ರೈತರು RR ನಂಬರ್ ಆಧಾರ್ ಜೋಡಣೆ ವೇಳೆ ಬಾಂಡ್ ಪೇಪರ್ ಗಾಗಿ ಹಣ ಕಟ್ಟಬೇಡಿ

Suddivijaya
Suddivijaya July 22, 2024
Updated 2024/07/22 at 2:36 PM

suddivijayanews22/07/2024

ಸುದ್ದಿವಿಜಯ, ಜಗಳೂರು: ರೈತರ ಪಂಪ್‍ಸೆಟ್‍ಗಳ ಆರ್‍ಆರ್ ನಂಬರ್‍ಗಳಿಗೆ ಆಧಾರ್ ಜೋಡಣೆ ಮಾಡಲು ಸರಕಾರ ಜಾರಿಗೆ ತಂದಿರುವ ನಿಯಮದಲ್ಲಿ ರೈತರು ಯಾವುದೇ ಕಾರಣಕ್ಕೂ 530ರೂ ಮೊತ್ತದ ಬಾಂಡ್ ಪೇಪರ್‍ಗೆ ಹಣ ಸಂದಾಯ ಮಾಡುವಂತಿಲ್ಲ ಎಂದು ದಾವಣಗೆರೆ ಬೆಸ್ಕಾಂ  ಎಕ್ಸಿಕಿಟ್ಯೂವ್ ಎಂಜಿನಿಯರ್ ಎಸ್.ಕೆ.ಪಾಟೀಲ್ ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ರೈತರ ಪಂಪ್‍ಸೆಟ್‍ಗಳಿಗೆ ಆಧಾರ್ ಜೋಡಣೆ ಮಾಡಲು ಸರಕಾರ ಬೆಸ್ಕಾಂ ಇಲಾಖೆಗೆ ಕಟ್ಟು ನಿಟ್ಟಿನ ಸೂಚನೆ ನೀಡಿತ್ತು. ಹೀಗಾಗಿ ರೈತರು ತಮ್ಮ ತಂದೆ ಅಥವಾ ತಾಯಿ ಹೆಸರಿನಲ್ಲಿರುವ ಐಪಿ ಸೆಟ್‍ಗಳನ್ನು ಅವರು ಮರಣ ಹೊಂದಿದ್ದರೆ ಅವರ ಹೆಸರಿನಲ್ಲಿದ್ದ ದಾಖಲೆಗಳನ್ನು ವಾರಸುದಾರರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಅವಕಾಶ ನೀಡಿದೆ.

ಆದರೆ ಬೆಸ್ಕಾಂನ ಕೆಲ ಸಿಬ್ಬಂದಿ ರೈತರ ಆಧಾರ್ ಕಾರ್ಡ್, ಪಹಣಿ, ಮರಣ ಪ್ರಮಾಣ ಪತ್ರ ಪಾಲುವಿಭಾಗ ಪತ್ರ ಜೊತೆಗೆ 530 ರೂ ಬೆಲೆಯ ಖರೀದಿ ಪತ್ರ (ಬಾಂಡ್) ತರಬೇಕು ಎಂದು ಸೂಚನೆ ನೀಡಿತ್ತು.

ರೈತರು ಬೆಸ್ಕಾಂ ಕಚೇರಿಗೆ ಹೋಗಿ ದಾಖಲೆಗಳನ್ನು ಸಲ್ಲಿಸಿದ ನಂತರ ಬ್ಯಾಂಕ್‍ಗೆ ಹೋಗಿ 530 ರೂ ಹಣ ಕಟ್ಟಿ ಬಾಂಡ್ ಪೇಪರ್ ಕೊಂಡು  Bascom ಸಿಬ್ಬಂದಿಗೆ ಕೊಟ್ಟು ಸಹಿ ಮಾಡಬೇಕಿತ್ತು. ಇದರಿಂದ ಅನೇಕ ರೈತರು ಹೊರೆಯಾಗಿ ದಾಖಲೆಗಳನ್ನು ಸಲ್ಲಿಸಲು ಹೋಗದೇ ನಿರ್ಲಕ್ಷ್ಯ ಮಾಡುತ್ತಿದ್ದರು.

ಕೆಲ ಆಸಕ್ತ ರೈತರು ಬೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿದಾಗ ಒಂದು ದಾಖಲೆ ಸಲ್ಲಿಸಲು ದಿನವಿಡೀ ಬೇಕಾಗುತ್ತದೆ. ಇದನ್ನೆಲ್ಲಾ ನಾವೇ ಮಾಡಿಸುತ್ತೇವೆ ಒಂದು ಸಾವಿರ ಹಣ ಕೊಟ್ಟರೆ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿಕೊಡುತ್ತೇವೆ ಎಂದು ಕೆಲ ಸಿಬ್ಬಂದಿ ರೈತರಿಂದ ಹಣ ಕೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಕೆಲ ರೈತರು ಸಹವಾಸವೇ ಬೇಡ ಎಂದು ಬೆಸ್ಕಾಂ ಕಚೇರಿ ಕಡೆ ತಲೆ ಹಾಕಿಲ್ಲ. ಬೆಸ್ಕಾಂ ಲೈನ್ ಮನ್‍ಗಳು ನಿತ್ಯ ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಆರ್‍ಆರ್ ನಂಬರ್ ಗೆ ಆಧಾರ್ ಜೋಡಿಸಿ, ವರ್ಗಾವಣೆ ಮಾಡಿಸಿಕೊಳ್ಳಿ ಎಂದು ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಆದರೆ ರೈತರು ಸಮಯ ಮತ್ತು ಹಣ ಖರ್ಚಾಗುತ್ತದೆ ಎಂದು ಹೋಗದೇ ನಿರ್ಲಕ್ಷ್ಯ ಮಾಡಿದ್ದಾರೆ.

ಸುದ್ದಿವಿಜಯ ಫ್ಯಾಕ್ಟ್ ಚಕ್ ಮೂಲಕ ಈ ಸಮಸ್ಯೆಯನ್ನು ಬೆಸ್ಕಾಂ ಎಕ್ಸಿಕಿಟ್ಯೂವ್ ಎಂಜಿನಿಯರ್ ಎಸ್.ಕೆ.ಪಾಟೀಲ್ ಗಮನಕ್ಕೆ ತಂದಿತು. ಆಗ ಸ್ಪಂದಿಸಿ ಎಕ್ಸಿಕಿಟ್ಯೂವ್ ಎಂಜಿನಿಯರ್, ಯಾವುದೇ ಕಾರಣಕ್ಕೂ ರೈತರು ಬಾಂಡ್ ಪೇಪರ್ ಗೆ ಹಣವನ್ನು ಕಟ್ಟುವಂತಿಲ್ಲ. ಬೆಸ್ಕಾಂನಿಂದಲೇ ಉಚಿತವಾಗಿ ಬಾಂಡ್ ಮಾಡಿಸಿಕೊಡುತ್ತೇವೆ.

ಬೆಸ್ಕಾಂ ಕಚೇರಿ ಸಿಬ್ಬಂದಿ ಹಣ ಕೇಳಿದರೆ ಕೊಡಬೇಡಿ. ಒಂದು ವೇಳೆ ಹಣ ಕೇಳಿದರೆ ಬೆಸ್ಕಾಂ ಎಇಇ ಇಲ್ಲವೇ ನಮಗೆ ಮಾಹಿತಿ ನೀಡಿ ಎಂದು ತಿಳಿಸಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!