suddivijayanews30/08/2024
ಸುದ್ದಿವಿಜಯ, ಜಗಳೂರು: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ವೃತ್ತದವರೆಗೆ ರಸ್ತೆ ವಿಸ್ತರಣೆಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಶುಕ್ರವಾರ ಮಾರ್ಕಿಂಗ್ ಮಾಡುವ ಕಾರ್ಯ ಆರಂಭವಾಗಿದ್ದು ಅನೇಕ ಮಳಿಗೆ ಮಾಲೀಕರು ಮತ್ತು ಬೀದಿ ವ್ಯಾಪಾರಿಗಳಲ್ಲಿ ಆತಂಕ ಶುರಾಗಿದೆ.
ಜಿಲ್ಲಾಧಿಕಾರಿಗಳ ಮೌಕಿಕ ಆದೇಶದ ಮೇರೆಗೆ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ರಸ್ತೆ ಮಾಕಿಂಗ್ ಮಾಡಲು ಪಿಡ್ಲ್ಯೂಡಿ ಎಇಇ ನಾಗರಾಜ್ ನೇತೃತ್ವದಲ್ಲಿ ಅಧಿಕಾರಿಗಳು ಸರ್ವೆ ಸಿಬ್ಬಂದಿ ಜೊತೆಗೆ ಆಗಮಿಸಿ ಮೊದಲಿಗೆ ಅಂಬೇಡ್ಕರ್ ವೃತ್ತದಿಂದ ಮಾರ್ಕಿಂಗ್ ಮಾಡಲು ಆರಂಭಿಸಿ ಮೊದಲ ದಿನ 450 ಮೀಟರ್ ಮಾರ್ಕಿಂಗ್ ಮಾಡುವ ಕಾರ್ಯ ಮುಗಿಸಿದರು.ಜಗಳೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ವೃತ್ತದವರೆಗೆ ರಸ್ತೆ ವಿಸ್ತರಣೆಗೆ ಹಣ ಬಿಡುಗಡೆಯಾಗಿದ್ದು ಗುರುವಾರ ಅಧಿಕಾರಿಗಳು 450 ಮೀಟರ್ ಮಾರ್ಕಿಂಗ್ ಮಾಡಿದರು.
ಲೋಕೋಪಯೋಗಿ ಇಲಾಖೆ ಅಡಿ ಬರುವ ಸ್ಟೇಟ್ ಹೈವೆ ಡೆವಲ್ಮೆಂಟ್ ಪ್ರಾಜೆಕ್ಟ್ (ಎಸ್‍ಎಚ್‍ಬಿಪಿ)ನಿಂದ ರಸ್ತೆ ವಿಸ್ತರಣೆಗೆ ಈಗಾಗಲೇ 20 ಕೋಟಿ ರೂ ಬಿಡುಗಡೆಯಾಗಿದ್ದು ರಸ್ತೆ ಅಗಲೀಕರಣ ಶತಾಯ ಗತಾಯ ಮುಗಿಸಲು ಅಧಿಕಾರಿಗಳು ಕಾನೂನಾತ್ಮಕವಾಗಿ ಮಾರ್ಕಿಂಗ್ ಮಾಡಲು ಮುಂದಾಗಿದ್ದಾರೆ.
ರಸ್ತೆ ವಿಸ್ತರಣೆ ಎಷ್ಟು?: ಪಟ್ಟಣದಲ್ಲಿ ಹಾದು ಹೋಗಿರುವ ಮಲ್ಪೆ-ಮೋಳಕಾಲ್ಮೂರು ರಾಜ್ಯ ಹೆದ್ದಾರಿ ಕಿರಿದಾಗಿದ್ದು ಪ್ರಸ್ತುತ ರಸ್ತೆ ಮಧ್ಯದಿಂದ ಎರಡೂ ಬದಿಗೆ ತಲಾ 21 ಮೀಟರ್ ನಂತೆ 136 ಅಡಿ ರಸ್ತೆ ವಿಸ್ತರಣೆಯಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‍ಗಳು ಮಾಹಿತಿ ನೀಡಿದ್ದಾರೆ.
ಶಾಸಕರಿಂದ ಮಾರ್ಕಿಂಗ್ ಸೂಚನೆ: ಕಳೆದ ಶನಿವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ಆದರಷ್ಟು ಬೇಗ ರಸ್ತೆ ಅಗಲೀಕಣಕ್ಕೆ ಮಾರ್ಕಿಂಗ್ ಮಾಡಿ ಎಂದು ಪಿಡ್ಲ್ಯೂಡಿ ಎಇಇ ನಾಗರಾಜ್ ಅವರಿಗೆ ಸೂಚನೆ ನೀಡಿದ್ದರು.
ದಿನದಿಂದ ದಿನಕ್ಕೆ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು ಶಾಸಕರು ಗರಂ ಆದ ಹಿನ್ನೆಲೆ ಅಧಿಕಾರಿಗಳು ರಸ್ತೆ ವಿಸ್ತರಣೆಗೆ ಮಾರ್ಕಿಂಗ್ ಮಾಡಲು ಮುಂದಾಗಿದ್ದಾರೆ.
ಮಾರ್ಕಿಂಗ್ ವೇಳೆ PWD ಎಇ ಪುರುಷತ್ತಮ ರೆಡ್ಡಿ, ನಿರಂಜನಗೌಡ್ರು, ಸತ್ಯಪ್ಪ, ಸಲೀಂ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಸೇರಿದಂತೆ ಪಪಂ ಸಿಬ್ಬಂದಿ ಮತ್ತು ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.