ಸುದ್ದಿವಿಜಯ, ಜಗಳೂರು: ಆ ಮಹಿಳೆ ಕಳೆದ ಮೂರು ದಿನಗಳ ಹಿಂದೆ ತಮ್ಮ ಮನೆ ದೇವರಾದ ಕಲ್ಲೇದೇವರಪುರ ಗ್ರಾಮದ ಕಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೊರಟಿದ್ದರು. ಕತ್ತಲಗೆರೆಯಿಂದ ಜಗಳೂರಿಗೆ ಬಂದು ಮಹಾತ್ಮಾಗಾಂಧಿ ಬಸ್ ನಿಲ್ದಾಣದಲ್ಲಿ ಇಳಿದಾಗ ಶೌಚಕ್ಕೆಂದು ತಮ್ಮ ಸಂಬಂಧಿ ಮಗುವಿನ ಬಳಿ ಬ್ಯಾಗ್, ಹಣ ಪರ್ಸ್, ಮೊಬೈಲ್ ಕೊಟ್ಟು ಹೋಗಿದ್ದರು.
ಮಗು ಮಕ್ಕದಲ್ಲೇ ಬ್ಯಾಗ್ ಇಟ್ಟುಕೊಂಡು ಕುಳಿತಿತ್ತು. ಇದನ್ನೆಲ್ಲಾ ಗಮನಿಸಿದ ಕಳ್ಳರು ಮಗುವಿನ ಗಮನ ಬೇರೆಡೆ ಸೆಳೆದು ಬ್ಯಾಗ್‍ನಲ್ಲಿದ್ದ ಪರ್ಸ್, ಮೊಬೈಲ್ ಎಗರಿಸಿದ್ದರು. ಹಣ ಕಳೆದುಕೊಂಡ ಮಹಿಳೆ ಕತ್ತಲಗೆರೆ ಗ್ರಾಮದ ರೇಣುಕಾ ಬೇಸರಗೊಂಡು ಇತ್ತ ಊರಿಗೆ ಹೋಗಲು ಹಣ ವಿಲ್ಲದೇ, ಸಂಪರ್ಕಿಸಲು ಮೊಬೈಲ್ ಇಲ್ಲದೇ ದಿಕ್ಕು ತೋಚದಂತೆ ಕುಳಿತರು.
ತಕ್ಷಣ ಸ್ಥಳೀಯರ ನೆರವು ಪಡೆದು ಪೊಲೀಸ್ ಠಾಣೆಗೆ ಬಂದು ವಿಷಯ ತಿಳಿಸಿದಾಗ ಪೊಲೀಸರು ದೂರು ಸ್ವೀಕರಿಸಿದರು. ತಕ್ಷಣ ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್‍ರಾವ್ ಮತ್ತು ಪಿಎಸ್‍ಐ ಸಾಗರ್ ನೇತೃತ್ವದಲ್ಲಿ ಪೊಲೀಸರು ಕಾರ್ಯಪ್ರವೃತ್ತರಾದರು. ಸಿಸಿಟಿವಿ ಚಕ್ ಮಾಡಿದರೂ ಅದರಲ್ಲಿ ಕಳ್ಳತನದ ಪ್ರಕರಣದ ದೃಶ್ಯ ಲಭ್ಯವಾಗಲಿಲ್ಲ.
ಮರುದಿನ ಪ್ರಯತ್ನ ಬಿಡದ ಪೊಲೀಸರು ಕಳ್ಳರ ಜಾಡು ಹಿಡಿದು ಹೊರಟರು. ಏನಾದರೂ ಆಗಲಿ ಎಂದು ಸ್ವಿಚ್ ಆಫ್ ಆಗಿದ್ದ ಮಹಿಳೆಯ ಮೊಬೈಲ್‍ಗೆ ಕರೆ ಮಾಡಿದಾಗ ರಿಂಗ್ ಆಯ್ತು. ಅದರಲ್ಲಿ ಟವರ್ ಮತ್ತು ಲೊಕೇಷನ್ ಅನ್ನು ಸಿಡಿಆರ್‍ನಲ್ಲಿ ಪರಿಶೀಲಿಸಿ ಮಾಹಿತಿ ಪಡೆದು ಗ್ರಾಮದ ಪರಿಚಯವಿದ್ದ ಬೋಸಪ್ಪ ಎಂಬುವರ ಮೂಲಕ ಆರೋಪಿಗಳನ್ನು ಪತ್ತೆಹಚ್ಚಿ ಕರೆತಂದು ಅವರಲ್ಲಿದ್ದ ಮೊಬೈಲ್ ಮತ್ತು ಹಣವನ್ನು ಮಹಿಳೆಗೆ ಹಿಂದಿರುಗಿಸುವಲ್ಲಿ ಜಗಳೂರು ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಬೈಲ್ , ಪರ್ಸ್ ಸಿಕ್ಕ ಖುಷಿಯಲ್ಲಿ ಮಹಿಳೆ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್ ಮತ್ತು ಪಿಎಸ್‍ಐ ಸಾಗರ್ ಹಾಗೂ ಪೊಲೀಸ್ ತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.