ಸುದ್ದಿವಿಜಯ, ಜಗಳೂರು: ತಾಲೂಕಿನ ದಿದ್ದಿಗೆ ಗ್ರಾಪಂಗೆ ಸಮಯಕ್ಕೆ ಸರಿಯಾಗಿ ಆಗಮನಿಸದೇ ಕರ್ತವ್ಯ ಲೋಪ ಎಸಗಿ, ಅನೈರ್ಮಲ್ಯಕ್ಕೆ ಕಾರಣವಾದ ಹಿನ್ನೆಲೆ ಪಿಡಿಒ ಮೇಜಿನ ಮೇಲೆ ಚರಂಡಿ ತ್ಯಾಜ್ಯ ಪ್ರದರ್ಶನ ಮಾಡಿದ ಗ್ರಾಮಸ್ಥರ ಸುದ್ದಿ ಪ್ರಕಟವಾದ ಹಿನ್ನೆಲೆ ಪಿಡಿಒ ಬಸವರಾಜಪ್ಪ ಅವರನ್ನು ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ ಗುರುವಾರ ಅಮಾನತ್ತು ಗೊಳಿಸಿದ್ದಾರೆ.
ಆಡಳಿತ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಮುಸ್ಟೂರು ಗ್ರಾಪಂ ಪಿಡಿಒ ಕೆ.ಸಿ.ಸುನಿತಾ ಅವರನ್ನು ದಿದ್ದಿಗೆ ಗ್ರಾಪಂಗೆ ಪ್ರಭಾರ ಪಿಡಿಒ ಆಗಿ ವರ್ಗಾವಣೆ ಮಾಡಿದ್ದಾರೆ. ಸೊಕ್ಕೆ ಗ್ರಾಪಂ ಪಿಡಿಒ ಎ.ಎಸ್. ಶಿವಕುಮಾರ್ ಅವರನ್ನು ಪ್ರಭಾರ ಪಿಡಿಒ ಆಗಿ ಬಸವನಕೋಟೆ ಗ್ರಾಪಂಗೆ ವರ್ಗಾವಣೆ ಮಾಡಿದ್ದಾರೆ.ಸರಕಾರದ ಆದೇಶದಂತೆ ಇ-ಹಾಜರಾತಿ ಕಡ್ಡಾಯಗೊಳಿಸಿದ್ದರೂ ದಿದ್ದಿಗೆ ಪಿಡಿಒ 2023 ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಇ-ಹಾಜರಾತಿ ಶೂನ್ಯವಾಗಿದ್ದು ದೃಢವಾಗಿದೆ.
ಸಮಯಕ್ಕೆ ಸರಿಯಾಗಿ ಆಗಮಿಸದೆ ಮತ್ತು ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾದ ಪಿಡಿಒ ಬಿ.ಬಸವರಾಜಪ್ಪ ಅವರು ನಾಗರಿಕ ಸೇವಾ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ.
ಇಲಾಖೆ ವಿಚಾರಣೆ ಬಾಕಿ ಇಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆದೇಶಿಸಿದ್ದಾರೆ.