ಸುದ್ದಿವಿಜಯ, ಜಗಳೂರು: ಇಸ್ರೋದ ಹಿಂದಿನ ಅಧ್ಯಕ್ಷರಾಗಿದ್ದ ಡಾ.ಕಿರಣ್‍ಕುಮಾರ್, ಯು ಎನ್‍ಆರ್ ರಾವ್ ಮತ್ತು ಭಾರತ ರತ್ನ ಪುರಸ್ಕೃತ ವಿಜ್ಞಾನಿ ಸಿಎನ್ ಆರ್ ರಾವ್ ಸೇರಿದಂತೆ ಅನೇಕ ವಿಜ್ಞಾನಿಗಳು ಕನ್ನಡ ಮಾಧ್ಯಮದಲ್ಲೇ ಓದಿದವರು. ನಾನೂ ಸಹ ಪ್ರೌಢ ಶಿಕ್ಷಣದವರೆಗೆ ಕನ್ನಡ ಮಾಧ್ಯಮದಲ್ಲೇ ಓದಿ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಬೆಂಗಳೂರಿನ ಇಸ್ರೋ ಯುಎನ್‍ಆರ್ ರಾವ್ ಉಪಗ್ರಹ ಕೇಂದ್ರದ ಹಿರಿಯ ವಿಜ್ಞಾನಿ ಟಿ.ಎಸ್.ಗೋವಿಂದರಾಜ್ ಹೇಳಿದರು.
ಪಟ್ಟಣದ ಅಮರ ಭಾರತಿ ವಿದ್ಯಾ ಕೇಂದ್ರದ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ 2022-23ನೇ ಸಾಲಿನ ಅಂತಿಮ ಬಿಇಡಿ ಪ್ರಶಿಕ್ಷಣಾರ್ಥಿಗಳಿಗೆ ದೀಪದಾನ ಕಾರ್ಯಕ್ರಮ ಮತ್ತು ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೊಟ್ಟೂರು ಜಗಳೂರು ತಾಲೂಕುಗಳ ಗಡಿ ಗ್ರಾಮವಾದ ತೂಲಹಳ್ಳಿಯ ತರಳಬಾಳು ವಿದ್ಯಾ ಸಂಸ್ಥೆಯ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿ ಬೆಳೆದಿದ್ದೇನೆ. ಬಿಇಡಿ ವಿದ್ಯಾರ್ಥಿಗಳಿಗೆ ಹಿಂಜರಿಕೆ ಮಾಡಿಕೊಳ್ಳದೇ ಜಗತ್ತಿನೊಂದಿಗೆ ಹೋರಾಡಬೇಕು.
ಕೊರೊನಾ ಜಗತ್ತಿಗೆ ಪಾಠ ಹೇಳಿಕೊಟ್ಟಿದೆ. ಶಿಕ್ಷಕನಾದವನು ಗುರಿ ಇಟ್ಟುಕೊಂಡು ಮುನ್ನುಗ್ಗಬೇಕು. ನಿಮ್ಮ ವೃತ್ತಿ ಜೀವನದಲ್ಲಿ ಕನಿಷ್ಠ 30 ಜನ ಸಾಧಕರನ್ನು ಹೊರತನ್ನಿ. ಹಚ್ಚುವುದಾದರೆ ದೀಪವನ್ನು ಹಚ್ಚಿ, ಬೆಂಕಿಯನ್ನಲ್ಲ ಎಂದು ವಿದ್ಯಾರ್ಥಿಗಳಿಗೆ ಜ್ಞಾನದ ಅರಿವು ಮೂಡಿಸಿದರು.ಜಗಳೂರು ಪಟ್ಟಣದ ಅಮರ ಭಾರತಿ ವಿದ್ಯಾ ಕೇಂದ್ರದ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ಬಿಇಡಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರದಲ್ಲಿ ಇಸ್ರೋ ವಿಜ್ಞಾನಿ ಟಿ.ಎಸ್.ಗೋವಿಂದರಾಜ್ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ಎಂದರೆ ಪಾಠ ಹೇಳಿ ಸಂಬಳ ಪಡೆಯುವುದಲ್ಲ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸುವುದು ಮುಖ್ಯ. ಈಗಿನ ಇಸ್ರೋದ ಅಧ್ಯಕ್ಷರಾದ ಸೋಮನಾಥ್ ಅವರು ಸಹ ಮಲೆಯಾಳಿ ಭಾಷೆಯಲ್ಲೇ ಶಿಕ್ಷಣ ಪಡೆದವರು.
ಇಸ್ರೊದಲ್ಲಿ 17 ಸಾವಿರ ಎಂಜಿನಿಯರ್ಗಳು ಕೆಲಸ ಮಾಡುತ್ತಿದ್ದೇವೆ. ಚಂದಿರನ ಅಂಗಳಕ್ಕೆ ರೋವರ್ ಕಳುಹಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಮಾಜಿ ಅಧ್ಯಕ್ಷ ಶಿವನ್ ನೇತೃತ್ವದಲ್ಲಿ ಚಂದ್ರಯಾನ ಫೇಲೂರ್ ಆದಾಗ ಪ್ರಧಾನಿ ನರೇಂದ್ರ ಮೋದಿ ಅವರು ಬೆನ್ನು ತಟ್ಟಿ ಸಂತೈಸಿದ್ದರು.
ಅದೇ ನಿಜವಾದ ಪ್ರೊತ್ಸಾಹ ಹೀಗಾಗಿ ಚಂದ್ರಯಾನ-2 ಮತ್ತು ಸೂರ್ಯ ಅಧ್ಯಯನಕ್ಕೆ ಆದಿತ್ಯ ಉಪ ಗ್ರಹಗಳನ್ನು ಕಳುಹಿಸಲು ಸಾಧ್ಯವಾಯಿತು ಎಂದು ಅನುಭವ ಹಂಚಿಕೊಂಡರು.
ಅಮರಭಾರತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಶ್ವೇತಾ ಮಧು ಮಾತನಾಡಿ, ಈ ಜಗತ್ತಿನಲ್ಲಿ ಜ್ಞಾನದ ಬಲವಿದ್ದವರನ್ನು ಪೂಜಿಸುತ್ತಾರೆ. ದುರ್ಬಲರಾದರೆ ನಮ್ಮವರೇ ನಮ್ಮನ್ನು ತುಳಿಯುತ್ತಾರೆ.
ಬೋಧನಾ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಜ್ಞಾನವನ್ನು ವೃದ್ಧಿಸಿಕೊಂಡರೆ ಮಾತ್ರ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ. ದೇಶ ಅಭಿವೃದ್ಧಿಯಾಗಬೇಕಾದರೆ ಮಾನವ ಸಂಪನ್ಮೂಲದ ಜತೆಗೆ ಜ್ಞಾನ ಕೌಶಲ ಬೇಕು ಎಂದರು.
ನಾಲಂದ ಕಾಲೇಜು ಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ ಮಾತನಾಡಿ, ಕನ್ನಡ ಮಾಧ್ಯಮದಲ್ಲಿ ಓದಿದ ಮಾತ್ರಕ್ಕೆ ವಿದ್ಯಾರ್ಥಿಗಳು ಕೀಳರಿಮೆ ಪಡುವ ಅಗತ್ಯವಿಲ್ಲ. ಶ್ರಮ, ಶ್ರದ್ಧೆ ಮತ್ತು ಶಿಸ್ತಿ ಜೊತೆಗೆ ನಿರಂತರ ಜ್ಞಾನಾರ್ಜನೆ ಇದ್ದರೆ ಮಾತ್ರ ಪ್ರಶಿಕ್ಷಣಾರ್ಥಿಗಳು ನಿಮ್ಮ ಭವಿಷ್ಯದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಸಾಧ್ಯ. ಓದುವಾಗ ಚನ್ನಾಗಿ ಓದಿ.
ನಿಮ್ನ ಐಡೆಂಟಿಟಿಯನ್ನು ನೀವೆ ಕಂಡುಕೊಳ್ಳಬೇಕು. ನಮ್ಮಿಂದ ಏನಾಗುತ್ತದೆ ಎಂದರೆ ನಮ್ಮ ಶತ್ರುಗಳು ನಮ್ಮ ಕಾಲೆಳೆಯುತ್ತಿರುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಜಗತ್ತನ್ನು ಆಳುತ್ತಿದೆ. ಸಂಶೋದನೆ ಅತ್ಯಂತ ಕೆಳಮಟ್ಟಕ್ಕೆ ಹೋಗಿರುವುದು ಖೇದಕರ. ಪ್ರತಿನಿತ್ಯ ಸಾಹಿತ್ಯ, ಕಲೆ, ಪ್ರಚಲಿತ ವಿದ್ಯಮಾನ ಓದುವವನೇ ನಿಜವಾದ ಶಿಕ್ಷಕ ಎಂದರು.
ಕಾರ್ಯಕ್ರಮದಲ್ಲಿ ಸಿದ್ಧಾರ್ಥ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎಸ್.ಆರ್.ಕಲ್ಲೇಶ್, ನಾಲಂದ ಎಕ್ಸಲೆಂಟ್ ಕೋಚಿಂಗ್ ಸೆಂಟರ್‍ನ ಕಾರ್ಯನಿರ್ವಹಕ ರಾಜೇಶ್ ಜೈನ್, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮಾತೆ ಭಾರತಿ ಅಕ್ಕ, ಬಾಲರಾಜ್, ಕೆ.ಎಸ್.ರವಿ, ಕೆ.ಕೊಟ್ರೋಶ್ ಸೇರಿದಂತೆ ಅನೇಕರು ಇದ್ದರು.