ಜಗಳೂರಿನಲ್ಲಿ ಭರ್ಜರಿ ರೋಡ್ ಶೋ‌ ನಡೆಸಿದ ಸುದೀಪ್, ಕಿಚ್ಚನನ್ನು ನೋಡಲು ಬಂದ ಅಭಿಮಾನಿಗಳು

Suddivijaya
Suddivijaya April 26, 2023
Updated 2023/04/26 at 9:23 AM

Suddivijaya|Kannada News | 26-04-2023

ಸುದ್ದಿ ವಿಜಯ ಜಗಳೂರು.ವಿಧಾನಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ  ಎಸ್.ವಿ ರಾಮಚಂದ್ರ ಪರವಾಗಿ  ಚಿತ್ರನಟ ಕಿಚ್ಚ ಸುದೀಪ್‌  ಅವರು  ಭರ್ಜರಿ ರೋಡ್‌ ಶೋ, ಪ್ರಚಾರ ಬುಧವಾರ ನಡೆಯಿತು.

ಮಧ್ಯಾಹ್ನ 12.30ಕ್ಕೆ  ಪಟ್ಟಣಕ್ಕೆ ಆಗಮಿಸಿದ   ಕಿಚ್ಚ ಅವರು ಆಕರ್ಷಕ ರೋಡ್‌ ಶೋನಲ್ಲಿ ಭಾಗವಹಿಸಿ ಅಭಿಮಾನಿಗಳನ್ನು ರಂಜಿಸಿದರು.

ಮೊಳಕಾಲ್ಮೂರಿನಿಂದ ಹೆಲಿಕಾಪ್ಟರ್‌ನಲ್ಲಿ ಅವರು ಜಗಳೂರಿಗೆ  ಬರುತ್ತಿದ್ದಂತೆಯೇ ಅಭಿಮಾನಿಗಳು ಅವರಿಗೆ ಮುತ್ತಿಗೆ ಹಾಕಿದರು.
ಜಗಳೂರು ಕ್ಷೇತ್ರದ ಅಭ್ಯರ್ಥಿ ಎಸ್.ವಿ ರಾಮಚಂದ್ರ  ಸುದೀಪ್‌ ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸಿದರೆ ಅಭಿಮಾನಿಗಳು ಜೆಸಿಬಿ ಯಂತ್ರದ‌ ಮೂಲಕ ಬೃಹತ್  ಹೂವಿನ ಹಾತ ಹಾಕಿ ಅಭಿಮಾನ ಮೆರೆದರು.

ಸುದೀಪ್ ತೆರೆದ ವಾಹನದಲ್ಲಿ ನಿಂತುಕೊಂಡು ಜನರತ್ತಾ ಕೈ ಬೀಸುತ್ತಿದ್ದಂತೆ ಅಭಿಮಾನಗಳಿಂದ ಹರ್ಷೋದ್ಘಾರ  ಮೊಳಗಿತು. ಬಳಿಕ ಅವರು ರೋಡ್‌‌ ಶೋನಲ್ಲಿ ಭಾಗವಹಿಸಿದರು.

ಹಳೆ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸಿದ್ದರು. ಕೈ ಸುದೀಪ್ ಭಾವ ಚಿತ್ರದ ಬಾವುಟಗಳನ್ನು ಹಿಡಿದುಕೊಂಡು  ಜೈ ಸುದೀಪ್ ಎಂದು‌ ಘೋಷಣೆ ಕೂಗಿದರು.

ದಾರಿಯುದ್ದಕ್ಕೂ ಜನರಿಂದ ರಸ್ತೆಗಳೆಲ್ಲಾ ತುಂಬಿದವು. ಮನೆ ಮಹಡಿ, ಮರ, ಮಳಿಗೆ ಹೀಗೆ ಎತ್ತರದಲ್ಲಿರುವ ಸ್ಥಳಗಳಲ್ಲಿ ನಿಂತು ಕಣ್ತುಂಬಿಕೊಂಡರು.

ದಾವಣಗೆರೆ ರಸ್ತೆ, ಹೊಸ ಬಸ್ ನಿಲ್ದಾಣಕ್ಕೆ ಸಾಗಿದ ಮೆರವಣಿಗೆ ಸಮಯವಾಗಿದ್ದರಿಂದ  ಸುದೀಪ್ ಅವರು ಕೆಳಗೆ ಇಳಿದು ಹೊರಟು ಹೋದರು.

ಇದಕ್ಕು‌ ಮುನ್ನ ಮಾತನಾಡಿದ ಸುದೀಪ್  ಪಕ್ಷಕ್ಕಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುತ್ತೇನೆ ಹಾಗಾಗಿ ಶಾಸಕ ಎಸ್.ವಿ ರಾಮಚಂದ್ರ ಅವರು ಮೊದಲಿಂದಲೂ ಸ್ನೇಹಿತರು ಹಾಗಾಗಿ ಅವರ ಪರವಾಗಿ ಬಂದಿದ್ದೇನೆ. ಕ್ಷೇತ್ರದ ಮತದಾರರು ಈ ಭಾರಿ ಶಾಸಕ ಎಸ್.ವಿ ರಾಮಚಂದ್ರ ಅವರನ್ನು ಗೆಲ್ಲಿಸಬೇಕು ಎಂದು‌ ಮನವಿ‌ ಮಾಡಿದರು.

ʻʻಇಂದಿನಿಂದ ಪೂರ್ಣ ಪ್ರಮಾಣದ ಪ್ರಚಾರ ಮಾಡುತ್ತೇನೆ. ಪ್ರಚಾರ ಮುಗಿಯುವವರೆಗೂ ನಾನು ಇರುತ್ತೇನೆ. ಎಲ್ಲದಕ್ಕಿಂತ ಹೆಚ್ಚಾಗಿ ರೋಡ್ ಶೋ ಅಂತ ಹೋಗಿ ತುಂಬಾ ವರ್ಷಗಳಾಗಿದೆ, ತುಂಬಾ ದಿನ ಆಗಿದೆ. ಹೆಬ್ಬುಲಿ ಪ್ರಮೋಷನ್‌ ವೇಳೆ ಹೋದಲೆಲ್ಲಾ ಜನ ತುಂಬ ಪ್ರೀತಿ ತೋರಿಸುತ್ತಿದ್ದಾರೆ. ನನಗೂ ಅಭಿಮಾನಿಗಳನ್ನು ಭೇಟಿ ಮಾಡ್ಬೋದು ಅನ್ನುವ ಸ್ವಾರ್ಥವಿದೆʼʼ

  –    ಕಿಚ್ಚ ಸುದೀಪ್ ಚಿತ್ರ ನಟ.

ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ನಟ ಸುದೀಪ್ ಅವರ ಅಭಿಮಾನಿಗಳು ತುಂಬ ಜನರಿದ್ದಾರೆ. ಅಭಿಮಾನಿಗಳನ್ನು ನೋಡಬೇಕು ಹಾಗೂ ನನ್ನ ಪರವಾಗಿ ಚುನಾವಣಾ ಪ್ರಚಾರ ಮಾಡಲು ಆಗಮಿಸಿದ್ದರು. ಆದರು ಸುದೀಪ್ ಅವರನ್ನು ನೋಡಲು ಇಷ್ಟೊಂದು ಜನರು ಹರಿದು ಬರುತ್ತಾರೆಂದು ಅಂದಕೊಂಡಿರಲಿಲ್ಲ. ಎಲ್ಲರು ಸ್ವಯಂ ಪ್ರೇರಿತರಾಗಿಯೇ ಬಂದಿದ್ದು ತುಂಬ ಖುಷಿ ತಂದಿದೆ. ಮತ್ತೊಮ್ಮೆ ನಿಮ್ಮ ರಾಮಚಂದನ್ನು ಆಯ್ಕೆ ಮಾಡಿ‌ ಆಶೀರ್ವದಿಸಿ”

  – ಎಸ್.ವಿ ರಾಮಚಂದ್ರ, ಅಭ್ಯರ್ಥಿ ಬಿಜೆಪಿ.

ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ  ಎಚ್.ಸಿ‌ ಮಹೇಶ್, ಮುಖಂಡರಾದ ಬಿಸ್ತುವಳ್ಳಿ ಬಾಬು, ಲ್ಯಾಬ್ ಶಿವು ಸೇರಿದಂತೆ ಮತ್ತಿತರಿದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!