Suddivijayanews22/5/2024
ಸುದ್ದಿವಿಜಯ, ಬೆಂಗಳೂರು:ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಕ್ತಾಯಗೊಂಡಿದೆ. ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆದಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕರ್ನಾಟಕ ಸಹ ಒಂದು. ಆದ್ದರಿಂದ ಫಲಿತಾಂಶದ ಬಗ್ಗೆ ಈಗಾಗಲೇ ಲೆಕ್ಕಾಚಾರ ಆರಂಭವಾಗಿದೆ.
ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಚುನಾವಣಾ ಆಯೋಗ 6 ಮತ್ತು 11 ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ.
ಆರು ಸ್ಥಾನಗಳಿಗೆ ಜೂನ್ 3 ಮತ್ತು 11 ಸ್ಥಾನಗಳಿಗೆ ಜೂನ್ 13ರಂದು ಮತದಾನ ನಡೆಯಲಿದೆ. ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ಒಂದು ಸ್ಥಾನ ಈಗಾಗಲೇ ತೆರವಾಗಿದೆ. ಆಡಳಿತ ಪಕ್ಷ ಕಾಂಗ್ರೆಸ್ ಲೋಕಸಭೆಯ ಜೊತೆಗೆ ಪರಿಷತ್ ಚುನಾವಣೆಯ ಮೇಲೆ ಸಹ ಕಣ್ಣಿಟ್ಟಿದೆ.
ಕರ್ನಾಟಕದ ಕಾಂಗ್ರೆಸ್ ನಾಯಕರು ಲೋಕಸಭೆ, ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತವಿಲ್ಲ. ವಿಧಾನಸಭೆಯಿಂದ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸುವುದು ಪಕ್ಷದ ಗುರಿಯಾಗಿದೆ.
ಈ ಮೂಲಕ ಪರಿಷತ್ ಸಭಾಪತಿ ಸ್ಥಾನ ಪಡೆಯಲು ಪಕ್ಷ ಮುಂದಾಗಿದೆ.
18 ಸೀಟುಗಳ ಲೆಕ್ಕಾಚಾರ:
ಜೂನ್ 13ರಂದು ಮತದಾನ ನಡೆಯುವ 11 ಕ್ಷೇತ್ರಗಳಲ್ಲಿ ಬಿಜೆಪಿಯ 6, ಕಾಂಗ್ರೆಸ್‌ನ 4 ಮತ್ತು ಜೆಡಿಎಸ್‌ನ 1 ಸ್ಥಾನವಿದೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಬೆಳಗಾವಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ಒಂದು ಪರಿಷತ್ ಸ್ಥಾನ ಈಗಾಗಲೇ ಖಾಲಿ ಇದೆ.
ಶಿಕ್ಷಕ, ಪದವೀಧರ ಕ್ಷೇತ್ರದ 6 ಸ್ಥಾನಗಳಿಗೆ ಸಹ ಜೂನ್ 3ರಂದು ಮತದಾನ ನಡೆಯುತ್ತಿದೆ.
ವಿಧಾನಸಭೆಯಲ್ಲಿ 136 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಪಕ್ಷ 12 ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು.
ಬಿಜೆಪಿ 3 ಮತ್ತು 1 ಸ್ಥಾನ ಗೆಲ್ಲಬಹುದು ಎಂಬುದು ಲೆಕ್ಕಾಚಾರ. ಇಲ್ಲಿ ಹೆಚ್ಚು ಸ್ಥಾನಗಳಿಸುವ ಜೊತೆಗೆ 6 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿಯೂ ಹೆಚ್ಚು ಸ್ಥಾನ ಗೆದ್ದು ಪರಿಷತ್‌ನಲ್ಲಿ ಬಹುಮತ ಪಡೆಯಬೇಕು ಎಂಬುದು ಕಾಂಗ್ರೆಸ್ ತಂತ್ರ.
75 ಸದಸ್ಯ ಬಲದ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಸದ್ಯ ಸಭಾಪತಿ ಸೇರಿ 70 ಸ್ಥಾನಗಳು ಭರ್ತಿಯಾಗಿವೆ. ಬಿಜೆಪಿ 32, ಕಾಂಗ್ರೆಸ್ 29, ಜೆಡಿಎಸ್ 7 ಮತ್ತು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.
ಬಿಜೆಪಿ-ಜೆಡಿಎಸ್ ಮೈತ್ರಿಯ ಕಾರಣ ವಿಧೇಯಕ ಮಂಡನೆ ಸಮಯದಲ್ಲಿ ಆಡಳಿತ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಅಲ್ಲದೇ ಸಭಾಪತಿ ಸ್ಥಾನವೂ ಬಿಜೆಪಿಯ ಕೈಯಲ್ಲಿ ಇದೆ. ಆದ್ದರಿಂದ 18 ಸ್ಥಾನಗಳ ಪೈಕಿ ಹೆಚ್ಚು ಗೆದ್ದು, ಪರಿಷತ್ ಬಲ ಹೆಚ್ಚಿಸಿಕೊಳ್ಳುವುದು ಕಾಂಗ್ರೆಸ್ ಗುರಿ.
ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡುವಾಗ ಕಾಂಗ್ರೆಸ್ 11 ಸ್ಥಾನಗಳ ಪೈಕಿ ಸಚಿವ ಎನ್. ಎಸ್. ಬೋಸರಾಜು, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದ ರಾಜು ಅವರನ್ನು ಪುನಃ ಆಯ್ಕೆ ಮಾಡುವುದು ಖಚಿತ. ಅರವಿಂದ್ ಕುಮಾರ್ ಅರಳಿ, ಹರೀಶ್ ಕುಮಾರ್ ಹೆಸರು ಸಹ ಕೇಳಿ ಬರುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಸೇರಿರುವ ಕರಡಿ ಸಂಗಣ್ಣ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಶ್ರೀನಿವಾಸ್, ಡಿ. ಕೆ. ಶಿವಕುಮಾರ್ ಆಪ್ತರಾದ ವಿಜಯ್ ಮುಲಗುಂದ, ಮಾಜಿ ಸಿಎಂ ದೇವರಾಜ್ ಅರಸ್ ಮೊಮ್ಮಗ ಸೂರಜ್ ಹೆಗಡೆ, ಬಿ. ಎಲ್. ಶಂಕರ್, ಪುಷ್ಪಾ ಅಮರನಾಥ್, ಕೆ. ಪಿ. ನಂಜುಂಡಿ ವಿಶ್ವಕರ್ಮ ಹೆಸರುಗಳು ಸಹ ಪಟ್ಟಿಯಲ್ಲಿವೆ ಎಂಬ ಮಾಹಿತಿ ಇದೆ.