ಸುದ್ದಿವಿಜಯ, ಜಗಳೂರು: ಶಿಕ್ಷಕರು ಆಧುನಿಕ ಅಮರಶಿಲ್ಪಿ ಜಕಣಾಚಾರಿಗಳಿದ್ದಂತೆ. ಜೀವಂತ ಕಗ್ಗಲ್ಲುಗಳನ್ನು ಭೌದ್ಧಿಕತೆಯ ಉಳಿಪೆಟ್ಟುಕೊಟ್ಟು ಮನುಷ್ಯನನ್ನು ಜ್ಞಾನದ ಮೂರ್ತಿಗಳನ್ನಾಗಿಸುವ ದೇವರಿದ್ದಂತೆ ಎಂದು ಶಾಸಕ ಬಿ.ದೇವೇಂದ್ರಪ್ಪ ಸ್ಮರಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ ವತಿಯಿಂದ ಸೋಮವಾರ ಗುರುಭವನದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭ ಮತ್ತು ನೂತನ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನನ್ನನ್ನು ಮೂರ್ತಿ ಮಾಡಿದ್ದು ತೋರಣಗಟ್ಟೆ ಭೀಮಪ್ಪ ಮೇಸ್ಟ್ರು. ಅವರು ಪ್ರಾಥಮಿಕ ಶಿಕ್ಷಣ ನೀಡದೇ ಇದ್ದಿದ್ದರೆ ನಾನು ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ. ಲಕ್ಷ್ಮೀ ನಿಂತ ನೀರಿದ್ದಂತೆ ಸರಸ್ವತಿ ಹರಿಯುವ ನೀರು. ಹಣ, ಶ್ರೀಮಂತಿಕೆಯನ್ನು ಯಾರು ಬೇಕಾದರೂ ಕಳ್ಳತನ ಮಾಡಬಹುದು ಆದರೆ ಬೌದ್ಧಿಕ ಶ್ರೀಮಂತಿಕೆಯಾದ ವಿದ್ಯೆಯನ್ನು ಯಾರೂ ಕಳ್ಳತನ ಮಾಡಲು ಸಾಧ್ಯವಿಲ್ಲ ಎಂದರು.
ನನಗೆ ಐದು ವರ್ಷ ಜನ ಸೇವೆ ಮಾಡಲು ಅವಕಾಶ ಕೊಟ್ಟಿದ್ದೀರಿ. ನಾನು ಸಹ ನನ್ನ ವೃತ್ತಿ ಜೀವನವನ್ನು ಗಂಟೆ ಭಾರಿಸಿ, ಕಸಗುಡಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ಮೂಕನನ್ನು ವಾಚಸ್ಪತಿ ಮಾಡುವ ಶಕ್ತಿ ಶಿಕ್ಷಕರಿಗಿದೆ.ನನ್ನದು ಐದು ವರ್ಷದ ಸೇವೆ, ನಿಮ್ಮದು 35 ವರ್ಷಗಳ ಸಾರ್ವಜನಿಕ ಸೇವೆ.
ನಾನಿನ್ನು ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯದ ಕೆಲಸ ಆರಂಭಿಸಿಲ್ಲ. ಈಗಲೇ ನನ್ನನ್ನು ಮೇಲೆತ್ತಿ ನಿಮ್ಮ ಕೆಲಸ ಮಾಡಿಸಿಕೊಳ್ಳಲು ಜನಪ್ರಿಯ ಶಾಸಕ ಎಂಬ ಬಿರುದು ನೀಡುವ ಅಗತ್ಯವಿಲ್ಲ. ನಾನೊಬ್ಬ ಅನಾನುಭವಿ ಶಾಸಕ. ಈಗಷ್ಟೇ ಕಲಿಯುತ್ತಿದ್ದೇನೆ.
ಐದು ವರ್ಷ ಪೂರ್ಣಗೊಂಡ ಬಳಿಕ ನನ್ನನ್ನು ಜನಪ್ರಿಯ ಶಾಸಕ ಎಂದು ಕರೆದರೆ ಸಾರ್ಥಕವಾದೀತು. ನಿಮ್ಮ ಸ್ವಾರ್ಥಕ್ಕಾಗಿ ಜನಪ್ರಿಯ ಶಾಸಕ ಎನ್ನಬೇಡಿ. ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮಾಡಿ ಯಾರನ್ನು ಮೆಚ್ಚಿಸುವ ಕೆಲಸ ಮಾಡಬೇಡಿ. ಮಕ್ಕಳ ಶಿಕ್ಷಣದ ಜೊತೆಗೆ ಬಿಸಿಯೂಟ ನಿರ್ವಹಣೆ ದೊಡ್ಡ ಜವಾಬ್ದಾರಿಗಳಿವೆ. ನೀವೆಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಿ ಎಂದು ಸೂಚ್ಯವಾಗಿ ನುಡಿದರು.
ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ತಾಲೂಕಿನಲ್ಲಿ ಅನೇಕ ಸರಕಾರಿ ಶಾಲೆಗಳು ಸೊರುತ್ತವೆ. ಶೌಚಾಲಯಗಳಿಲ್ಲ. ಶಾಸಕರು ಹೆಚ್ಚಿನ ಅನುದಾನ ನೀಡುವ ಮೂಲಕ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ನಿವೃತ್ತಿಯಾದ 27 ಜನ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಂ.ಹನುಮಂತೇಶ್, ಕಾರ್ಯದರ್ಶಿ ಆಂಜನೇಯ ನಾಯ್ಕ್, ಬಿಇಒ ಸುರೇಶ್‍ರೆಡ್ಡಿ, ಉಮಾದೇವಿ, ಉಮೇಶ್, ಶಿಕ್ಷಣ ಸಮನ್ವಯಾಧಿಕಾರಿ ಡಿ.ಡಿ.ಹಾಲಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.