ಸುದ್ದಿವಿಜಯ, ಜಗಳೂರು: ಸುಮಾರು ಎಂಟು ವರ್ಷಗಳಿಂದ ಹೊಲದಲ್ಲಿ ಪೋಷಣೆ ಮಾಡಿ ಬೆಳೆಸಿದ್ದ ನಾಲ್ಕು ಶ್ರೀಗಂಧದ ಮರಗಳಲ್ಲಿ ಹರೆಯಕ್ಕೆ ಬಂದಿದ್ದ ಬೆಲೆ ಬಾಳುವ ಒಂದು ಶ್ರೀಗಂಧದ ಮರವನ್ನು ಗುರುವಾರ ಬೆಳಗಿನ ಜಾಗ ತಾಲೂಕಿನ ಕಿಲಾಕಣ್ವಕುಪ್ಪೆ ಗ್ರಾಮದಲ್ಲಿ ಮರಗಳ್ಳರು ಕತ್ತರಿಸಿ ಕೊಂಡೊಯ್ದಿದ್ದಾರೆ.
ಕಿಲಾಕಣ್ವಕುಪ್ಪೆ ಗ್ರಾಮದ ರೈತ ದುರುಗಪ್ಪ ಅವರ ಜಮೀನಿನಲ್ಲಿ ಶ್ರೀಗಂಧದ ಮರವನ್ನು ಕತ್ತರಿಸಿ ದಿಮ್ಮೆಯನ್ನು ಹೊತ್ತೊಯ್ದಿದ್ದಾರೆ.
ಅಂದಾಜು ಒಂದು ಲಕ್ಷ್ಮ ರೂ ಬೆಲೆ ಬಾಳುವ ಮರದ ದಿಮ್ಮೆಯಾಗಿದ್ದು ಹೊಂಚುಹಾಕಿ ಕತ್ತರಿಸಿದ್ದಾರೆ ಎಂದು ರೈತ ದುರುಗಪ್ಪ ಮತ್ತು ಪುತ್ರ ಉದಯ್ ಬೇಸರ ವ್ಯಕ್ತಪಡಿಸಿದ್ದಾರೆ.
ಕಿಲಾಕಣ್ವಕುಪ್ಪೆ ಗ್ರಾಮ ರಂಗಯ್ಯನ ದುರ್ಗ ಕಾಡಂಚಿನ ಗ್ರಾಮವಾಗಿದ್ದು ಹೊಲದಲ್ಲಿ ಬೆಲೆ ಬಾಳುವ ಮರಗಳ ಕಳ್ಳತನ ಮತ್ತು ಕಾಡಿನ ಮಧ್ಯೆ ತೇಗ, ಬೀಟೆ, ಹೊನ್ನೆ, ಮತ್ತಿ ಮರಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ.
ಮಳೆಯಿಲ್ಲದೇ ಬರಗಾಲ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಮರಗಳ್ಳರು ಬೆಲೆ ಬಾಳುವ ಮರಗಳಿಗೆ ಕೊಡಲಿ ಹಾಕುತ್ತಿದ್ದಾರೆ.
ಸದ್ದೇ ಮಾಡದ ಮರ ಕತ್ತರಿಸುವ ಮಷೀನ್‍ಗಳಿಂದ ಕ್ಷಣಾರ್ಧದಲ್ಲೇ ಮರಗಳನ್ನು ಧರೆಗೆ ಉರುಳಿಸುತ್ತಿದ್ದಾರೆ ಎಂದು ರೈತ ದುರುಗಪ್ಪ ಬೇಸರ ವ್ಯಕ್ತಪಡಿಸಿದರು.
ಶ್ರೀಗಂಧದ ಮರ ಕಳವು ಸಂಬಂಧ ಜಗಳೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪುತ್ರ ಉದಯ್ ದುರುಗಪ್ಪ ದೂರು ದಾಖಲಿಸಿದ್ದಾರೆ.
ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಎಸ್.ಡಿ.ಸಾಗರ್ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.