suddivijaya/kannadanews/23/6/2023
ಸುದ್ದಿವಿಜಯ,ಜಗಳೂರು: ಶಾಸಕರಾದ ಬಿ.ದೇವೇಂದ್ರಪ್ಪ ಅವರು ಮೊದಲ ಕೆಡಿಪಿ ಸಭೆಯಲ್ಲಿ ಪಟ್ಟಣದಲ್ಲಿ ಕ್ರೈಂ ನಿಯಂತ್ರಿಸಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ಮತ್ತು ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದರು ಸಹ ಪಟ್ಟಣದಲ್ಲಿ ಸಂಚಾರ ನಿಯಮಗಳು ಪಾಲನೆಯಾಗುತ್ತಿಲ್ಲ ಜೊತೆಗೆ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿಲ್ಲ ಎಂದು ಅನೇಕ ಪ್ರಜ್ಞಾವಂತರಿಂದ ಆರೋಪ ಕೇಳಿಬಂದಿದೆ.
ಹೌದು, ಪಟ್ಟಣದ ಮುಖ್ಯರಸ್ತೆಗಳಲ್ಲಿ ಅಡ್ಡದಿಡ್ಡಿಯಾಗಿ ನಿಂತಿರುವ ಬೈಕ್‍ಗಳು, ಎಲ್ಲೆಂದರಲ್ಲಿ ಕಾರ್ ಪಾರ್ಕಿಂಗ್, ಟ್ರಾಫಿಕ್ ಸಿಗ್ನಲ್ ಇಲ್ಲದೇ ಅಡ್ಡಾದಿಟ್ಟಿಯಾಗಿ ವಾಹನ ಸವಾರರ ಸಂಚಾರ, ಟ್ರಾಫಿಕ್ ಪೊಲೀಸರಿಲ್ಲದೇ ರಾಜಾರೋಷವಾಗಿ ತ್ರಿಬಲ್ ರೈಡಿಂಗ್, ಬಯಲು ರಂಗಮಂದಿರ, ಸರಕಾರಿ ಶಾಲಾ, ಕಾಲೇಜುಗಳ ಬಳಿ ಕುಡುಕರ ಹಾವಳಿ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಪಟ್ಟಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಇಲ್ಲದೇ ಕಾನೂನು ಪಾಲನೆಯಾಗದೇ ಇರವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಬುದ್ಧಿವಂತ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಟ್ರಾಫಿಕ್ ರೂಲ್ಸ್ ಹೇಗಿರಬೇಕು ಎಂಬುದಕ್ಕೆ ಇರುವೆಗಳನ್ನು, ಬೆಳ್ಳಕ್ಕಿಯ ಸಾಲುಗಳನ್ನು ರೋಲ್ ಮಾಡಲ್ ಫೋಟೋಗಳನ್ನು ಬಳಸಿಕೊಳ್ಳುವ ಸಂಚಾರಿ ಪೊಲೀಸರು ಜಾಗೃತಿಗಾಗಿ ಎಲ್ಲಾ ಕಡೆ ಶಿಸ್ತು ಪಾಲಿಸಿ ಎಂದು ಬೋರ್ಡ್ ಹಾಕಿರುತ್ತಾರೆ. ಆದರೆ ಅಂತಹ ಯಾವುದೇ ತಿಳುವಳಿಕೆಯ ಜಾಗೃತಿ ಸೂಚನೆಗಳಾಗಿ, ಟ್ರಾಫಿಕ್ ಪೊಲೀಸ್ ಬಂದೋಬಸ್ತ್ ಆಗಲಿ ಪಟ್ಟಣದಲ್ಲಿ ಕಾಣಸಿಗುವುದಿಲ್ಲ. ಹೀಗಾಗಿ ಅಶಿಸ್ತಿನ ಪಾರ್ಕಿಂಗ್ ಪಟ್ಟಣದಲ್ಲಿ ಸರ್ವೆ ಸಾಮಾನ್ಯವಾಗಿದೆ.
ಪಟ್ಟಣದ ದಾವಣಗೆರೆ, ಚಳ್ಳಕೆರೆ ಮುಖ್ಯರಸ್ತೆ ದಿನ ಬೆಳಗಾದರೆ ಸಾಕು ಭಾರಿ ವಾಹನಗಳ ಸಂಚಾರದಿಂದ ಟ್ರಾಫಿಕ್ ಸಮಸ್ಯೆ ಬೆಂಗಳೂರಿನ ಅನೇಕ ಮುಖ್ಯ ರಸ್ತೆಯನ್ನೇ ಮೀರಿಸುವಂತಿರುತ್ತದೆ. ಎಲ್ಲೆಂದರಲ್ಲಿ ಖಾಸಗಿ ಬಸ್‍ಗಳ ನಿಲುಗಡೆ, ಆಟೋಗಳ ಅಡಚಣೆ, ಬೆಳಗ್ಗೆಯಿಂದ ಸಂಜೆಯವರೆಗೆ ಖಾಸಗಿ ಬಸ್ ನಿಲ್ದಾಣ,ಕೆಎಸ್ಆರ್ ಟಿಸಿ ಬಸ್‍ನಿಲ್ದಾಣಗಳಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ಸಂಚಾರ ದಟ್ಟಣೆ ವ್ಯಾಪಕವಾಗಿರುತ್ತದೆ.
ಎಲ್ಲೆಲ್ಲಿ ಕಿರಿಕಿರಿ?:
ಪಟ್ಟಣದ ಖಾಸಗಿ ಬಸ್‍ನಿಲ್ದಾಣದಿಂದ ಮುಖ್ಯರಸ್ತೆ ಸೇರಿದಂತೆ ಅಂಬೇಡ್ಕರ್ ವೃತ್ತದ ಸುತ್ತಲೂ ಮತ್ತು ನೆಹರೂ ರಸ್ತೆಯ ಇಕ್ಕೆಲಗಳಲ್ಲಿ, ರಾಮಾಲಯ ರಸ್ತೆ, ನಾಲಂದ ಕಾಲೇಜು ರಸ್ತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದ ರಸ್ತೆ, ಎಸ್‍ಬಿಐ ಬ್ಯಾಂಕ್ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ನಿಂತಿರುತ್ತವೆ. ಇದರಿಂದ ಸಾರ್ವಜಕರು, ಪಾದಚಾರಿಗಳು ನಿತ್ಯಗೋಳು ಅನುಭವಿಸುಂತಾಗಿದೆ.
ಅತಿಯಾದ ಟ್ರಾಫಿಕ್ ಜಾಮ್ ಹಾಗೂ ಭಾರಿವಾಹನಗಳ ಸಂಚಾರದಿಂದ ಕಿವಿಗಡಚುವ ಹಾರ್ನ್ ಶಬ್ದಕ್ಕೆ ಜನ ರೋಸಿ ಹೋಗಿದ್ದಾರೆ. ಆಸ್ಪತ್ರೆಯ ಮುಂಭಾಗವಂತೂ ಅತಿಯಾದ ಅಶಿಸ್ತಿನ ಪಾಕಿಂಗ್‍ನಿಂದ ಅಂಬುಲೆನ್ಸ್ ಸಿಕ್ಕಿಹಾಕಿಕೊಂಡು ರೋಗಿಗಳ ನರಳಾಟ ನಿತ್ಯದ ಗೋಳಾಗಿದೆ.
ಪ್ರತಿದಿನ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಬ್ಬ ಹರಿದಿನಗಳಲ್ಲಿ ಪಟ್ಟಣಕ್ಕೆ ಬಂದು ಅಗತ್ಯ ಸಾಮಾಗ್ರಿ ಖರೀದಿಸಲು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ವೈಜ್ಞಾನಿಕವಾಗಿ ಪಾಲನೆಯಾಗಬೇಕಾದ ಟ್ರಾಫಿಕ್ ರೂಲ್ಸ್ ಪಟ್ಟಣದಲ್ಲಿ ಮಾತ್ರ ಪಾಲನೆಯಾಗುತ್ತಿಲ್ಲ.
ಪಟ್ಟಣದಲ್ಲಿ ಹಾದು ಹೋಗಿರುವ ಮಲ್ಪೆ, ಮೊಳಕಾಲ್ಮೂರು ರಾಜ್ಯ ಹೆದ್ದಾರಿಯಲ್ಲಿ ಭಾರಿ ಗಾತ್ರದ ವಾಹನಗಳ ಓಡಾಟದಿಂದ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರು ಸಮಸ್ಯೆ ಅನುಭವಿಸಿ ಹೈರಾಣಾಗಿ ಹೋಗಿದ್ದಾರೆ.
ಟ್ರಾಫಿಕ್ ಪೊಲೀಸರೇ ಇಲ್ಲ?
ವಾಹನಗಳನ್ನು ನಿಲ್ಲಿಸುವ ಜಾಗದಲ್ಲಿ ಅನೇಕರು ಬೀದಿಬದಿ ವ್ಯಾಪಾರಿಗಳು, ಹೂವು, ಹಣ್ಣಿನ ವ್ಯಾಪಾರಿಗಳು ತಳ್ಳುವ ಗಾಡಿ ಹಾಕಿದ್ದು ಅದು ಸಹ ಟ್ರಾಫಿಕ್ ಸಮಸ್ಯೆ ಉಲ್ಬಣಕ್ಕೆ ಮೂಲ ಕಾರಣವಾಗಿದೆ. ಇದನ್ನೆಲ್ಲಾ ನಿಯಂತ್ರಿಸಬೇಕಾದ ಸಂಚಾರಿ ಪೊಲೀಸ್ ಸಿಬ್ಬಂದಿ ಇಲ್ಲವೇ ಇಲ್ಲ. ಹೀಗಾಗಿ ವಾಹನ ಸವಾರರಿಗೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿಯೂ ಇಲ್ಲ, ಭಯವೂ ಇಲ್ಲವಾಗಿದೆ.
ನಿಯಮಗಳನ್ನು ಉಲ್ಲಂಘಿಸಿ ಅನೇಕರು ಒಂದು ದ್ವಿಚಕ್ರವಾಹನದಲ್ಲೇ ಮೂರು ಮಂದಿ ಪೊಲೀಸ್ ಠಾಣೆಯ ಮುಂದೆಯೇ ಸಂಚರಿಸುವ ದೃಶ್ಯ ಸರ್ವೆ ಸಾಮಾನ್ಯವಾಗಿದೆ. ಆದರೂ ಸಹ ನೋಡಿಯೂ ನೋಡದಂತೆ ಪೊಲೀಸರು ಇರುವುದು ದೊಡ್ಡ ದುರಂತವೇ ಸರಿ. ಜೊತೆಗೆ ಶೇ.99 ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸುವುದೇ ಇಲ್ಲ.
ಕರ್ಕಷವಾದ ಹಾರ್ನ್ ಆಳವಡಿಸಿಕೊಂಡು ಶಬ್ದ ಮಾಲಿನ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುವವರನ್ನು ನಿಯಂತ್ರಿಸಬೇಕಾದ ಪೊಲೀಸರ ಕೊರತೆ ಠಾಣೆಯಲ್ಲಿ ಎದ್ದುಕಾಣುತ್ತಿದೆ. ಕಠಿಣ ನಿಯಮಗಳ ಮೂಲಕ ಟ್ರಾಫಿಕ್ ರೂಲ್ಸ್ ಜಾರಿಗೆ ತಂದು ಅಶಿಸ್ತಿನಿಂದ ವರ್ತಿಸುವ ವಾಹನ ಸವಾರರನ್ನು ನಿಯಂತ್ರಿಸುವ ಅವಶ್ಯಕತೆ ಹೆಚ್ಚಿದೆ.
ಸಿಸಿಟಿವಿ ಕೊರತೆ ಬೈಕ್ ಕಳ್ಳತನ ಹೆಚ್ಚಳ!
ಪಟ್ಟಣದಲ್ಲಿ ಪೊಲೀಸ್ ಇಲಾಖೆಯಿಂದ ಅಂಬೇಡ್ಕರ್ ವೃತ್ತ ಮತ್ತು ಎಂಜಿ ವೃತ್ತ ಸೇರಿದಂತೆ ಒಟ್ಟು 18 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಅಳವಡಿಸಿರುವ ಸಿಸಿಟಿವಿ ಕಬ್ಬಿಣದ ಕಂಬವು ಬಿಗಿಯಾಗಿಲ್ಲ.
ತುಕ್ಕು ಹಿಡಿದಿರುವ ಕಂಬಕ್ಕೆ ಬಣ್ಣ ಬಳಿಯಲಾಗಿದೆ. ಅಳವಡಿಸಿರುವ ಸಿಸಿಟಿವಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕೇವಲ 12 ಮಾತ್ರ. 2023ರ ಜನವರಿಯಿಂದ ಜೂನ್ ವರೆಗೆ 8 ಬೈಕ್ ಕಳ್ಳತನ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.
ಅದರಲ್ಲಿ ದೊರೆತಿರುವುದು ಕೇವಲ ಎರಡು ಮಾತ್ರ. ದ್ವಿಚಕ್ರವಾಹನ ಕಳ್ಳತನ ನಿಯಂತ್ರಿಸಲು ಪಟ್ಟಣದ ಪೊಲೀಸರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಸಿಬ್ಬಂದಿಗಳ ಕೊರತೆ?
ಜಗಳೂರು ಠಾಣೆಯಲ್ಲಿ ಒಬ್ಬ ಪಿಐ, ಇಬ್ಬರು ಪಿಎಸ್‍ಐ ಮತ್ತು ನಾಲ್ವರು ಮಹಿಳಾ ಸಿಬ್ಬಂದಿ ಸೇರಿ ಒಟ್ಟು 40 ಪೊಲೀಸ್ ಸಿಬ್ಬಂದಿಗಳಿದ್ದರೂ ದ್ವಿಚಕ್ರವಾನ ಕಳ್ಳತನ, ರಾತ್ರಿಯಾದರೆ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಬ್ರೇಕ್ ಬಿದ್ದಿಲ್ಲ. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲು ಕಾರಣ ಸಿಬ್ಬಂದಿ ಕೊರತೆ.
ಇರುವ ಸಿಬ್ಬಂದಿಯಲ್ಲಿ ಟ್ರಾಫಿಕ್ ನಿಯಂತ್ರಣ ಮಾಡಬೇಕು. ಭೀಕರ ಅಪಘಾತವಾದಾಗ ಅಥವಾ ವಿಐಪಿ, ವಿವಿಐಪಿಗಳು ಬಂದಾಗ, ಹಬ್ಬ ಜಾತ್ರೆಗಳಿಗೆ ಬಂದೋಬಸ್ತ್‍ಗಾಗಿ ಇರುವ ಸಿಬ್ಬಂದಿಯನ್ನು ನಿಯೋಜಿಸಬೇಕಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತು ಅಶಿಸ್ತಿನ ಪಾರ್ಕಿಂಗ್ ವ್ಯಾಪಕವಾಗಿದೆ ಎಂದು ಹೆಸರೇಳಲು ಇಚ್ಛಿಸಿದ ಸಿಬ್ಬಂದಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನಲ್ಲಿ ದಿನೆ ದಿನೇ ವಾಹನಗಳ ದಟ್ಟಣೆ ಬಹಳ ಆಗುತ್ತಿದೆ. ಇದಕ್ಕೆ ಕಾರಣ ಪಟ್ಟಣದ ರಸ್ತೆ ಕಿರಿದಾಗಿದೆ. ಪಾಚಾರಿಗಳ ಮಾರ್ಗದಲ್ಲಿ ಹಣ್ಣು, ಹೂವು ವ್ಯಾಪಾರಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇವರನ್ನು ನಿಯಂತ್ರಿಸಬೇಕಾದ ಪಪಂ ಆಡಳಿತ ವಿಫಲವಾಗಿದೆ. ಹೀಗಾಗಿ ರಸ್ತೆ ಮೇಲೆ ಸಾರ್ವಜನಿಕರು ಓಡಾಡುವುದರಿಂದ ಸಹಜವಾಗಿ ಟ್ರಾಫಿಕ್ ಹೆಚ್ಚಾಗುತ್ತಿದೆ. ಹಾಗಾಗಿ ಜಗಳೂರು ಪಟ್ಟಣಕ್ಕೆ ಟ್ರಾಫಿಕ್ ಪೊಲೀಸ್ ಸಿಬಂದ್ಧಿಯನ್ನು ಹೆಚ್ಚಿನ ರೀತಿಯಲ್ಲಿ ನೇಮಿಸಬೇಕು.
-ಪ್ರೊ.ಚಂದ್ರಶೇಖರ್, ನಿವೃತ್ತ ಉಪನ್ಯಾಸಕರು, ಜಗಳೂರು.