ಸುದ್ದಿವಿಜಯ, ಜಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ. ನಾನು ಕೂಡಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಸಂಸದ ಚನ್ನಯ್ಯ ಒಡೆಯರ್ ಪುತ್ರ ಶಿವಕುಮಾರ್ ಒಡೆಯರ್ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿವಿಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದೇನೆ. ನಮ್ಮ ತಂದೆಯವರು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ 60 ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಏಳು ಬೀಳುಗಳನ್ನು ಕಂಡು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವದಿಯಲ್ಲಿ ನಮ್ಮ ತಂದೆ ಚನ್ನಯ್ಯ ಒಡೆಯರ್ ಕರ್ನಾಟಕ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಂಸದರಾಗಿದ್ದ ಅವದಿಯಲ್ಲಿ ಚಿತ್ರದುರ್ಗ-ಚಳ್ಳಕೆರೆ ರೈಲ್ವೆ ವಿಸ್ತರಣೆ ಸೇರಿದಂತೆ ಅನೇಕ ಜನ ಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ಶ್ರಮಿಸಿದ್ಧ ದೂರದೃಷ್ಟಿಯುಳ್ಳ ರಾಜಕಾರಣಿಯಾಗಿದ್ದರು ಎಂದರು ತಿಳಿಸಿದರು.
ನಾನು ಸಹ ಮೂಲತಃ ಜಗಳೂರು ವಿಧಾನಸಭಾ ಕ್ಷೇತ್ರದ ಬಿಳಿಚೋಡು ಗ್ರಾಮದವರಾಗಿದ್ದು, ಬಂಧುಗಳು, ಹಿತೈಶಿಗಳು ಕ್ಷೇತ್ರದ ಮತದಾರರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ 200ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸುತ್ತಾಡಿ ಪಕ್ಷದ ಮುಖಂಡರನ್ನು, ಕಾರ್ಯಕರ್ತರನ್ನು ಭೇಟಿ ಮಾಡಿದ್ದೇನೆ.ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್‍ಎಸ್ ಮಲ್ಲಿಕಾರ್ಜುನ್ ಅವರಲ್ಲಿಯೂ ಟಿಕೆಟ್‍ಗಾಗಿ ಮನವಿ ಮಾಡಿದ್ದೇನೆ. ಎಐಸಿಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಟಿಕೆಟ್ ಕೊಡಿ ಎಂದು ಕೋರಿಕೊಂಡಿದ್ದೇನೆ.
ನಮ್ಮ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ವಿಧಾನಸಭಾ ಕ್ಷೇತ್ರಗಳ ಶಾಸಕರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಕೋರಿಕೊಂಡಿದ್ದೇನೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುವೆ: ಕ್ಷೇತ್ರದಲ್ಲಿ ಆರು ಬಾರಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಬಾರಿ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್‍ನಲ್ಲಿ ಅನೇಕರು ಟಿಕೆಟ್ ಕೇಳುತ್ತಿದ್ದಾರೆ.
ಅದರಲ್ಲಿ ನಾನೂ ಒಬ್ಬನಾಗಿದ್ದು ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಇಲ್ಲ ಎಂದರೆ ಪಕ್ಷದ ಮುಖಂಡರು ಯಾರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಲು ಸಿದ್ಧರಾಗಿದ್ದೇವೆ.
ಕೇಂದ್ರ ಪಟ್ಟಿಯಲ್ಲಿರುವ ರೈಲ್ವೇಯನ್ನು ಜಗಳೂರು ಕ್ಷೇತ್ರಕ್ಕೆ ವಿಸ್ತರಿಸುವುದು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಅನೇಕ ದೂರದೃಷ್ಟಿ ಯೋಜನೆಗಳನ್ನು ಹಾಕಿಕೊಂಡಿದ್ದೇನೆ ಎಂದು ಶಿವಕುಮಾರ್ ಒಡೆಯರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೆದಗಿನಕೆರೆ ವೀರೇಂದ್ರ ಪಾಟೀಲ್, ನಿಬಗೂರು ಮಹಾಸ್ವಾಮಿ, ಹಜಮುಲ್ಲ, ಹರೀಶ್ ಸೇರಿದಂತೆ ಅನೇಕರು ಇದ್ದರು.