ಸುದ್ದಿವಿಜಯ, ಜಗಳೂರು: ಜಿಗುಪ್ಸೆಗೊಂಡು ಬದುಕಿನಲ್ಲಿ ಏನೂ ಸಾಧನೆ ಮಾಡಲಾಗದು ಎಂದು ಹತಾಶೆಯಾಗುವ ಅನೇಕ ಮಂದಿ ಇದ್ದಾರೆ. ಆದರೆ ಬದುಕಿಗೆ ಸಂಸ್ಕಾರ ಕಲಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ತಾಲೂಕು ನೌಕರರ ಸಂಘದ ಅಧ್ಯಕ್ಷರು ಹಾಗೂ ದೊಣೆಹಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಆರ್ ಚಂದ್ರಪ್ಪನವರು ನುಡಿದರು.
ತಾಲ್ಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ಸರಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ನಡೆದ “ಶರಣರ ಜೀವನ ಮೌಲ್ಯಗಳು” ಎನ್ನುವ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಯಾಂತ್ರಿಕ ಬದುಕಿನಲ್ಲಿ ಮೌಲ್ಯಗಳು ನಶಿಸುತ್ತಿವೆ. ಇಂತಹ ಪರ್ವಕಾಲದಲ್ಲಿ ಶರಣರ ಜೀವನ ಮೌಲ್ಯಗಳು ಜೀವಸಂಜೀವಿನಿ ಇದ್ದಂತೆ ಎಂದು ಅವರು ತಿಳಿಸಿದರು.
ನಿವೃತ್ತ ಪ್ರಾಚಾರ್ಯರಾದ ಪ್ರಭಾಕರ ಲಕ್ಕೊಳ್, ತಮ್ಮ ಉಪನ್ಯಾಸದಲ್ಲಿ ಬದುಕಿನ ಅನುಭವಗಳ ಸಾರವೇ ವಚನಗಳು, ವಚನ ಎಂದರೆ ಮಾತು, ಪ್ರಮಾಣ. ಮಗು ತೊದಲು ನುಡಿಗಳನ್ನು ಆಡಿದಾಗ ತಾಯಿ, ಕುಟುಂಬ, ಸಮಾಜಕ್ಕೆ ಹಿತವೆನಿಸುತ್ತದೆ.
ಅಂತೆಯೇ ವಚನಗಳು ಮನೆ, ಮಠ, ಸಮಾಜಕ್ಕೆ ಹಿತವಾದವುಗಳು. ನಮ್ಮ ನಡೆ ನುಡಿಗಳನ್ನು ಕಲಿಸಿಕೊಟ್ಟವರು ಶರಣರು ಎಂಬುದನ್ನು ಅವರು ಮನವರಿಕೆ ಮಾಡಿಕೊಟ್ಟರು.
ನಿವೃತ್ತ ಉಪನ್ಯಾಸಕರಾದ ಡಿ.ಸಿ. ಮಲ್ಲಿಕಾರ್ಜುನ ಮಾತನಾಡಿ, ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಡ ಶರಣರ ನುಡಿಗಡಣ ಕಡೆಗೀಲು ಇದ್ದಂತೆ ಎಂಬುದನ್ನು ಸಾರವತ್ತಾಗಿ ತಿಳಿಸಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಟಿ.ಎರ್ರಿಸ್ವಾಮಿ ಮಾತನಾಡಿ, ನಾಲಂದ ಕಾಲೇಜಿನ ಅನ್ನಪೂರ್ಣಮ್ಮ, ವಿದ್ಯಾರತ್ನ ಡಾ.ಟಿ.ತಿಪ್ಪೇಸ್ವಾಮಿ, ಶೈಲಾ, ಬಿಎನ್‍ಎಂ ಸ್ವಾಮಿಗಳ ದತ್ತಿ ದಾನದಿಂದ ಉಪನ್ಯಾಸವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಶ್ರೀ ಅಣಬೂರು ಮಠದ ಕೊಟ್ರೇಶ್, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಜೆ.ಆರ್. ಗೌರಮ್ಮ, ಈ.ಸತೀಶ್, ವೈ.ಎಂ. ಲೀಲಾವತಿ ಶಾಲೆಯ ಅಧ್ಯಾಪಕರಾದ ಕವಿತಾ, ಶಶಿರೇಖಾ, ತಿಪ್ಪೇಶ್, ಬಸವರಾಜ್, ಮನೋಜ್ ಮುಂತಾದವರು ಉಪಸ್ಥಿತರಿದ್ದರು.