ್ತರಣೆ ಆಗಲೇ ಬೇಕು ಎಂಬ ದೃಢ ನಿಶ್ವಿಯದೊಂದಿಗೆ ಸಭೆ ಮಾಡಿದ್ದೇವೆ ಎಂದು ಪ್ರತಿಪಾದಿಸಿದರು.
ರಸ್ತೆಯ ಪಕ್ಕದಲ್ಲೇ ಇರುವ ಬೆಸ್ಕಾಂ ಇಲಾಖೆಯ 50 ರಿಂದ 70 ವಿದ್ಯುತ್ ಪೋಲ್‍ಗಳ ಸ್ಥಳಾಂತರವಾಗಬೇಕು. ಟೆಲಿಫೋನ್ ಮತ್ತು ಕುಡಿಯುವ ನೀರಿನ ಪೈಪ್‍ಗಳಿಗೆ ದಕ್ಕೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಆಯಾ ಇಲಾಖೆಯ ಅಧಿಕಾರಿಗಳ ಜೊತೆ ಸುಧೀರ್ಘವಾಗಿ ಚರ್ಚಿಸಿದ್ದೇವೆ.
ಕೆಲವರು ರಸ್ತೆಯಲ್ಲಿ ಅನಧಿಕೃತ ಕಟ್ಟಡಗಳನ್ನು ಕಟ್ಟಿರುವುದು ನಮ್ಮ ಗಮನಕ್ಕೆ ಬಂದಿದೆ. ಅವುಗಳನ್ನು ನಿಯಮಾನುಸಾರ ಖಾತರಿ ಪರಿಸಿಕೊಂಡು ತೆರವುಗೊಳಿಸಲು ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದರು.
ಅನಧಿಕೃತ ಕಟ್ಟಡಗಳಿಗೆ ಪರಿಶೀಲನೆ:
ಪಟ್ಟಣದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಅನಧಿಕೃತ ಕಟ್ಟಡಗಳನ್ನು ಕಟ್ಟಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಎಡಿಎಲ್‍ಆರ್, ಡಿಡಿಎಲ್‍ಆರ್ ಜೊತೆ ಮಾಹಿತಿ ಪಡೆಯುತ್ತೇವೆ.
ನ್ಯಾಷನಲ್ ಗ್ರೀನ್‍ಟ್ರಿಬುನಲ್ ಪ್ರಕಾರಣ ಬಫರ್ ಝೋನ್ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಕಟ್ಟಡಗಳನ್ನು ಕಟ್ಟುವಂತಿಲ್ಲ. ಯಾವುದೇ ಮುಲಾಜಿಲ್ಲದೆ ತೆರವುಗಳಿಸುತ್ತೇವೆ ಎಂದರು.
ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ರಸ್ತೆ ವಿಸ್ತರಣೆ ಮಾಡುವುದು ಸಿದ್ದ. ಕಾನೂನಿನ ನಿಯಮಾನುಸಾರಕ್ಕಾಗಿ ಕಾಯುತ್ತಿದ್ದೇವೆ. ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ತೀರ್ಮಾನಿಸಿದಂತೆ ಶನಿವಾರ ಮಾರ್ಕಿಂಗ್ ಆರಂಭವಾಗಿ ಈಗಾಗಲೇ ಎಲ್ಲ ಮಾರ್ಕಿಂಗ್ ಪ್ರಕ್ರಿಯೆ ಮುಗಿದಿದೆ.
ಕಾನೂನಿನ ಮುಂದೆ ಎಲ್ಲರೂ ಒಂದೇ. ಕಾನೂನು ನಿಯಮಾನುಸಾರ ಹೋಗಬೇಕಾಗಿರುವುದರಿಂದ ಯಾವಾಗ? ಏನು? ಎಂಬ ಪ್ರಶ್ನೆಗೆ ಮತ್ತೊಮ್ಮೆ ಮಾಧ್ಯಮಗಳಿಗೆ ತಿಳಿಸುತ್ತೇವೆ ಎಂದರು.
ಸಭೆಯಲ್ಲಿ ಎಡಿಸಿ ಲೋಕೇಶ್, ಎಎಸ್‍ಪಿ ಮಂಜುನಾಥ್, ಎಂ.ಡಿ.ಕೀರ್ತಿಕುಮಾರ್, ತಹಶೀಲ್ದಾರ್, ಸೈಯದ್ ಕಲೀಂ ಉಲ್ಲಾ, ಕೆ.ಪಿ.ಪಾಲಯ್ಯ, ಪಿಡ್ಲ್ಯೂಡಿ ಎಕ್ಸಿಕಿಟೂವ್ ಎಂಜಿನಿಯರ್ ನರೇಂದ್ರಬಾಬು, ಎಇಇ ನಾಗರಾಜ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಯಾವುದೇ ರಿಯಾಯಿತಿ ನೀಡುವುದಿಲ್ಲ
ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಒಂದೇ ನ್ಯಾಯ. ನಿಗದಿ ಪಡಿಸಿದಂತೆ ರಸ್ತೆಯ ಮಧ್ಯೆದಿಂದ 21 ಮೀಟರ್ ಎರಡೂ ಬದಿ ಅಗಲೀಕರಣ ಮಾಡುವುದರಲ್ಲಿ ಹಿಂದೆ ಸರಿಯುವುದಿಲ್ಲ. ಯಾರಿಗೂ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ಡಿಸಿ ಡಾ.ಜಿ.ಎಂ.ಗಂಗಾಧರ್ ಸ್ವಾಮಿ ಸ್ಪಷ್ಟ ಪಡಿಸಿದರು.
sslc ಫಲಿತಾಂಶ ವೃದ್ಧಿಗೆ ಕ್ರಮ
ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಸದಾ ಮೇಲೆ ಇರುತ್ತಿತ್ತು. ಕಳೆದ ಸಾಲಿನ ಫಲಿತಾಂಶ ಕುಸಿದ ಕಾರಣ ಪ್ರತಿ ತಿಂಗಳು ನಾನು ಮತ್ತು ಜಿಪಂ ಸಿಇಒ ಸುರೇಶ್ ಇಟ್ನಾಳ್ ನೇತೃತ್ವದಲ್ಲಿ ಬಿಇಒ ಮತ್ತು ಮುಖ್ಯ ಶಿಕ್ಷಕರ ಸಭೆ ನಡೆಸುತ್ತೇವೆ. ಈಗಾಗಲೇ ಸಿಎಂ ಮತ್ತು ಶಿಕ್ಷಣಾಧಿಕಾರಿಗಳು ಫಲಿತಾಂಶಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿರುವುದರಿಂದ ಫಲಿತಾಂಶ ವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.