ಬರಪೀಡಿತ ಜಗಳೂರು ತಾಲೂಕಿನಲ್ಲಿ ಕೂರಿಗೆ ಭತ್ತ ಬಿತ್ತನೆ!

Suddivijaya
Suddivijaya June 11, 2024
Updated 2024/06/11 at 1:59 PM

suddivijayanews11/06/2024
ಸುದ್ದಿವಿಜಯ, ಜಗಳೂರು: ಡಾ.ನಂಜುಂಡಪ್ಪ ವರದಿ ಅನುಸಾರ ಇಡೀ ರಾಜ್ಯದಲ್ಲೇ ಜಗಳೂರು ಕ್ಷೇತ್ರ ಅತ್ಯಂತ ಹಿಂದುಳಿದ 2ನೇ ಅತಿದೊಡ್ಡ ಬರಪೀಡಿತ ತಾಲೂಕು ಎಂದೇ ಹೆಸರಾಗಿದೆ.

ಆದರೆ ವೈವಿಧ್ಯಮಯ ಭೂಪ್ರದೇಶ ಹೊಂದಿರುವ ಕ್ಷೇತ್ರದಲ್ಲಿ ಪ್ರಯೋಗಶೀಲ ಕೃಷಿಯಲ್ಲಿ ಇಲ್ಲಿನ ರೈತರು ಸದಾ ಮುಂದು ಎನ್ನುವುದಕ್ಕೆ ಮೆದಗಿನಕೆರೆ ಗ್ರಾಮದ ಕೃಷಿ ಮಹಿಳೆ ಜಯಮ್ಮ ಮುಂದಾಗಿರುವುದು ವಿಶೇಷ.

ಹೌದು, ಸಾವಿರ ಅಡಿ ಬೋರ್‍ವೆಲ್ ಕೊರೆಸಿದರೂ ಅಲ್ಪ ಪ್ರಮಾಣದ ನೀರು ಹೊರ ಬರುವ ಬರಪೀಡಿತ ತಾಲೂಕಿನಲ್ಲಿ ಭತ್ತ ಬೆಳೆಯಲು ರೈತ ಮಹಿಳೆ ಮುಂದಾಗಿದ್ದಾರೆ.ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದಲ್ಲಿ ಕೃಷಿ ಮಹಿಳೆ ಜಯಮ್ಮನ ಜಮೀನಿನಲ್ಲಿ ಕೂರಿಗೆ ಭತ್ತ ಬಿತ್ತನೆ ಮಾಡುತ್ತಿರುವ ಚಿತ್ರ.ಜಗಳೂರು ತಾಲೂಕಿನ ಮೆದಗಿನಕೆರೆ ಗ್ರಾಮದಲ್ಲಿ ಕೃಷಿ ಮಹಿಳೆ ಜಯಮ್ಮನ ಜಮೀನಿನಲ್ಲಿ ಕೂರಿಗೆ ಭತ್ತ ಬಿತ್ತನೆ ಮಾಡುತ್ತಿರುವ ಚಿತ್ರ.

ದಾವಣಗೆರೆಯ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ.ಬಿ.ಒ.ಮಲ್ಲಿಕಾರ್ಜುನ ಮಾರ್ಗದರ್ಶನದಲ್ಲಿ ಎರಡು ಎಕರೆ ಜಮೀನಿನಲ್ಲಿ ಕೂರಿಗೆ ಭತ್ತ ಬಿತ್ತನೆ ಮಾಡಿದ್ದು ಹಲವು ರೈತರಿಗೆ ಇವರು ಸ್ಪೂರ್ತಿಯಾಗಿದ್ದಾರೆ.

ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಕೂರಿಗೆ (Showing direct dry seeded rice) ಸಾಧನದಲ್ಲಿ ಭತ್ತ ಬಿತ್ತನೆ ಮಾಡಿರುವುದು ಪ್ರಥಮ ಎನ್ನಲಾಗಿದೆ. ತುಂಗಭದ್ರಾ ನದಿ ಹರಿಯುವ ಚನ್ನಗಿರಿ, ಹೊನ್ನಾಳಿ, ಹರಿಹರ, ಮಲೆಬೆನ್ನೂರು ಭಾಗದ ರೈತರು ಮಾತ್ರ ಭತ್ತ (50 ಸಾವಿರ ಹೆಕ್ಟೇರ್‍ನಲ್ಲಿ)ಬೆಳೆಯುತ್ತಿದ್ದಾರೆ.

ಆದರೆ ಜಗಳೂರು ತಾಲೂಕಿನಲ್ಲಿ ಭತ್ತ, ಕಬ್ಬು ಹೊರತು ಪಡಿಸಿ ಉಳಿದ ಎಲ್ಲ ಬೆಳೆಗಳನ್ನು ಬೆಳೆಯಲಾಗುತ್ತದೆ. ಹೀಗಾಗಿ ಪ್ರಸ್ತುತ ವರ್ಷ ಕೂರಿಗೆ ಸಾಧನ ಬಳಸಿ ರಾಗಿ ಬೆಳೆಯಂತೆ ಭತ್ತ ಬಿತ್ತನೆ ಮಾಡಿ ಪ್ರಯೋಗ ಕೃಷಿಗೆ ಮುಂದಾಗಿರುವುದು ರೈತರಿಗೆ ಸ್ಪೂರ್ತಿ ತಂದಿದೆ.

ಕೂರಿಗೆ ಭತ್ತ ಬಿತ್ತನೆ ಲಾಭಗಳು:

ಕಳೆದ ವರ್ಷ ಮಳೆಯ ಅಭಾವದಿಂದ ಇಡೀ ಜಿಲ್ಲೆಯಾದ್ಯಂತ ಭತ್ತದ ಬೆಳೆ ವಿಸ್ತರಣೆಯಲ್ಲಿ ಕಡಿಮೆಯಾಗಿತ್ತು. ಕಾರಣ ಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಆಗದೆ ಇರುವುದು ಹಾಗೂ ಬೋರ್ವೆಲ್‍ಗಳಲ್ಲಿ ನೀರು ಕಡಿಮೆಯಾಗಿದ್ದರಿಂದ, ರೈತರು ಅಡಿಕೆ ಉಳಿಸಿಕೊಳ್ಳಲು ಭತ್ತವನ್ನು ಬೆಳೆಯದಿರಲು ನಿರ್ಧರಿಸಿದರು.ಈ ವರ್ಷ ಪೂರ್ವ ಮುಂಗಾರು ಉತ್ತಮವಾಗಿರುವುದರಿಂದ ರೈತರು ಕಡಿಮೆ ನೀರನ್ನು ಬೆಳೆಸಿ, ಭತ್ತದ ಬೆಳೆಯನ್ನು ಕೂರಿಗೆ ಮುಖಾಂತರ ಬಿತ್ತನೆ ಮಾಡಿ ಬೆಳೆಯಬಹುದು.

ಕೂರಿಗೆ ಬಿತ್ತನೆ ಮಾಡುವುದರಿಂದ ಕಾಲುವೆಯ ಕೊನೆಯ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಅಷ್ಟೇ ಅಲ್ಲ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ಕೆವಿಕೆ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ್.

ಸವಾಲುಗಳೇನು?:

ಈ ಪದ್ಧತಿಯಲ್ಲಿ ರೈತರು ಜಮೀನಿನ ಕಡೆ ಹೆಚ್ಚು ಗಮನ ಹರಿಸಬೇಕು, ಏಕೆಂದರೆ ನೇರ ಕೂರಿಗೆ ಭತ್ತ ಬಿತ್ತನೆ ಪದ್ಧತಿಯಲ್ಲಿ ಕಳೆಗಳ ನಿರ್ವಹಣೆ ಒಂದು ಸವಾಲಾಗಿರುತ್ತದೆ.

ಈ ಪದ್ಧತಿಯನ್ನು ಅಳವಡಿಸುವ ರೈತರು ಇಂತಹದ್ದೇ ತಳಿಯನ್ನು ಬಳಸಿ ಬೆಳೆಯಬೇಕು ಅಂತಿಲ್ಲ ಭತ್ತದ ತಳಿಯಲ್ಲಿ ಉತ್ತಮ ಇಳುವರಿ ಕೊಡುವ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ತಳಿಗಳನ್ನು ಬೆಳೆಯಬಹುದು.ಬಿತ್ತನೆ ಮಾಡಿದ 48 ತಾಸುಗಳ ಒಳಗಾಗಿ ಪೆಂಡಾ ಮಿಥುಲಿನ್ ಕಳೆನಾಶಕವನ್ನು 700 ಮಿಲಿ ಪ್ರತಿ ಎಕರೆಗೆ ಬಳಸಬೇಕು. ಬಿತ್ತನೆಯಾದ 25 ದಿವಸಗಳ ಒಳಗಾಗಿ ಬೀಸ್‍ಪೈರಿ ಪ್ಯಾಕ್ ಸೋಡಿಯಂ ಕಳೆ ನಾಶಕವನ್ನು 120 ಎಂಎಲ್ ಪ್ರತಿ ಎಕರೆಗೆ ಸಿಂಪರಣೆ ಮಾಡಬೇಕು.

ಜೊತೆಗೆ ಎತ್ತಿನ ಸಹಾಯದಿಂದ ಎಡೆ ಹೊಡೆಯಬೇಕು. 30 ದಿನಗಳ ಒಳಗೆ ಕೈಕಳೆಯನ್ನು ತೆಗಿಸಬೇಕು ಎಂದು ಬೇಸಾಯ ತಜ್ಞರು ಪ್ರತಿಕ್ರಿಯೆ ನೀಡಿದರು.

ಬಿತ್ತನೆ ಮಾಡುವುದು ಹೀಗೆ:

ಪ್ರತಿ ಎಕರೆಗೆ 10 ರಿಂದ 12 ಕೆಜಿ ಬಿತ್ತನೆ ಬೀಜ ಬಳಸಿ, ಏಕಕಾಲಕ್ಕೆ ಬೀಜ ಮತ್ತು ಗೊಬ್ಬರ ಬಿತ್ತನೆ ಮಾಡುವ ಸಂಯುಕ್ತ ಕೂರಿಗೆ ಬಳಸಿ ಬಿತ್ತನೆ ಮಾಡಿಬೇಕು.ಜೈವಿಕ ಗೊಬ್ಬರಗಳಾದ ಅಜೋಸ್ಪಿರಲಂ ಹಾಗೂ ರಂಜಕ ಕರಗಿಸುವ ಗೊಬ್ಬರವನ್ನು 500 ಗ್ರಾಂ ಪ್ರತಿ ಎಕರೆ ಬೀಜಕ್ಕೆ ಲೇಪನ ಮಾಡಿ ಬಿತ್ತನೆ ಮಾಡುವುದರಿಂದ ಶಿಫಾರಸು ಮಾಡಿದ ರಾಸಾಯನಿಕ ಗೊಬ್ಬರದಲ್ಲಿ ಶೇ.10 ರಷ್ಟು ಕಡಿತ ಮಾಡಬಹುದು ಎನ್ನುತ್ತಾರೆ ಬೇಸಾಯ ತಜ್ಞ ಮಲ್ಲಿಕಾರ್ಜುನ್.

ಧಾನ್ಯಗಳ ಕೊರತೆ: ಕೂರಿಗೆ ಭತ್ತ ಬೆಸ್ಟ್

ಇದೇ ಮೊದಲ ಬಾರಿಗೆ ಜಗಳೂರು ತಾಲೂಕಿನಲ್ಲಿ ಕಡಿಮೆ ನೀರಿನಲ್ಲಿ ಹೆಚ್ಚು ಉತ್ಪಾನೆ ಮಾಡಬಹುದಾದ ಕೂರಿಗೆ ಭತ್ತವನ್ನು ಬಿತ್ತನೆ ಮಾಡುತ್ತಿದ್ದೇವೆ.

ಆಹಾರ ಧಾನ್ಯಗಳ ಕೊರತೆ ನೀಗಿಸಬೇಕಾದರೆ ರೈತರು ಪ್ರಯೋಗ ಶೀಲ ಕೃಷಿಗೆ ಮುಂದಾಗಬೇಕು ಎಂದು ಜಯಮ್ಮನ ಪುತ್ರರಾದ ಎಫ್‍ಪಿಒ ಅಧ್ಯಕ್ಷ ಎಂ.ಎಚ್.ಮಂಜುನಾಥ್ ಪ್ರತಿಕ್ರಿಯೆ ನೀಡಿದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!