ಸುದ್ದಿವಿಜಯ, ಜಗಳೂರು: ಕೇಂದ್ರತಂಡದಲ್ಲಿರುವ ರಾಜ್ಯ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರ ಹಾಗೂ ಜಗಳೂರು ಗೊಲ್ಲರಹಟ್ಟಿ ಗ್ರಾಮದವರಾದ ಡಾ.ಶ್ರೀನಿವಾಸರೆಡ್ಡಿ ಕೇಂದ್ರದ ಅಧಿಕಾರಿಗಳಿಗೆ ತಾಲೂಕಿನ ಮತ್ತು ಜಿಲ್ಲೆಯ ಹವಾಗುಣ ಮತ್ತು ಮಳೆಯ ಕೊರತೆ ಬಗ್ಗೆ ವಿವರಿಸಿದ್ದು ತಾಲೂಕಿನ ರೈತರ ಮತ್ತು ಜನತೆಯ ಕಾಳಿಜಿ ಎದ್ದು ಕಾಣುತ್ತಿತ್ತು.
ರೈತರ ಜಮೀನಿನಲ್ಲಿ ಕೇಂದ್ರ ತಂಡ ಬರುತ್ತಿದ್ದಂತೆ ವಾಸ್ತವತೆ ಅನವಾರಣಗೊಳಿಸಿದ ಡಾ.ಶ್ರೀನಿವಾಸ್‍ರೆಡ್ಡಿ ಅವರು, ಕಳೆದ 25 ವರ್ಷಗಳಲ್ಲಿ 17 ವರ್ಷ ಬರಗಾಲವನ್ನು ಜಗಳೂರು ತಾಲೂಕು ಕಂಡಿದೆ. ಜಿಲ್ಲೆಯಾದ್ಯಂತ ಸರಾಸರಿ 500 ಮಿಮೀ ಮಳೆ ಬೀಳುವುದು ಕಷ್ಟ.ಸರಿಯಾದ ಸಮಯಕ್ಕೆ ಮಳೆ ಬರುವುದಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಬೀಳ ಬೇಕಿತ್ತು. ಆದರೆ ಈ ಬಾರಿ ಮಳೆಯೇ ಬಂದಿಲ್ಲ. ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಅಲ್ಪ ಸ್ವಲ್ಪ ಹಸಿರು ಕಾಣುತ್ತಿತ್ತು ಆದರೆ ಜಗಳೂರು ತಾಲೂಕಿನಲ್ಲಿ ಬೆಳೆಯಲಾಗಿರುವ ಶೇಂಗಾ, ಹತ್ತಿ, ರಾಗಿ, ಮೆಕ್ಕೆಜೋಳ ಬೆಳೆಗಳು ಒಣಗಿವೆ. ಅತ್ಯಂತ ಬರ ಪೀಡಿತ ತಾಲೂಕು ಎಂದರೆ ಅದು ಜಗಳೂರು. ಇಲ್ಲಿಯ ಜನರ ಸ್ಥಿತಿ ಹೇಳತೀರದು ಎಂದು ಅಧಿಕಾರಿಗಳಿಗೆ ವಿವರಿಸಿದರು.