ಸುದ್ದಿವಿಜಯ, ಜಗಳೂರು: ಕೇಂದ್ರದ ಗೃಹ ಸಚಿವ ಅಮಿತ್ ಶಾ ಜೈಲಿಗೆ ಹೋಗಿ ಬಂದಿದ್ದಾರೆ. ಬಿಜೆಪಿಯಲ್ಲೆ ಬೇಲ್ ಮೇಲೆ ಹೊರಬಂದಿರುವ ಬಹಳ ಜನ ನಾಯಕರಿದ್ದಾರೆ. ಅದು ರಾಜ್ಯದ ಜನಕ್ಕೂ ಗೊತ್ತಿದೆ. ನಮ್ಮ ಪಕ್ಷದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡುವ ನೈತಿಕತೆ ಬಿಜೆಪಿ ನಾಯಕರಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಗಳೂರು ಪಟ್ಟಣದ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಗೆಲ್ಲುವ ವಾತಾವರಣವಿದೆ. ನಾವು 130 ಕ್ಷೇತ್ರಗಳಲ್ಲಿ ಗೆದ್ದೆಗೆಲ್ಲುತ್ತೇವೆ. ಚಾಮರಾಜನಗರದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಗೂಟದ ಕಾರು ಕೊಡುವುದಾಗಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಹೇಳಿಕೆ ಈಗ ವೈರಲ್ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ ಎಂದರು.
ಸೋನಿಯಾ ಗಾಂಧೀಯವರ ಬಗ್ಗೆ ಕೆಟ್ಟ ಪದ ಬಳಸಿರುವ ಬಿಜಾಪುರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಂಸ್ಕøತಿ ಎಂತಹದ್ದು ಎಂದು ಎಲ್ಲಿರಗೂ ತಿಳಿದಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಕೇಂದ್ರ ನಾಯಕರು ಬಂದು ಪ್ರಚಾರ ಮಾಡುತ್ತಿದ್ದಾರೆ. ಇವರು ಬಂದು ಪ್ರಚಾರ ಮಾಡಿ ಭ್ರಷ್ಟಾಚಾರ ತೊಳೆದು ಬಿಡುತ್ತಾರಾ? ಈಗಾಗಲೇ ಭ್ರಷ್ಟ ಬಿಜೆಪಿ ಸರಕಾರ ಎಂಬುದು ರಾಜ್ಯದ ಜನತೆಗೆ ತಿಳಿದಿದೆ. ಜಗಳೂರು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್.ಪಿ.ರಾಜೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸುತ್ತೇವೆ. ಯಾವುದೇ ಐಟಿ ಅಧಿಕಾರಿಗಳ ಪ್ರಭಾವಕ್ಕೆ ಒಳಗಾಗಿ ಪಕ್ಷದ ವರಿಷ್ಠರು ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪಗೆ ಟಿಕೆಟ್ ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.