ಸುದ್ದಿವಿಜಯ ವಿಶೇಷ, ಜಗಳೂರು: ಪರಿಸರದಲ್ಲಿ ವೈವಿಧ್ಯಮಯದಿಂದ ಕೂಡಿದ ಜಗಳೂರು ತಾಲೂಕು ಸಾಂಸ್ಕೃತಿಕ ಆಚರಣೆಯಲ್ಲೂ ಸಾಕಷ್ಟು ವಿಭಿನ್ನ, ವಿಶೇಷ ಮತ್ತು ವೈವಿಧ್ಯತೆಯಿಂದ ಕೂಡಿದೆ.
ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಗಡಿ ಹಂಚಿಕೊಂಡಿರುವ ತಾಲೂಕಿಲ್ಲಿ ಗ್ರಾಮಕ್ಕೊಂದು ಜಾತ್ರೆ, ರಥೋತ್ಸವಗಳು ನಡೆಯುತ್ತಿವೆ. ಅದರಲ್ಲಿ ಈ ಬಾರಿಯ ವಿಶೇಷವೇನೆಂದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಗೇನಹಳ್ಳಿ ಗ್ರಾಮದಲ್ಲಿ ಕೊಂಡ್ಲಮ್ಮ ದೇವಿಯ ಜಾತ್ರೆ ನಡೆಯುತ್ತಿರುವುದು ವಿಶೇಷ.
ಹೌದು, ತಾಲೂಕಿನ ಗಡಿ ಗ್ರಾಮ ಸಂಗೇನಹಳ್ಳಿ ದಾವಣಗೆರೆ ಜಿಲ್ಲೆಯಾದರೂ ಚಿತ್ರದುರ್ಗಕ್ಕೆ ಸನಿಹ. ನೋಡಲು ಪುಟ್ಟ ಗ್ರಾಮವಾದರೂ ಐತಿಹಾಸಿಕ ಗ್ರಾಮ. 40 ಸಾವಿರ ವರ್ಷಗಳ ಹಿಂದೆ ಜನ ವಸತಿಯ ಪ್ರಮುಖ ನೆಲೆಯಿತ್ತು ಎಂಬುದಕ್ಕೆ ಇಲ್ಲಿನ ಬೆಟ್ಟದಲ್ಲಿರುವ ಪ್ರಗೈತಿಹಾಸಿಕ ಕಾಲದ ದಾಖಲೆಗಳೇ ಸಾಕ್ಷಿ.
ಜೊತೆಗೆ ಜೆ.ಎಂ.ಇಮಾಂ ಸಾಹೇಬರು ಕಟ್ಟಿಸಿದ್ದ ಕುದುರೆ ಲಾಲಾ ಕಾರದ ಕೆರೆ ಕೋಡಿ ಕೆರೆ ತುಂಬಿದಾಗ ಮಲೆನಾಡ ಅನುಭವವನ್ನು ಸೃಷ್ಟಿಸುತ್ತದೆ. ಸಂಗೇನಹಳ್ಳಿ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಮೊದಲು ಪ್ರವೇಶಿಸುವ ಕೆರೆ ಇದಾಗಿದೆ.ಈ ಗ್ರಾಮದಲ್ಲಿ ಪ್ರತಿವರ್ಷ ಬಸವೇಶ್ವರ ಸ್ವಾಮಿಯ ಪರುವನ್ನು ಎಲ್ಲ ಸಮುದಾಯದ ಜನರು ಒಟ್ಟಿಗೆ ಆಚರಿಸಿಕೊಂಡು ಬರುತ್ತಾರೆ. ಆದರೆ ಗ್ರಾಮ ಹುಟ್ಟಿದಾಗಿನಿಂದ ಇದೇ ಗ್ರಾಮದಲ್ಲಿ ನೆಲೆಸಿರುವ ಐತಿಹಾಸಿಕ ಕೊಂಡ್ಲಮ್ಮ ದೇವಿಯ ಜಾತ್ರೆ ಇದುವರೆಗೂ ನಡೆದಿರಲಿಲ್ಲ.
ಹೀಗಾಗಿ ಗ್ರಾಮಸ್ಥರು ದೇವಿಯ ಜಾತ್ರೆಯನ್ನು ಆಚರಿಸಲು ಸಿದ್ಧರಾಗಿದ್ದಾರೆ. ಇದೇ ಜ.30,31 ಮತ್ತು ಫೆ.1 ರಂದು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲು ಧಾರ್ಮಿಕ ಕಾರ್ಯಕ್ರಮಗಳಿಗೆ ಈಗಾಲೇ ಚಾಲನೆ ನೀಡಲಾಗಿದೆ.
ಕೊಂಡ್ಲಮ್ಮ ದೇವಿಯ ವಿಶೇಷತೆ:

ಸಂಗೇನಹಳ್ಳಿಯ ಬಸ್ ನಿಲ್ದಾಣದಲ್ಲಿ ಸುತ್ತ ಮೂರು, ಮೇಲೋಂದು ಒಟ್ಟು 4 ಹಾಸು ಬಂಡೆಗಳ ಅಡಿಯಲ್ಲಿ ಒಂದೂವರೆ ಅಡಿಯ ಶಿಲಾ ಮೂರ್ತಿಯೊಂದಿದೆ.
ಭಕ್ತರಿಷ್ಟಕ್ಕೆ ಅವರೇ ಪೂಜಿಸುತ್ತಿದ್ದ ದೇವಿಗೆ ಐತಿಹಾಸಿಕ ಹಿನ್ನೆಲೆಯಿದೆ. ತೆಲುಗಿನಲ್ಲಿ ಕೊಂಡ ಎಂದರೆ ಬೆಟ್ಟ ಎಂದೇ ಅರ್ಥ. ಬೆಟ್ಟದ ತಾಯಿಯಾಗಿರುವ ಕೊಂಡ್ಲಮ್ಮ ಯಾವ ಬೆಟ್ಟ ಬಿಟ್ಟು ಬಂದು ಈ ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟಳು ಎಂಬ ಬಗ್ಗೆ ಜನರಿಗೆ ಮಾಹಿತಿ ಇಲ್ಲ.
ಭಕ್ತರ ಸಹಕಾರದೊಂದಿಗೆ ಎರಡೂವರೆ ಅಡಿ ಎತ್ತರದ ನೂತನ ಕೊಂಡ್ಲಮ್ಮ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವುದರಿಂದ ಕೊಂಡ್ಲಮ್ಮ ದೇವಿಗೆ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಹೀಗಾಗಿ ಸಂಗೇನಹಳ್ಳಿ ಸೇರಿಂತೆ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಇದೇ ಮೊದಲ ಬಾರಿಗೆ ಬರಗಾಲದಲ್ಲೂ ಅದ್ಧೂರಿಯಾಗಿ ಜಾತ್ರೆ ಆಚರಿಸಿ ಬರುವ ಮಳೆಗಾಲ ಉತ್ತಮವಾಗಿ ಆಗಲಿ ಎಂದು ದೇವಿಯ ಜಾತ್ರೆ ಆಚರಣೆಗೆ ಸಿದ್ಧರಾಗಿದ್ದಾರೆ.
ಧಾರ್ಮಿಕ ಕಾರ್ಯಗಳು:
ನ.30 ರಂದು ಕುಂಭಾಭಿಷೇಕ, ತಗ್ಗಿನ ಮಡುವಿನಲ್ಲಿ ಗಂಗಾಪೂಜೆ ನಂತರ ಜೀನಗಾರರಿಂದ ದೇವಿ ಮೂರ್ತಿಗೆ ಜೀವಕಳೆ ತುಂಬುವ ಧಾರ್ಮಿಕ ಕಾರ್ಯಕ್ರಮ ಚಾಲನೆ ನೀಡಲಿದ್ದಾರೆ.
ಪೂರ್ಣ ಕುಂಭ ಕಳಸದೊಂದಿಗೆ ಮೆರವಣಿಗೆ ಮೂಲಕ ಮಹಿಳೆಯರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ರಾತ್ರಿ 1 ಗಂಟೆಗೆ ದೇವಿಯ ಜಾತ್ರಾ ಕಾರ್ಯಕ್ರಮ ಆರಂಭವಾಗಲಿದೆ.
ಫೆ.1 ಮತ್ತು 2 ರಂದು ಬೆಳಗಿನ ಪೂಜೆಯೊಂದಿಗೆ ಗುಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು ಒಟ್ಟು ಐದು ದಿನಗಳ ಕಾಲ ಜಾತ್ರೆ ನಡೆಯಲಿದೆ.
ಐತಿಹಾಸಿಕ ದಾಖಲೆ
ಜಗಳೂರು ತಾಲೂಕಿನಲ್ಲಿ ನಡೆಯುತ್ತಿರುವ ಜಾತ್ರೆಗಳ ಪಟ್ಟಿಯಲ್ಲಿ ಇದುವರೆಗೂ ಸಂಗೇನಹಳ್ಳಿ ಕೊಂಡ್ಲಮ್ಮ ಜಾತ್ರೆ ಸೇರ್ಪಡೆಯಾಗಿರಲಿಲ್ಲ. ಮೊದಲ ಬಾರಿಗೆ ಜರುಗುತ್ತಿರುವುದು ಐತಿಹಾಸಿಕ ದಾಖಲೆಯಾಗಲಿದೆ.
ಸಾಂಸ್ಕೃತಿಕ ಲೋಕಕ್ಕೆ ಒಂದು ಹೊಸ ಸೇರ್ಪಡೆಯಾಗಿದೆ. ಇದು ಸಂತೋಷದ ವಿಷಯ ಎಂದು ‘ಜಗಳೂರು ಜಾತ್ರೆಗಳು’ ವಿಷಯ ಕುರಿತು ಸಂಶೋಧನೆ ಪ್ರಬಂಧ ಮಂಡಿಸಿ ಪಿಎಚ್‍ಡಿ ಪದವಿ ಪಡೆದ ವಿಶ್ರಾಂತ ಪ್ರಾಂಶುಪಾಲ ಡಾ.ಸಂಗೇನಹಳ್ಳಿ ಅಶೋಕ್ ಕುಮಾರ್ ತಿಳಿಸಿದರು.