ಸುದ್ದಿವಿಜಯ, ಜಗಳೂರು: ಪುರಾತನ ಪದ್ಧತಿಯಲ್ಲಿ ಕೊಟ್ಟಿಗೆ ಗೊಬ್ಬರಗಳಿಂದ ಮಣ್ಣಿನ ಆರೋಗ್ಯ ಅದ್ಭುತವಾಗಿತ್ತು. ಇತ್ತೀಚೆಗಂತೂ ಮಣ್ಣಿಗೆ ಅತಿಯಾದ ರಾಸಾಯನಿಕ ಗೊಬ್ಬರಗಳನ್ನು ಸೇರಿಸುತ್ತಾ ಹೋದಂತೆ ಮಣ್ಣಿನ ಆರೋಗ್ಯ ಸಂಪೂರ್ಣ ಹಾಳಾಗಿ ಹೋಗಿದ್ದು ಮಣ್ಣಿನ ಪರೀಕ್ಷೆಯೇ ಭೂಮಿಯ ಆರೋಗ್ಯ ಸುಧಾರಣೆಗೆ ಮದ್ದು ಎಂದು ಕೆವಿಕೆ ವಿಜ್ಞಾನಿ ಬಿ.ಓ.ಮಲ್ಲಿಕಾರ್ಜುನ ತಿಳಿಸಿದರು.
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಜರ್ಸ್ (ಲಿ) ಮತ್ತು ಬಿದರಕೆರೆ ಎಫ್‍ಪಿಒ ಸಹಭಾಗಿತ್ವದಲ್ಲಿ ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಸೋಮವಾರ ಉಚಿತ ಮಣ್ಣು ಪರೀಕ್ಷೆ ಪ್ರಾತ್ಯಕ್ಷಿತೆ ಉದ್ಘಾಟಿಸಿ ಅವರು ಮಾತನಾಡಿದರು.
ಮೂರು ವರ್ಷಕ್ಕೆ ಒಮ್ಮೆ ಮಣ್ಣಿನ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಬಹಳ ಸೂಕ್ತ. ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ರಸ ಗೊಬ್ಬರಗಳನ್ನು ಬಳಸುವುದರಿಂದ ಗೊಬ್ಬರದ ಮೇಲೆ ಆಗುವ ಖರ್ಚನ್ನು ಕಡಿಮೆ ಮಾಡಬಹುದು. ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರವನ್ನು ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ರೈತ ಬಾಂಧವರು ಮಣ್ಣಿನ ಪರೀಕ್ಷೆಯ ಮಾಡಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದು ಎಂದರು.
ಮಣ್ಣಿನ ವಿಜ್ಞಾನಿ ಎಚ್.ಎಂ. ಸಣ್ಣಗೌಡರ್ ಮಾತನಾಡಿ, ಮಳೆ ಬರುವ ಮುನ್ನ ಮಣ್ಣಿನ ಪರೀಕ್ಷೆ ಮಾಡಿಸಬೇಕು. ರೈತರು ಬಿತ್ತನೆಗೂ ಮುನ್ನ ನಿಮ್ಮ ಹೊಲದ ಮಣ್ಣಿನಲ್ಲಿ ಯಾವ ಅಂಶ ಕಡಿಮೆಯಿದೆ ಎಂದು ತಿಳಿದು ರಸಗೊಬ್ಬರಗಳನ್ನು ಬಳಸಿವುದರಿಂದ ಕಡಿಮೆ ಖರ್ಚು ಮತ್ತು ಉತ್ತಮ ಬೆಳೆ ಬೆಳೆಯಬಹುದು ಎಂದರು.
ಮಣ್ಣಿನ ಪರೀಕ್ಷೆಯ ಮಾದರಿಯನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎಂದು ಪದ್ಧತಿಯ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. ರೈತಬಾಂಧವರು ಮಣ್ಣು ಮಾದರಿಯನ್ನು ತೆಗೆದುಕೊಳ್ಳುವಾಗ ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಸ್ತರಣಾ ತಜ್ಞರಾದ ರಘುರಾಜ್, ಕುಲಭೂಷಣ್, ಬಿದರಿಕೆರೆ ತರಳಬಾಳು ಅಮೃತ ರೈತರ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ಮಂಜುನಾಥ್ ಹಾಗೂ ಕಟ್ಟಿಗೆಹಳ್ಳಿಯ ಪ್ರಗತಿಪರ ರೈತ ಎನ್.ಎಸ್.ಸೋಮನಗೌಡ ಸೇರಿದಂತೆ ನೂರಾರು ರೈತರು ಪ್ರಾತ್ಯಕ್ಷತೆಯಲ್ಲಿ ಭಾಗವಹಿಸಿ ಮಣ್ಣಿನ ಪರೀಕ್ಷೆ ವಿಧಾನದ ಬಗ್ಗೆ ಮಾಹಿತಿ ಪಡೆದರು.