suddivijayanews12/07/2024
ಸುದ್ದಿವಿಜಯ, ಜಗಳೂರು: ಯುವ ಜನತೆ ದೇಶದ ಸಂಪತ್ತು. ವಿದ್ಯಾರ್ಥಿಗಳು ತಮ್ಮ ಅವದಿಯಲ್ಲಿ ಓದು ಮತ್ತು ಕಾನೂನು ಬಗ್ಗೆ ಗೌರವ ಇದ್ದರೆ ಭವಿಷ್ಯ ಸುಂದರವಾಗಿರುತ್ತದೆ. ಒಂದು ವೇಳೆ ಮಾದಕ ವೆಸನಕ್ಕೆ ಬಲಿಯಾದರೆ ಭವಿಷ್ಯ ಹಾಳು ಮಾಡಿಕೊಳ್ಳಬೇಕಾಗುತ್ತದೆ ಎಂದು ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ಹೇಳಿದರು.
ಪಟ್ಟಣದ ನಾಲಂದ ಕಾಲೇಜು ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಅಮರ ಭಾರತಿ ವಿದ್ಯಾಕೇಂದ್ರ ಇವರ ಸಹಯೋಗದಲ್ಲಿ ಗುರುವಾರ ತೆರೆದ ಮನೆ ಕಾರ್ಯಕ್ರಮದಡಿ ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರುದ್ಧ ಅಂತರಾಷ್ಟ್ರೀಯ ದಿನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದ ಭವಿಷ್ಯ ಯುವ ಜನತೆಯ ಮುಂದಿದೆ. ಆದರೆ ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗಿ ಸಮಾಜಕ್ಕೆ ಮಾರಕವಾಗುತ್ತಿದ್ದಾರೆ ಎಂದು ಪಿಐ ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.
ಹೆರಿಗೆ ಸಮಯದಲ್ಲಿ ಪ್ರಾಣಕ್ಕೂ ಕುತ್ತು ಬರುವ ಸಾಧ್ಯತೆ ಇರುತ್ತದೆ. ಸಾಧ್ಯವಾದಷ್ಟು ನಿಮ್ಮ ಪಾಲಕರಿಗೆ ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಾರ್ವಜನಿಕ ಸ್ಥಳ, ಮನೆ, ಕಚೇರಿ ಸೇರಿದಂತೆ ಯಾವುದೇ ಸ್ಥಳಗಳಲ್ಲೂ ಬಾಲಕಿಯರ, ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅಸಭ್ಯ ವರ್ತನೆಗಳು, ಲೈಂಗಿಕ ಕಿರುಕುಳ ನಡೆದರೆ ಅದು ಅಪರಾಧವಾಗುತ್ತದೆ.
ಅಂತಹ ಪರಿಸ್ಥಿತಿ ಬಂದಾಗ ತಕ್ಷಣವೆ 112 ಗೆ ಕರೆ ಮಾಡಿದರೆ ನಿಮ್ಮ ನೆರವಿಗೆ ಪೊಲೀಸ್ ಇಲಾಖೆ ಬಂದು ನಿಮಗೆ ರಕ್ಷಣೆಯನ್ನು ನೀಡುತ್ತದೆ ಎಂದರು.
ವಿದ್ಯಾರ್ಥಿ ಜೀವನದ ಪಿಯುಸಿ ಹಂತದಲ್ಲಿ ಆಕರ್ಷಣೆಯ ಪ್ರೀತಿ ಎಂಬ ಬಲೆಗೆ ಬಿದ್ದು ಹಾಳಾಗಬೇಡಿ, ಪಾಲಕರು ತಮ್ಮ ಭವಿಷ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿ ಓದಿಸುತ್ತಾರೆ ಅವರಿಗೆ ಗೌರವ ತರುವ ಕೆಲಸ ಮಾಡಬೇಕೆ ಹೊರತು ಮರ್ಯಾದೆ ಹಾರಾಜು ಹಾಕಬಾರದು ಎಂದರು.
18ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವಾಹನ ಚಾಲನೆ ಮಾಡಬಾರದು ಒಂದು ವೇಳೆ ತಪ್ಪಿದ್ದಲ್ಲಿ ಬೈಕ್ ಮಾಲೀಕರಿಗೆ 25ಸಾವಿರ ದಂಡ ವಿಧಿಸಿ ಚಾಲನೆ ಮಾಡಿದರಿಗೂ ದಂಡ ವಿಧಿಸಲಾಗುತ್ತದೆ.
ವಯಸ್ಸು 18ವರ್ಷ ಪೂರ್ಣಗೊಂಡು ಮೇಲೆ ವಾಹನ ಚಾಲನೆ ಪರವಾನಿಗೆ ಪಡೆದುಕೊಂಡು, ತಲೆಗೆ ಹೆಲ್ಮೆಟ್ ಹಾಕಿಕೊಂಡು ಗಾಡಿ ಚಲಾಯಿಸಿ ಮತ್ತು ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಿ ಎಂದು ತಿಳಿಸಿದರು.
ಪೊಲೀಸ್ ಠಾಣೆ ಭೇಟಿಕೊಡಿ:
ಸೋಮವಾರದಿಂದ ಶುಕ್ರವಾರದವರೆಗೂ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಬಂದು ಅಲ್ಲಿನ ಆಡಳಿತದ ವೈಖರಿ, ಹುದ್ದೆಗಳ ಕೆಲಸ ನಿರ್ವಹಣೆ, ಸೇರಿದಂತೆ ಅನೇಕ ವಿಷಯಗಳ ಬಗ್ಗೆ ತಿಳಿದುಕೊಳ್ಳಬಹುದು ಇದರಿಂದ ಪೊಲೀಸ್ ಠಾಣೆಯ ಬಗ್ಗೆ ಇರುವ ಭಯ ಆತಂಕ ದೂರವಾಗುತ್ತದೆ.
ಅದಲ್ಲದೆ ಭವಿಷ್ಯದಲ್ಲಿ ಪೊಲೀಸ್ ಆಗಲು ಬಯಸುವ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಪಿಐ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಬಿಎನ್‍ಎಂಸ್ವಾಮಿ,
ಎನ್‍ಎಸ್‍ಎಸ್ ಅಧಿಕಾರಿ ಎ.ಪಿ.ನಿಂಗಪ್ಪ, ಉಪನ್ಯಾಸಕ ಚಂದ್ರಪ್ಪ,ಪೊಲೀಸ್ ಸಿಬ್ಬಂದಿಗಳಾದ ಮಾರುತಿ, ನಾಗಭೂಷಣ್ ಸೇರಿದಂತೆ ಮತ್ತಿತರರಿದ್ದರು.