ಸುದ್ದಿವಿಜಯ, ಜಗಳೂರು: ನಮ್ಮ ಸರಕಾರದ ಮಹಾತ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳ ಜೊತೆಗೆ ಇಲಾಖಾವಾರು ಸೌಲಭ್ಯಗಳು ಇವೆ. ಅವುಗಳನ್ನು ಸದುಪಯೋಗ ಪಡೆದುಕೊಳ್ಳಿ ಎಂದು ಶಾಸಕ ಬಿ.ದೇವೇಂದ್ರಪ್ಪ ಫಲಾನುಭವಿಗಳಿಗೆ ಮಾಹಿತಿ ನೀಡಿದರು.
ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಗುರುವಾರ ಕರ್ನಾಟಕ ಮಹರ್ಷಿ ವಾಲ್ಮಿಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಡಾ.ಬಾಬು ಜಗಜೀವನ್ ರಾಂ ದ್ವಿಜಕ್ರ ವಾಹನ ಸರಕು ಸಾಗಾಣಿಕ ಯೋಜನೆ ಅಡಿ 16.80 ಲಕ್ಷ ರೂ ಮೊತ್ತದ 24 ಫಲಾನುಭವಿಗಳಿಗೆ ದ್ವಿಚಕ್ರವಾಹನ ವಿತರಣೆ ಮಾಡಿ ಮಾತನಾಡಿದರು.ನಾನು ಶಾಸಕನಾಗಿರುವುದು ನನ್ನ ಮನೆಯ ಅಭಿವೃದ್ಧಿಗಲ್ಲ. ನನ್ನ ಕ್ಷೇತ್ರದ ಜನರ ಅಭ್ಯುದಯಕ್ಕೆ. ಅಧಿಕಾರಿಗಳನ್ನು ನಾನು ಎಂದೂ ನನ್ನ ವೈಯಕ್ತಿಕ ಕಾರ್ಯಗಳಿಗೆ ಬಳಸಿಕೊಳ್ಳುವುದಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ.
ಜನ ಸಾಮಾನ್ಯರಿಗೆ ಸಲ್ಲಬೇಕಾದ ಸರಕಾರದ ಯೋಜನೆಗಳು, ಸೇವೆಗಳು ಅರ್ಹ ಫಲಾನುಭವಿಗಳಿಗೆ ಸಲ್ಲಬೇಕು ಎಂಬ ಕಾರಣಕ್ಕೆ ಸ್ವಲ್ಪ ಏರು ಧ್ವನಿಯಲ್ಲಿ ಹೇಳುತ್ತೇನೆ.
ಅದಕ್ಕೆ ಕೆಲವರು ನನ್ನನ್ನು ರೌಡಿ ಶಾಸಕ ಎಂದು ಸುಳ್ಳು ಬಿತ್ತುತ್ತಾರೆ. ಆದರೆ ನಾನು ಯಾರನ್ನು ಕೊಲೆ ಮಾಡಿಲ್ಲ. ಅಪರಾಧ ಚಟುವಟಿಕೆಗಳಲ್ಲಿ ನಾನು ತೊಡಗಿಕೊಂಡಿಲ್ಲ. ಸಂವಿಧಾನ ಬದ್ಧವಾಗಿ ಕೊಟ್ಟ ಅಧಿಕಾರವನ್ನು ಜನ ಸಾಮಾನ್ಯರಿಗೆ ಸರಿಯಾಗಿ ತಲುಪಿಸಿ ಎಂದು ಹೇಳುತ್ತೇನೆ. ಅದಕ್ಕೆ ಕೆಲವರು ನನ್ನನ್ನು ರೌಡಿ ಶಾಸಕ, ಬಾಯಿಗೆ ಬಂದಂತೆ ಅಪಪ್ರಚಾರ ಮಾಡುತ್ತಾರೆ. ಆಡುವ ಮಾತುಗಳಿಗೆ ಬೀಗ ಹಾಕಲು ಸಾಧ್ಯವಿಲ್ಲ.ಜಗಳೂರು ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಅರ್ಹ ಫಲಾನುಭವಿಗಳಿಗೆ ದ್ವಿಚಕ್ರವಾಹ ವಿತರಣೆ ಮಾಡಲಾಯಿತು.
ಐದು ವರ್ಷಗಳ ನಂತರ ನನ್ನ ಕಾರ್ಯಗಳ ಮೇಲೆ ಟೀಕಿಸಲಿ. ಆದರೆ ಪಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವ ನನಗೆ ಹಾದಿ ಬೀದಿಯಲ್ಲಿ ಕೆಲವರು ಟೀಕಿಸುವುದು ನನ್ನ ಗಮನಕ್ಕೆ ಬಂದಿದೆ.
ಅಂತಹವರಿಗೆ ನನ್ನ ಉತ್ತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿ ತೋರಿಸುತ್ತೇನೆ ಎಂದು ಟೀಕಿಸುವ ಜನರಿಗೆ ಮಾರ್ಮಿಕವಾಗಿ ಚುಚ್ಚಿದರು.
ನಾನು ತಪ್ಪು ಮಾಡಿದ್ದೇನೆ ಎಂದು ನಿಮಗೆ ಅನ್ನಿಸಿದರೆ ತಿದ್ದಿವ ಕೆಲಸ ಮಾಡಿ. ಅದನ್ನು ನಾನು ಸಂತೋಷದಿಂದ ಒಪ್ಪಿಕೊಳ್ಳುತ್ತೇನೆ.
ಅಭಿವೃದ್ಧಿ ಆಧಾರಿತ ಕೆಲಸ ಮಾಡಲು ಸಲಹೆ ನೀಡಿದರೆ ಸ್ವಾಗತಿಸುತ್ತೇನೆ. ತಪ್ಪು ಮಾಡಿದರೆ ತಿದ್ದಿ ಬುದ್ದಿ ಹೇಳಲಿ. ಅದು ಬಿಟ್ಟು ಅಪಪ್ರಚಾರ ಮಾಡಿದರೆ ಅದನ್ನು ನಾನು ಎಂದೂ ಸಹಿಸುವುದಿಲ್ಲ. ನಾನು ಆಡಂಬರದ ಶಾಸಕನಲ್ಲ. ಜನ ಸೇವಕ ಎಂದರು.
ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ಸರಕಾರದ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪಬೇಕಾದರೆ ಅಧಿಕಾರಿಗಳ ಪಾತ್ರ ದೊಡ್ಡದು.
ಸರಕಾರ ಆದೇಶದಂತೆ ನಿಗದಿತ ಸಮಯದ ಒಳಗೆ ಫಲಾನುಭವಿಗಳಿಗೆ ತಲುಪಿದರೆ ಮಾತ್ರ ಸರಕಾರದ ಆಶಯ ಈಡೇರುತ್ತದೆ. ಜನರಿಗೆ ತೊಂದರೆ ಆಗದಂತೆ ಕೆಲಸ ಮಾಡಿ ಎಂದು ಶಾಸಕರು ಹೇಳಿದ್ದಾರೆ.
ಅವರ ಆದೇಶದಂತೆ ಕ್ಷೇತ್ರದ ಅಭಿವೃದ್ಧಿಗೆ ನಾನು ಮತ್ತು ನಮ್ಮ ಅಧಿಕಾರಿಗಳು ಶ್ರಮಿಸುತ್ತೇವೆ ಎಂದು ಹೇಳಿದರು.
ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಾವೀರ್ ಸಜ್ಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪಪಂ ಸದಸ್ಯ ತಾನಾಜಿ ಗೋಸಾಯಿ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ, ಮಹಮದ್ ಆಲಿ, ಮೊಹಮದ್ ಗೌಸ್, ಪಿಎಸ್‍ಐ ಎಸ್.ಡಿ.ಸಾಗರ್, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.