Suddivijaya/ kannadanews/20/5/2023
ಸುದ್ದಿವಿಜಯ, ಜಗಳೂರು:ಮನೆಯಲ್ಲಿಯೇ ಸ್ವಚ್ಛತೆ ಮತ್ತು ಕಸವನ್ನು ಮರು ಬಳಕೆ ಅಥವಾ ಗೊಬ್ಬರ ಮಾಡುವ ವಿಧಾನವನ್ನು ಅಳವಡಿಸಿಕೊಂಡಾಗ ಮಾತ್ರ ಪಟ್ಟಣದಲ್ಲಿ ಕಸ ಸಂಗ್ರಹಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಹಾಕಬಹುದು ಎಂದು ಪ.ಪಂ ಮುಖ್ಯಾಧಿಕಾರಿ ಲೋಕ್ಯನಾಯ್ಕ ಹೇಳಿದರು.
ಪಟ್ಟಣದ ಪಂಪ್‌ಹೌಸ್ ಆವರಣದಲ್ಲಿ ಶನಿವಾರ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ನನ್ನ ಜೀವನ, ನನ್ನ ಸ್ವಚ್ಛ ನಗರ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಸ್ವಚ್ಛ ಭಾರತ್ ಯೋಜನೆ, ಪೌರಾಡಳಿತ ನಿರ್ದೇಶನಾಲಯದ ಆದೇಶದಂತೆ ಮೇ 25ರಿಂದ ಜೂನ್ 5ರವರೆಗಿನ ನನ್ನ ಸ್ವಚ್ಛ ನಗರ ಕಾರ್ಯಕ್ರಮಕ್ಕೆ ಪಟ್ಟಣದ ಜನತೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನಾವುಗಳು ಉಪಯೋಗಿಸುವ ತ್ಯಾಜ್ಯವನ್ನು ನವೀಕರಿಸಿ ಮರು ಬಳಸಲು ಸಾಧ್ಯವಾಗದ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸುವುದೆ ಈ ಅಭಿಮಾನದ ಪ್ರಮುಖ ಉದ್ದೇಶವಾಗಿದೆ.
ತ್ಯಾಜ್ಯದ ಪ್ರಮಾಣ ಕಡಿಮೆಗೊಳಿಸುವುದು ಮತ್ತು ಮರು ಬಳಕೆ ಬಗ್ಗೆ ಅಭಿಯಾನ ಹಾಗೂ ಈ ಸಂಬಂಧ ಜಾಗೃತಿ ಮೂಡಿಸಲು ಪಟ್ಟಣದ ಪಂಪ್ ಹೌಸ್‌ನ ಮಳಿಗೆಯನ್ನು ತಾತ್ಕಾಲಿಕವಾಗಿ ಉಪಯೋಗಿಸಿಕೊಳ್ಳಲಾಗುವುದು.
ಸಾರ್ವಜನಿಕರು ತಮ್ಮಲ್ಲಿರುವ ಹಳೆಯ ಆಟಿಕೆ ವಸ್ತುಗಳು, ಬಟ್ಟೆ, ಜೀನ್ಸ್ ಬಟ್ಟೆ, ಸಮವಸ್ತ್ರ, ಸೀರೆ, ದಿನಪತ್ರಿಕೆ, ಹಳೇಪುಸ್ತಕ, ಪ್ಲಾಸ್ಟಿಕ್ ಚೀಲ, ಕ್ಯಾರಿ ಬ್ಯಾಗ್, ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡಿ ಸಹಕರಿಸಬೇಕು.
ಅಲ್ಲದೆ ಈ ಮಹತ್ತರವಾದ ಕೆಲಸಕ್ಕೆ ಪರಿಸರವಾದಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕೈ ಜೊಡಿಸಬೇಕು.
ಈ ಬಗ್ಗೆ ಸದ್ಯದಲ್ಲೇ ಶಾಲಾ ಕಾಲೇಜು ಮತ್ತು ಸಂಘಟನೆಗಳನ್ನು ಬಳಸಿಕೊಂಡು ಅಭಿಯಾನ ನಡೆಸಲಾಗುವುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಮಾತನಾಡಿ, ಎಲ್ಲೆಂದರಲ್ಲಿ ಜನರು ಕಸ ಹಾಕುವ ಅಭ್ಯಾಸ ಮಾಡಿಕೊಂಡಿದ್ದಾರೆ.
ಹೆಚ್ಚಾಗಿ ಪ್ಲಾಸ್ಟಿಕ್ ಬಳಕೆಯಿಂದ ಇಡೀ ನಗರ ಪ್ಲಾಸ್ಟಿಕ್ ಮಯವಾಗಿದೆ. ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹಗಲು ರಾತ್ರಿ ಪರಿಶೀಲಿಸಿದಾಗ ಮಾತ್ರ ಇಂತಹ ಅಭಿಯಾನಕ್ಕೆ ಅರ್ಥ ಬರುತ್ತದೆ ಎಂದರು.
ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಉಪಾಧ್ಯಕ್ಷ ಎನ್.ಎಂ ಲೋಕೇಶ್ ಮಾತನಾಡಿ, ಕೇಂದ್ರ ಸರ್ಕಾರ ಉತ್ತಮವಾದ ಕಾರ್ಯಕ್ರಮವನ್ನು ಕೊಟ್ಟಿದೆ ಜನತೆ ಇದನ್ನು ಸದುಪಯೋಪಡಿಸಿಕೊಳ್ಳುವುದರಿಂದ ಮುಂದಾಗುವ ಅನಾರೋಗ್ಯದಿಂದ ತಪ್ಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷೆ ನಿರ್ಮಲಕುಮಾರಿ, ಸದಸ್ಯರಾದ ಲಲೀತ ಶಿವಣ್ಣ, ರವಿಕುಮಾರ್, ರಮೇಶ್‌ರೆಡ್ಡಿ, ಪಾಪಲಿಂಗಪ್ಪ, ಲುಕ್ಮಾನ್ ಖಾನ್, ಮಹಮದ್, ಶಾಹೀನಾ, ಸಿಪಿಐ ಶ್ರೀನಿವಾಸ್, ಆರೋಗ್ಯ ನಿರೀಕ್ಷಕ ಕಿಫಾಯಿತ್ ಸೇರಿದಂತೆ ಮತ್ತಿತರಿದ್ದರು.