ಸುದ್ದಿವಿಜಯ,ಜಗಳೂರು: ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ಕೇಂದ್ರ ಸರಕಾರಕ್ಕೆ ಕಳುಹಿಸದೇ ಮೀನಮೇಷ ಎಣಿಸುತ್ತಿರುವ ರಾಜ್ಯ ಸರಕಾರದ ನಡೆ ಖಂಡಿಸಿ ಬರುವ 2023ನೇ ಜ.10 ರಂದು ಮಾದಿಗ ಮತ್ತು ಛಲವಾದಿ ಸಮುದಾಯದ ಸಾವಿರಾರು ಜನರು ತಮಟೆ ಚಳವಳಿ ಹಮ್ಮಿಕೊಂಡಿದ್ದೇವೆ ಎಂದು ಹಿರಿಯ ದಲಿತ ಮುಖಂಡ ಶಂಭುಲಿಂಗಪ್ಪ ಹೇಳಿದರು.
ಪಟ್ಟಣದ ಪ್ರೆಸ್‍ಕ್ಲಬ್‍ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾದಿಗ ಮತ್ತು ಛಲವಾದಿ ಸಮುದಾಯ ಅತ್ಯಂತ ಶೋಷಿತ ಸಮುದಾಯ. ಈ ಸಮುದಾಯಗಳಿಗೆ ಒಳ ಮೀಸಲಾತಿ ನೀಡಿ ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೇಳುವಂತೆ ಮಾಡುವ ಸಲುವಾಗಿ ಧರ್ಮಸಿಂಗ್ ಸಿಎಂ ಆಗಿದ್ದಾಗ ನೇಮಕ ಮಾಡಿದ್ದ ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ರಚಿಸಲಾಗಿತ್ತು.
ಆಯೋಗ ಈಗಾಗಲೇ ವರದಿಯನ್ನು ನೀಡಿ ಅನೇಕ ವರ್ಷಗಳಾಗಿವೆ. ನಮ್ಮನ್ನು ಆಳುವ ಸರಕಾರಗಳು ನಮ್ಮ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್‍ಗಾಗಿ ಬಳಕೆ ಮಾಡಿಕೊಳ್ಳುತ್ತಿವೆ. ಆದರೆ ಒಳ ಮೀಸಲಾತಿ ನೀಡುವ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಸಮ್ಮಿಶ್ರ ಸರಕಾರಗಳು ನಮ್ಮ ಸಮುದಾಯವನ್ನು ಮೀಸಲಾತಿಯಿಂದ ವಂಚಿತರನ್ನಾಗಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೀಸಲಾತಿ ನಿಗದಿ ಮಾಡುವುದು ಕೇಂದ್ರ ಸರಕಾರದ ಕೆಲಸ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರಕಾರಗಳು ಏಕೆ ಇದುವರೆಗೂ ಕಳುಹಿಸಿಲ್ಲ ಎಂದು ಪ್ರಶ್ನಿಸಿದರು. ವರದಿಯಲ್ಲಿ ಅತ್ಯಂತ ಹಿಂದುಳಿದ ಈ ಎರಡು ಜಾತಿಗಳಿಗೆ ಒಳ ಮೀಸಲಾತಿ ನೀಡಬಹುದು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ರಾಜಕೀಯ ಕಾರಣಗಳಿಂದ ಜಾರಿಮಾಡದೇ ತಮ್ಮಲ್ಲೆ ಇಟ್ಟುಕೊಂಡು ಶೋಷಿತರಾದ ನಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದು.
ಛಲವಾದ ಸಮುದಾಯದ ಯುವ ಮುಖಂಡ ಧನ್ಯಕುಮಾರ್ ಮಾತನಾಡಿ, ಅಹಿಂದಾ ನಾಯಕ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ವರದಿ ಮಂಡನೆಯಾಗಿತ್ತು. ಅವರು ಸಹ ಜಾರಿಗೊಳಿಸಲಿಲ್ಲ. ನಂತರ ಬಂದ ಬಿ.ಎಸ್.ಯಡಿಯೂರಪ್ಪ ಸರಕಾರ ಮತ್ತು ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸರಕಾರಗವೂ ವರದಿ ಜಾರಿಗೆ ವಿಳಂಭ ಮಾಡುತ್ತಿದೆ.
ಇನ್ನೇನು ಚುನಾವಣೆ ಹತ್ತಿರ ಬರುತ್ತಿದೆ. ಈ ಸಂಬಂಧ ಸಾಕಷ್ಟು ಹೋರಾಟಗಳನ್ನು ಮಾಡಿದ್ದೇವೆ. ವರದಿ ಜಾರಿಯಾಗುವವರೆಗೂ ಹೋರಾಟ ನಿರಂತರವಾಗಿರುತ್ತದೆ. ಹೀಗಾಗಿ ಬರುವ ಜ.10 ರಂದು ಎಲ್ಲ ಮಾದಿಗ ಮತ್ತು ಛಲವಾದಿ ಸಮುದಾಯದ ಜನ ತಮಟೆ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಪ್ರವಾಸಿ ಮಂದಿರದಿಂದ ತಹಶೀಲ್ದಾರ್ ಕಚೇರಿಯವರೆಗೆ ಸಾವಿರಾರು ಮಂದಿ ತಮಟೆ ಭಾರಿಸುತ್ತಾ ಪ್ರತಿಭಟನೆ ಮಾಡುತ್ತೇವೆ. ನಂತರ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಹಾಗಾಗಿ ಸಾಕಷ್ಟು ಜನ ಬರಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರಾದ ವೈ.ರಾಜಶೇಖರ್ ಮಾತನಾಡಿದರು. ಮುಖಂಡರಾದ ಬಾಬು ರಾಜೇಂದ್ರ ಪ್ರಸಾದ್, ಮುನಿಸ್ವಾಮಿ, ಭರಮಸಮುದ್ರ ಮಲ್ಲೇಶ್, ಕುಮಾರ್, ಮುಸ್ಟೂರು ಸೋಮಶೇಖರ್ ಸೇರಿದಂತೆ ಅನೇಕ ದಲಿತ ಮುಖಂಡರು ಇದ್ದರು.