ಸುದ್ದಿವಿಜಯ, ಜಗಳೂರು: ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಹಿಂಗಾರು ಮಳೆ ಸಮೃದ್ಧವಾಗಿ ಸುರಿದಿದ್ದು ಹಿಂಗಾರು ಬಿತ್ತನೆ ಚುರುಕು ಕೊಂಡಿದೆ.
ಮಳೆ ಮಾಪನ ಕೇಂದ್ರಗಳಲ್ಲಿ ಒಟ್ಟು 23.77 ಮಿಮೀ ಮಳೆ ಪ್ರಮಾಣ ದಾಖಲಾಗಿದ್ದು ಜಗಳೂರು 36.8ಮಿಮೀ, ಮುಗ್ಗಿದರಾಗಿಹಳ್ಳಿಯಲ್ಲಿ 10.00 ಮಿಮೀ, ಸಂಗೇನಹಳ್ಳಿಯಲ್ಲಿ 38.1, ಸೊಕ್ಕೆಯಲ್ಲಿ 10.2 ಮಿಮೀ ಮಳೆ ಬಿದ್ದಿದೆ.
ಬಿಳಿಚೋಡು ಹೋಬಳಿಯ ಹಾಲೇಕಲ್ಲು ಗ್ರಾಮದಲ್ಲಿ ಮಳೆಯಿಂದ ಒಂದು ಮನೆಗೆ ಹಾನಿಯಾಗಿದೆ ಎಂದು ತಹಶೀಲ್ದಾರ್ ಸೈಯದ್ ಕಲೀಂ ಉಲ್ಲ ಮತ್ತು ಆರ್‍ಐ ಧನಂಜಯ ಮಾಹಿತಿ ನಿಡಿದ್ದಾರೆ.ಜಗಳೂರು ಸುತ್ತಮುತ್ತಲ ಗ್ರಾಮಗಳಾದ ಮಾಳಮ್ಮನಹಳ್ಳಿ, ಕೊಣಚಗಲ್ ರಂಗಸ್ವಾಮಿ ಬೆಟ್ಟ, ಹನುಮಂತಾಪುರ, ಸಂಗೇನಹಳ್ಳಿ, ಪಲ್ಲಾಗಟ್ಟೆ, ಬಿಳಿಚೋಡು, ದೇವಿಕೆರೆ, ಕಟ್ಟಿಗೆಹಳ್ಳಿ, ಅರಿಶಿಣಗುಂಡಿ, ಬಿದರಕೆರೆ, ಬಿಸ್ತುವಳ್ಳಿ, ರಸ್ತೆಮಾಕುಂಟೆ ಗೊಲ್ಲರಹಟ್ಟಿ, ಲಿಂಗಣ್ಣನಹಳ್ಳಿ, ದೋಣೆಹಳ್ಳಿ, ಕಲ್ಲೇದೇವರಪುರ, ತೋರಣಗಟ್ಟೆ, ಜಮ್ಮಾಪುರ, ಮರೇನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ.
ಕಳೆದ 60 ದಿನಗಳಿಂದ ಮಾಯವಾಗಿದ್ದ ಮಳೆ ಸೋಮವಾರ ಬುಧವಾರ ಮತ್ತು ಗುರುವಾರ ರಾತ್ರಿಯಿಡೀ ರಭಸವಾಗಿ ಸುರಿದ ಕಾರಣ ಗುಂಡಿಗಳಲ್ಲಿ ನೀರು ಭರ್ತಿಯಾಗಿದೆ. ಒಣಗಿದ್ದ ಕಾಡು ಮರಗಳು, ಸಸ್ಯ ಸಂಕಲು ಹಸಿರಿನಿಂದ ನಳ ನಳಿಸುತ್ತಿವೆ.
ಕಾಡು ಪ್ರಾಣಿಗಳಾದ ಕಾಡುಹಂದಿ, ಚಿರತೆ ಪಕ್ಷಿಗಳಾದ ನವಿಲು, ಗೊರವಂಕ, ಮರಕುಟುಕ ಸೇರಿದಂತೆ ವಿವಿಧ ಜಾತಿಯ ಪಕ್ಷಗಳಿಗೂ ಕುಡಿಯುವ ನೀರಿಗೆ ಮಳೆ ಆಸರೆಯಾಗಿದೆ. ಕಡಲೆ ಬಿತ್ತನೆ ಚುರುಕು: ಮುಂಗಾರು ವೈಫಲ್ಯದಿಂದ ಬಿತ್ತನೆಯಾಗಿದ್ದ ಮೆಕ್ಕೆಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳು ಸಂಪೂರ್ಣ ಹಾಳಾಗಿ ಹೋಗಿದ್ದವು.
ಹಿಂಗಾರು ಮಳೆಯಿಂದ ಕಡಲೆ ಬಿತ್ತನೆ ಮಾಡುವ ಜಗಳೂರು ಎಪಿಎಂಸಿ, ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ, ಸೊಕ್ಕೆ ಹೋಬಳಿಯಲ್ಲಿ ಬಿತ್ತನೆ ಮಾಡಲು ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಕಡಲೆ ಬೀಜ ಕೊಳ್ಳಲು ಮುಗಿಬಿದ್ದಿದ್ದರು. ಒಟ್ಟು 750 ಕ್ವಿಂಟಾಲ್ ಕಡಲೆ ಬಿತ್ತನೆ ಬೀಜಗಳನ್ನು ರೈತರು ಖರೀದಿ ಮಾಡಿದ್ದಾರೆ. ಎಂದು ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್ ತಿಳಿಸಿದ್ದಾರೆ.
9ಜೆಎಲ್‍ಆರ್‍ಚಿತ್ರ1ಬಿ: ಮಳೆಯಿಂದ ಹರಿಯುತ್ತಿರುವ ಸಣ್ಣ ಹಳ್ಳ