ಸುದ್ದಿವಿಜಯ, ಜಗಳೂರು: ವಿಜಯನಗರ ಜಿಲ್ಲೆ ಕೊಟ್ಟೂರಿನಲ್ಲಿ ಶನಿವಾರದಿಂದ ಆರಂಭವಾಗಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಹಿನ್ನೆಲೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳಿಗೆ ಮಾರ್ಗದುದ್ದಕ್ಕೂ ಭಕ್ತರು ಭವ್ಯವಾದ ಸ್ವಾಗತ ಕೋರಲಾಯಿತು.
ಓಬವ್ವನಾಗತಿಹಳ್ಳಿ, ಸಿರಿಗೆರೆ, ಸಿರಿಗೆರೆ ಕ್ರಾಸ್, ಗೌರಮ್ಮನಹಳ್ಳಿ, ಮುದ್ದಾಪುರ, ಬಿದರಕೆರೆ ಮಾರ್ಗವಾಗಿರು ಶ್ರೀಗಳ ಕಾರು ಆಗಮಿಸುತ್ತಿದ್ದಂತೆ ಭಕ್ತರು ಜಾನಪದ ಕಲಾಪ್ರಕಾರಗಳಿಂದ ಅದ್ಧೂರಿಯಾಗಿ ಸ್ವಾಗತಿಸಿದರು. ಮಹಿಳೆಯರು ಆರತಿ ಎತ್ತುವ ಮೂಲಕ ಶ್ರೀಗಳಿಂದ ಆಶೀರ್ವಾದ ಪಡೆದರು.
ಶ್ರೀಗಳು ಬಿದರಕೆರೆ ಗ್ರಾಮಕ್ಕೆ ಬರುತ್ತಿದ್ದಂತೆ ಶಾಸಕ ಎಸ್.ವಿ.ರಾಮಚಂದ್ರ ಮತ್ತು ಮಾಜಿ ಶಾಸಕ ಎಚ್.ಪಿ.ರಾಜೇಶ್ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು. ದಾರಿಯುದ್ದಕ್ಕೂ ಅಲ್ಲಲ್ಲಿ ಉಚಿತವಾಗಿ ನೀರಿನ ಅರವಂಟಿಕೆ ವ್ಯವಸ್ಥೆ ಮಾಡಲಾಗಿತ್ತು.
ಜಗಳೂರು ಪಟ್ಟಣಕ್ಕೆ ಶ್ರೀಗಳ ವಾಹನ ಆಗಮಿಸುತ್ತಿದ್ದಂತೆ ಅಂದಾಜು 500ಕ್ಕೂ ಹೆಚ್ಚು ಕಾರ್‍ಗಳು, ಲೆಕ್ಕವಿಲ್ಲದಷ್ಟು ದ್ವಿಚಕ್ರವಾಹನ ಸವಾರರು ಶಿವ ಧ್ವಜ ಹಿಡಿದು ಕೇಕೆ ಹಾಕುತ್ತಾ ಶ್ರೀಗಳನ್ನು ಬರಮಾಡಿಕೊಂಡರು.
ಭಕ್ತರಿಗೆ ಪ್ರಸಾದ ವ್ಯವಸ್ಥೆ: ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ದಿದ್ದಿಗೆ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಅಂದಾಜು 7000 ಸಾವಿರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಶ್ರೀಗಳು ಸಹ ಪ್ರಸಾದ ಸ್ವೀಕರಿಸಿದರು. ಅಲ್ಲಿಂದ ಕೆಚ್ಚೇನಹಳ್ಳಿ, ಉಜ್ಜಿನಿ, ಹುಣಿಸೆಕಟ್ಟೆ ಕ್ರಾಸ್ ವಡ್ಡೇರಹಳ್ಳಿ ಗ್ರಾಸ್ ಮೂಲಕ ಕೊಟ್ಟೂರು ತಲುಪಿದರು.
ಸಿಂಗಾರಗೊಂಡ ಜಗಳೂರು ಪಟ್ಟಣ: ಶ್ರೀಗಳು ಆಗಮನ ಹಿನ್ನೆಲೆ ಜಗಳೂರು ಪಟ್ಟಣದಲ್ಲಿ ಧೂಳು ಕಡಿಮೆ ಮಾಡಲು ನೀರು ಹಾಕಿ ತಳಿರು ತೋರಣಗಳಿಂದ ಸಿಂಗರಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ಅಲ್ಲಲ್ಲಿ ಡೊಳ್ಳು, ಸಮಾಳ, ಕಹಳೆ ಊದುವ ಮೂಲಕ ಶ್ರಿಗಳಿಗೆ ಭವ್ಯವಾದ ಸ್ವಾಗತವನ್ನು ಭಕ್ತರು ಕೋರಿದರು.
5 ಸಾವಿರ ಬೈಕ್ ರ್ಯಾಲಿ : ಸಿರಿಗೆರೆಯಿಂದ ಕೊಟ್ಟೂರಿಗೆ ತೆರಳಲು ಸುಮಾರು 5 ಸಾವಿರ ಯುವಕರು ಬೈಕ್ ರ್ಯಾಲಿ ಹಮ್ಮಿಕೊಂಡಿದ್ದರು ಹಾಗಾಗಿ ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಎಲ್ಲಾ ರಸ್ತೆಗಳು ಜಾಮ್ ಆಗಿದ್ದವು ಬೈಕ್ ನಲ್ಲಿ ಹೋಗುತ್ತಿದ್ದ ಯುವಕರು ಶಿವ ಶಿವ ಶಿವ ಎಂಬ ಉದ್ಘಾರ ಮುಗಿಲು ಮುಟ್ಟಿತು.
ಈ ವೇಳೆ ಶಾಸಕ ಎಸ್.ವಿ. ರಾಮಚಂದ್ರ, ಸಂಸದ ಜಿ.ಎಂ. ಸಿದ್ದೇಶ್ವರ ಪುತ್ರ ಅನಿತ್ ಕುಮಾರ್ ಶ್ರೀಗಳನ್ನು ಸನ್ಮನಿಸಿದರು. ಜೆಡಿಎಸ್ ಮುಖಂಡರಾದ ರುದ್ರೇಶ್ ಮತ್ತು ಮೋಹನ್ ಮುಖಂಡರಾದ ಶಿವನ ಗೌಡ, ಭೈರೇಶ್, ಬಸಪುರ ರವಿಚಂದ್ರ, ಗೀರಿಶ್ ಒಡೆಯರ್, ಬಸವರಾಜಪ್ಪ, ಕೀರ್ತಿ ಕುಮಾರ್, ಕೊರಟಿಕೆರೆ ಗೌಡ, ಕೆಚ್ಚೇನಹಳ್ಳಿ ಸಿದ್ದೇಶ್, ದೀಪಕ್ ಪಟೇಲ್, ಸಿಪಿಐ ಶ್ರೀನಿವಾಸ್ ಸೇರಿದಂತೆ ಅನೇಕರು ಇದ್ದರು.