ಸುದ್ದಿವಿಜಯ, ಜಗಳೂರು: ಮೇ.10 ರಂದು ಚುನಾವಣೆ ನಿಗದಿಯಾಗಿದ್ದು ಈ ಬಾರಿ ಶೇ.100 ಮತದಾನ ಯಶಸ್ವಿಯಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ, ತಾಪಂ ಮತ್ತು ಪಟ್ಟಣ ಪಂಚಾಯಿತಿ ಸಹಭಾಗಿತ್ವದಲ್ಲಿ ಜಗಳೂರು ತಾಲೂಕಿಗೆ ಒಳಪಡುವ 10 ಗ್ರಾಪಂ ಮತ್ತು ಪಟ್ಟಣ ಪಂಚಾಯಿತಿಯಲ್ಲಿ ಚುನಾವಣಾ ಜಾಗೃತಿ ಕಾರ್ಯಕ್ರಮ ಶನಿವಾರ ಯಶಸ್ವಿಯಾಗಿ ನೆರವೇರಿತು.
ಪಟ್ಟಣದ ಮಹಾತ್ಮಗಾಂಧಿ ಬಸ್ ನಿಲ್ದಾಣದಲ್ಲಿ ತಾಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಮತ್ತು ತಾಪಂ ಇಓ ವೈ.ಎಚ್.ಚಂದ್ರಶೇಖರ್ ಮತದಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ, ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್, ಭಾರತದ ಚುನಾವಣಾ ಆಯೋಗ ಈ ಬಾರಿ ಅತಿಹೆಚ್ಚು ಮತದಾನವಾಗಬೇಕು ಎಂಬ ಗುರಿ ಹೊಂದಿದೆ.
ಈ ನಿಟ್ಟಿನಲ್ಲಿ ಮೇ.10 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಗ್ರಾಮೀಣ ಮತ್ತು ಪಟ್ಟಣದ ಜನತೆಗೆ ಚುನಾವಣೆ ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ವಯಸ್ಕರರು, ಈಗಷ್ಟೇ 18 ತುಂಬಿದ ಮತದಾರರಿಗೆ ಚುನಾವಣೆ ಪ್ರಕ್ರಿಯೆಯಲ್ಲಿ ಹೇಗೆ ಭಾಗವಹಿಸುವುದು ಎಂಬುದರ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ರಜಾಪ್ರಭುತ್ವ ಘಟ್ಟಿಯಾಗಿ ಬೇರೂರಬೇಕಾದರೆ ಚುನಾವಣೆಗಳು ನಿಸ್ಪಕ್ಷಪಾತವಾಗಿ ನಡೆಯಬೇಕು. ಖಡ್ಡಾಯವಾಗಿ ಮತದಾರರು ಪಾಲ್ಗೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಮಾತನಾಡಿ, ಪಟ್ಟಣದಲ್ಲಿ ಪ್ರತಿನಿತ್ಯ ಚುನಾವಣಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಚುನಾವಣೆ ನಡೆಯುವ 17 ವಾರ್ಡ್‍ಗಳಲ್ಲಿ ಭಾನುವಾರ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪೌರಕಾರ್ಮಿಕರು, ಸಿಬ್ಬಂದಿ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುತ್ತಿದ್ದಾರೆ ಎಂದರು.
ತಾಪಂ ಇಓ ಚಂದ್ರಶೇಖರ್ ಮಾತನಾಡಿ, ಈಗಾಗಲೇ 12 ಗ್ರಾಪಂಗಳಲ್ಲಿ ಜಿಲ್ಲಾಡಳಿತ, ಸ್ವೀಪ್ ಸಮಿತಿ, ಜಿಪಂ, ತಾಪಂ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಳಿಚೋಡು, ಹಾಲೇಕಲ್ಲು, ಗುತ್ತಿದುರ್ಗ, ದೇವೀಕೆರೆ, ಬಿಸ್ತುವಳ್ಳಿ, ಬಿದರಕೆರೆ, ತೋರಣಗಟ್ಟೆ, ಕಲ್ಲೇದೇವರಪುರ, ದೊಣೆಹಳ್ಳಿ ಸೇರಿದಂತೆ ಅನೇಕ ಗ್ರಾಪಂಗಳಲ್ಲಿ ಸ್ವೀಪ್ ಜಾಗೃತಿ ರಥ ಗ್ರಾಮೀಣ ಜನರಲ್ಲಿ ಅರಿವು ಮೂಡಿಸಿದೆ ಎಂದು ಹೇಳದರು.
ಈ ವೇಳೆ ಅನೇಕ ಗ್ರಾಪಂಗಳ ಪಿಡಿಒಗಳು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ನೂರಾರು ಪೌರಕಾರ್ಮಿಕರು, ಅಧಿಕಾರಿಗಳು, ಪಿಡಿಒ ಸೇರಿದಂತೆ ಅನೇಕರು ಭಾಗವಹಿಸಿದ್ದರು.