ಸುದ್ದಿವಿಜಯ, ಜಗಳೂರು: ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಶ್ರೀ ಶಿರಡಿ ಸಾಯಿಬಾಬಾ ನೂತನ ದೇವಳದ ಪ್ರಾರಂಭೋತ್ಸವ, ವಿಮಾನ ಗೋಪುರ, ಕಳಸಾರೋಹಣ ಮತ್ತು ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಇದೇ ನ.20ರಿಂದ ನ.23 ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷೆ, ದಿಶಾ ಸಮಿತಿ ಸದಸ್ಯೆ ಸ್ವಾತಿ ತಿಪ್ಪೇಸ್ವಾಮಿ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಶನಿವಾರ ಶಾಸಕ ಬಿ.ದೇವೇಂದ್ರಪ್ಪ ಮತ್ತು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಧಾರ್ಮಿಕ ಕಾರ್ಯಕ್ರಮಕ್ಕೆ ಮೈಸೂರಿನ ಸುತ್ತೂರು ಕ್ಷೇತ್ರದ ಡಾ. ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ತಿಪಟೂರು ತಾ. ನೊಣವಿನಕೆರೆ ವಿರಕ್ತ ಮಠದ ಡಾ.ಶಿವಾನುಭವ ಚರವರ್ಯ ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿ ಮತ್ತು ನಮ್ಮ ತಾಲೂಕಿನ ಕಣ್ವಕುಪ್ಪೆ ಗವಿಮಠದ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟನೆಗೆ ಮಾಡಲಿದ್ದಾರೆ, ಅಧ್ಯಕ್ಷತೆಯನ್ನು ಶಾಸಕ ಬಿ.ದೇವೇಂದ್ರಪ್ಪ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಎನ್.ಚಲುವರಾಯಸ್ವಾಮಿ, ಡಿ.ಸುಧಾಕರ್,
ಶಾಸಕರಾದ ಉದಯ್ ಬಿ.ಗರುಡಾಚಾರ್, ಪಿ.ರವಿಕುಮಾರ್, ಬಸವರಾಜ್ ಶಿವಗಂಗಾ, ಡಾ.ಶ್ರೀನಿವಾಸ್, ಕೆ.ಸಿ.ವೀರೇಂದ್ರ, ಟಿ.ರಘುಮೂರ್ತಿ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ, ಆರ್ ಎಸ್‍ಎಸ್ ಕಾರ್ಯವಾಹ ಎನ್.ತಿಪ್ಪೇಸ್ವಾಮಿ, ರಾಜ್ಯ ಪಿಸಿಬಿ ಅಧ್ಯಕ್ಷ ಡಾ.ಶಾಂತ ಎ. ತಿಮ್ಮಯ್ಯ, ಜೆ.ಈ.ಶಶಿಧರ್, ಗ್ರಂಥಾಲಯ ನಿರ್ದೇಶಕ ಡಾ.ಸತೀಶ್ ಕುಮಾರ್ ಎಸ್.ಹೊಸಮನಿ,
ಚಿತ್ರನಟ ನಾಗಭೂಷಣ್, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್, ತಿಪ್ಪರಾಜು ಹವಾಲ್ದಾರ್, ಮತ್ತು ಚಿತ್ರನಟ ಡಾಲಿ ಧನಂಜಯ, ಪರಿಷತ್ ಸದಸ್ಯ ನವೀನ್, ಸಾಯಿಬಾಬಾ ಮಂದಿರದ ಮುಖ್ಯಸ್ಥ ಎನ್.ಕೆ.ಬಾಲಗಂಗಾಧರ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗಾಪಂ ಅಧ್ಯಕ್ಷ ಎಲ್.ತಿರುಮಲ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಧರ್ಮೋ ರಕ್ಷತಿ ರಕ್ಷಿತಾಃ
ಜಗಳೂರು ತಾಲೂಕಿನಲ್ಲಿ ಎಲ್ಲಿಯೂ ಸಾಯಿಬಾಬಾರ ಬೃಹತ್ ಮಂದಿರ ಇರಲಿಲ್ಲ. ಧರ್ಮೋ ರಕ್ಷತಿ ರಕ್ಷಿತಾಃ ಎಂದು ಪ್ರೊ.ತಿಪ್ಪೇಸ್ವಾಮಿ ಮತ್ತು ಸ್ವಾತಿ ತಿಪ್ಪೇಸ್ವಾಮಿ ಅವರು ಸೊಕ್ಕೆ ಗ್ರಾಮದಲ್ಲಿ ಮಂದಿರ ನಿರ್ಮಾಣ ಮಾಡಿ ಎಲ್ಲ ವರ್ಗದ ಜನರಿಗೆ ಬಾಬಾರ ದರ್ಶನ ಮಾಡಿಸುತ್ತಿದ್ದಾರೆ. ಅವರ ಕಾರ್ಯಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಸೊಕ್ಕೆ ಗ್ರಾಮಕ್ಕೆ ರಸ್ತೆ, ಸ್ವಚ್ಛತೆ, ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ದೇವಸ್ಥಾನವನ್ನು ಹಬ್ಬದ ರೀತಿ ಉದ್ಘಾಟಿಸೋಣ
ಕೇವಲ ಒಂದೇ ಜಾತಿ, ಧರ್ಮಕ್ಕೆ ಸೀಮಿತವಾಗದ ಸರ್ವರೂ ಪೂಜಿಸುವ ಶಿರಡಿ ಸಾಯಿಬಾಬಾರ ಮಂದಿರ ಉದ್ಘಾಟನೆ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿರುವ ಪ್ರೊ.ತಿಪ್ಪೇಸ್ವಾಮಿ ಮತ್ತು ಮಗಳಾದ ಸ್ವಾತಿ ತಿಪ್ಪೇಸ್ವಾಮಿ ಕಾರ್ಯಕ್ಕೆ ಧನ್ಯವಾದಗಳು. ದೇವಸ್ಥಾನವನ್ನು ಹಬ್ಬದ ರೀತಿ ಉದ್ಘಾಟಿಸೋಣ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.
ಕಾರ್ಯಕ್ರಮಗಳು:
ನ.20ರಂದು ಸೊಮವಾರ ಗಂಗಾಪೂಜೆ, ಗಣಪತಿ ಪೂಜೆ, ಗೋಮಾತೆ, ಶಿವಾಯಗ ಮಂಟಪ ದ್ವಜಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ನ.21ರಂದು ಮಂಗಳವಾರ ಮೂರ್ತಿಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಪೂಜಾ ವಿದಿವಿಧಾನಗಳು ನಡೆಯಲಿವೆ.
ನ.22ರಂದು ಬುಧವಾರ ಪ್ರಧಾನ ಕಳಸ, ನವಗ್ರಹರಾಧನೆ, ಮೃತ್ಯುಂಜಯ ಏಕಲಿಂಗ, ಗಣಹೋಮ, ನವಗ್ರಹ ಹೋಮ, ಬಾಬಾ ಮೂರ್ತಿಗೆ ಪ್ರದಾನ ಹೋಮ ನಡೆಯಲಿದೆ.
ನ.23 ರಂದು ಗುರುವಾರ ಬ್ರಾಹ್ಮಿ ಮುಹೋರ್ತದಲ್ಲಿ ಬಾಬಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ, ಅಷ್ಟೋತ್ತರ ಸಹಸ್ರ ಬಿಲ್ವಾರ್ಚನೆ ಸೇರಿದಂತೆ ಮಹಾಮಂಗಳರಾತಿ ಜರುಗುವುದು.