ಸುದ್ದಿವಿಜಯ, ಜಗಳೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ನಿಂದ ಸಮಾಜದಲ್ಲಿರುವ ಮದ್ಯ ವೆಸನಿಗಳನ್ನು ಮುಕ್ತರನ್ನಾಗಿಸುವ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಅಭಿಪ್ರಾಯ ಪಟ್ಟರು.
ಜಗಳೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಜಿಲ್ಲಾ ಜನಜಾಗೃತಿ ವೇದಿಕೆ, ರಾಜ್ಯ ಮದ್ಯಪಾ ಸಂಯಮ ಮಂಡಳಿ, ತಾಪಂ ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸ್ವಯಂ ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 1691ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಮನೆಯವರನ್ನೇ ಮದ್ಯ ಮುಕ್ತರನ್ನಾಗಿ ಮಾಡುವುದು ಕಷ್ಟ. ಆದರೆ ಡಾ.ವೀರೇಂದ್ರ ಹೆಗ್ಗಡೆ ಅವರು ಸಾಮಾಜಿಕ ಕಳಕಳಿಯಿಂದ ಎಂಟು ದಿನಗಳ ಕಾಲ ಮದ್ಯವರ್ಜನ ಶಿಬಿರ ಆಯೋಜಿಸಿ ತಾಲೂಕಿನ 90 ಜನ ಮದ್ಯ ವೆಸನಿಗಳನ್ನು ಚಟದಿಂದ ಮುಕ್ತರನ್ನಾಗಿಸುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಾವೆಲ್ಲ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ಮಾತನಾಡಿ, ದಿನಕ್ಕೆ 200 ರೂ ನಂತೆ ವರ್ಷಕ್ಕೆ ಲಕ್ಷಾಂತರ ರೂಗಳನ್ನು ಮದ್ಯ ಕುಡಿಯಲು ವಿನಿಯೋಗಿಸಿದರೆ ಯಾವ ಮನೆಯೂ ಉದ್ದಾರವಾಗಲಾರದು. ಕುಡಿತ ಬಿಟ್ಟು ಹಣ ಉಳಿಸಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ, ಆಸ್ತಿ ಕೊಳ್ಳಬಹುದು.
ಮನೆಯಲ್ಲಿರುವ ಹೆಣ್ಣಿಗೆ ಗೌರವವಿರುತ್ತದೆ. ಕುಡಿದು ಜಗಳವಾಡಿದರೆ ಸಂಸಾರದಲ್ಲಿ ನೆಮ್ಮದಿ ಹಾಳಾಗುತ್ತದೆ. ಕುಡಿತ ಬಿಟ್ಟರೆ ಪೊಲೀಸ್ ಇಲಾಖೆಗೂ ಕೆಲಸ ಕಡಿಮೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿ.ಎಸ್.ಚಿದಾನಂದ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಮದ್ಯ ವೆಸನಿಗಳನ್ನು ಬಿಡಿಸುವ ಕಾರ್ಯಕ್ಕೆ ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಮದ್ಯ ವೆಸನದಿಂದ ಕೌಟುಂಬಿಕ ಕಲಹಗಳು ಹೆಚ್ಚು ಎಂದರು.
ಟ್ರಸ್ಟ್‍ನ ಯೋಜನಾಧಿಕಾರಿ ನಾಗರಾಜ್ ಕುಲಾಲ್ ಪ್ರಾಸ್ತಾವಿಕ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಟ್ರಸ್ಟ್‍ನಿಂದ ಪ್ರತಿವರ್ಷ ಮದ್ಯ ಮುಕ್ತ ಸಾಮಾಜಿಕ ಪರಿವರ್ತನೆ ಮಾಡುವ ಶಿಬಿರಗಳ ಆಯೋಜನೆಯಿಂದ ಸಾವಿರಾರು ಮಂದಿ ಮದ್ಯದಿಂದ ಮುಕ್ತರಾಗಿದ್ದಾರೆ. ಇದಕ್ಕೆ ಎಲ್ಲರ ಸಹಕಾರವೇ ಕಾರಣ ಎಂದರು.
ಜಿಲ್ಲಾ ನಿರ್ದೇಶಕ ಎಸ್.ಜನಾರ್ಧನ್, ಸಿ.ತಿಪ್ಪೇಸ್ವಾಮಿ, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ತಾಪಂ ಇಒ ವೈ.ಎಚ್.ಚಂದ್ರಶೇಖರ್ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಡಾ.ಪಿ.ಎಸ್.ಅರವಿಂದನ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಬಿ.ತಿಪ್ಪೇಸ್ವಾಮಿ, ಎಚ್.ಎಂ.ಕರಿಬಸಯ್ಯ, ಸಿ.ಎಂ.ಮಲ್ಲಿಕಾರ್ಜುನ, ಬಿ.ಲೋಕೇಶ್, ಓ.ಮಂಜಣ್ಣ, ರೇವಣ್ಣ, ಹೊನ್ನೂರ್‍ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.