suddivijayanews04/07/2024
ಸುದ್ದಿವಿಜಯ, ಜಗಳೂರು: ಮಾಳಮ್ಮನಹಳ್ಳಿ ಗ್ರಾಮದ ಬಳಿ ಇರುವ ಹೊಸ ಬಡಾವಣೆಯಲ್ಲಿ ಕರೆಂಟ್ ಕಂಬ ಏರಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕನಿಗೆ ವಿದ್ಯುತ್ ಪ್ರಹರಿಸಿ ಕಂಬದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಗುರುವಾರ ಮಧ್ಯಾಹ್ನ ನಡೆದಿದೆ.
ಗೋಗುದ್ದು ಗ್ರಾಮದ ದಾದಾ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಕೂಲಿ ಕಾರ್ಮಿಕ. ಮಾಳಮ್ಮನಹಳ್ಳಿ ಗ್ರಾಮದ ಬಳಿ ಹೊಸದಾಗಿ ಆಂಜನೇಯ ಬಡಾವಣೆ ನಿರ್ಮಾಣಗೊಂಡಿದೆ.
ಅಲ್ಲಿ ವಿದ್ಯುತ್ ಕಂಬ ಅವಳಡಿಸುವ ಕಾಮಗಾರಿಯನ್ನು ಗುತ್ತಿಗೆದಾರ ಕಾಳಪ್ಪ ಕೈಗೆತ್ತಿಕೊಂಡಿದ್ದರು. ಬೆಳಗ್ಗೆ ಕೆಲಸ ಆರಂಭಿಸುವ ಮುನ್ನ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕಾಗಿತ್ತು.
ಈ ಬಗ್ಗೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳ ಪೂರ್ವಾನುಮತಿ ಹಾಗೂ ಲೈನ್ ಮನ್ ಗಮನಕ್ಕೆ ತರಬೇಕಿದ್ದ ಗುತ್ತಿಗೆದಾರ ಇದ್ಯಾವುದನ್ನು ಅನುಸರಿಸದೆ ಏಕಾ ಏಕಿ ವಿದ್ಯುತ್ ಕಂಬ ಏರಿಸಿ ಕೆಲಸ ಮಾಡಿಸಿದ್ದಾನೆ.
ಬಡಾವಣೆಯಲ್ಲಿ ಮೊದಲೊಂದು ವಿದ್ಯುತ್ ಕಂಬ ಹಾದು ಹೋಗಿದೆ. ಅದರ ಪಕ್ಕದಲ್ಲಿ ಹೊಸ ವಿದ್ಯುತ್ ಕಂಬ ಅಳವಡಿಸಿ ತಂತಿ ಎಳೆಯವ ಕೆಲಸ ಮಾಡಲಾಗುತ್ತಿತ್ತು.
ಇದನ್ನು ಗಮನಿಸದ ಕೂಲಿಕಾರರ ಕೆಲಸ ಮಾಡಲು ವಿದ್ಯುತ್ ಕಂಬ ಹತ್ತಿದ್ದಾನೆ. ಆಗ ಪಕ್ಕದಲ್ಲಿದ್ದ ಹಳೆಯ ಲೈನ್ ಚಾರ್ಜ್ ಆಗಿದೆ. ಆಗ ಲೈನ್ ಕಾರ್ಮಿಕನಿಗೆ ತಾಗಿ ವಿದ್ಯುತ್ ಪ್ರಹರಿಸಿದ್ದರಿಂದ ಕಂಬದ ಮೇಲಿಂದ ಚರಂಡಿಗೆ ಬಿದ್ದಿದ್ದಾನೆ.
ಇದರಿಂದ ತಲೆ, ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಜಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಗಣಗೆರೆ ಜಿಲ್ಲಾ ಆಸ್ಪತ್ರೆಗೆ 108 ವಾಹನದಲ್ಲಿ ಕಳಿಸಲಾಗಿದೆ. ಈ ಘಟನೆಗೆ ಗುತ್ತಿಗೆದಾರನ ನಿರ್ಲಕ್ಷವೇ ಕಾರಣ ಎಂದು ಸಂಬಂಧಿಕರು ಮತ್ತು ಪ್ರತ್ಯಕ್ಷ ದರ್ಶಿಗಳು ಆರೋಪ ಮಾಡಿದ್ದಾರೆ.