ಸುದ್ದಿ ವಿಜಯ, ಜಗಳೂರು: ಜಗತ್ತಿನಲ್ಲೇ ಶ್ರೇಷ್ಠವಾದ ವ್ಯಕ್ತಿಗಳಾದ ಹೆತ್ತ ತಾಯಿ ಮತ್ತು ಜನ್ಮ ಭೂಮಿಯನ್ನು ಎಂದಿಗೂ ಮರೆಯಬಾರದು ಎಂದು ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಭಗವತ್ಪಾದ ಮಹಾಸ್ವಾಮಿ ಹೇಳಿದರು.
ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಭಾನುವಾರ ಅತೀತ ಮಠದ ಮ.ಘ.ಚ ಸಿದ್ದಲಿಂಗ ಶಿವಾಚಾಯರ ಗದ್ದುಗೆ ಮತ್ತು ಶ್ರೀ ವೀರಭದ್ರಸ್ವಾಮಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಮ.ಘ.ಚ ಚನ್ನಬಸವ ಶಿವಾಚಾರ್ಯರ, ಬಸಪ್ಪಯ್ಯನವರ ಗದ್ದುಗೆ ಉದ್ಘಾಟನಾ ಸಮಾರಂಭದ ದಿವ್ಯ ಸಾನಿದ್ಯವಹಿಸಿ ಮಾತನಾಡಿದರು.
ಹೆಣ್ಣು ಮಕ್ಕಳಿಲ್ಲದ ಮನೆ ಇಲ್ಲ, ಅವರಿಗೆ ಯಾವುದೇ ತೊಂದರೆಯಾಗಬಾರದು ಎಂದು ಪ್ರತಿಯೊಂದು ಕುಟುಂಬದ ಪುರುಷರು ಭಯಸುತ್ತಾರೆ. ಹಾಗಯೇ ಪಕ್ಕದ ಮನೆಯ ಹೆಣ್ಣು ಮಕ್ಕಳನ್ನು ಗೌರವಿಸಬೇಕು, ಕಟ್ಟಿಕೊಂಡು ಹೆಂಡತಿ ಹೊರತು ಉಳಿದೆಲ್ಲರನ್ನು ಅಕ್ಕ,ತಂಗಿ, ತಾಯಿ ಎಂಬ ಸಮಾನ ಭಾವನೆ ತೋರಬೇಕು ಎಂದು ಸಲಹೆ ನೀಡಿದರು.
ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠತೆಯಿಂದ ಕೂಡಿದೆ. ಗಿಡ,ಮರ, ನದಿ, ಹಳ್ಳ,ಕೊಳ್ಳ, ದೇವರುಗಳ ಸಂಖ್ಯೆ ಇರಬಹುದು, ಪ್ರತಿಯೊಂದನ್ನು ಹೆಣ್ಣಿನ ಪ್ರತೀಕವಾದ ಸ್ತ್ರೀ ಸಂಸ್ಕೃತಿ, ಶಕ್ತಿ ಪ್ರಧಾನವಾದ ಗೌರವವನ್ನು ನಮ್ಮ ನಾಡು ಕಟ್ಟಿಕೊಂಡು ಬಂದಿದೆ ಎಂದರು.
ಮಸ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ, ಭಾರತ ದೇಶ ಮಂದಿರಗಳ ದೇಶ, ಈ ದೇಶದಲ್ಲಿರುಷ್ಟು ಗುಡಿ, ಗುಂಡಾರಗಳು, ಮಠ ಮಂದಿರಗಳು ಪ್ರಪಂಚದ ಯಾವುದೇ ರಾಷ್ಟ್ರದಲ್ಲಿ ನಾವು ನೋಡುವುದಕ್ಕೆ ಸಾದ್ಯವಿಲ್ಲ, ಹಾಗಾಗಿ ವಿದೇಶಿಗರು ನಮ್ಮ ದೇಶ ನೋಡುವುದಕ್ಕಾಗಿ ಬರುತ್ತಿದ್ದಾರೆ. ಇಂತಹ ವಿಶಾಲ, ವೈವಿದ್ಯಮಯವಾದ ಸಂಸ್ಕೃತಿ ಹೊಂದಿರುವ ಭಾರತದಲ್ಲಿ ಜನಿಸಿರುವ ನಾವೆಲ್ಲರೂ ಭಾಗ್ಯವಂತರು ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕೊಟ್ಟೂರು ಡೋಣೂರು ಜಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿ, ಅತೀತ ಮಠದ ಎಚ್.ಎಂ ಸಾರಂಸ್ವಾಮಿ ಸೇರಿದಂತೆ ಮತ್ತಿತರಿದ್ದರು.
ದೇವಸ್ಥಾನ ಸ್ವಚ್ಛವಾಗಿಡಿ:
ಗ್ರಾಮಗಳಲ್ಲಿ ದೇವಸ್ಥಾನ ನಿರ್ಮಿಸುವುದು ಮುಖ್ಯವಲ್ಲಾ, ಅಲ್ಲಿ ನಿತ್ಯ, ನಿರಂತರವಾಗಿ ಪೂಜೆ ಕಾರ್ಯಕ್ರಮಗಳು ನಡೆಯಬೇಕು, ಕೆಲವು ಕಡೆ ಉದ್ಘಾಟನೆಯಾದ ನಂತರ ಭಕ್ತ ಅತ್ತ ಸುಳಿಯುವುದಿಲ್ಲ, ದೇವಸ್ಥಾನದ ಸುತ್ತಲು ಕಸ,ಕಡ್ಡಿ ತ್ಯಾಜ್ಯದಿಂದ ತುಂಬಿದರು ಅದನ್ನು ಸ್ವಚ್ಛಗೊಳಿಸುವ ಪ್ರಯತ್ನ ಕೂಡ ಮಾಡುವುದಿಲ್ಲ, ಹಾಗಾಗಿ ನಿರ್ಲಕ್ಷ ತೋರದೇ ಶುದ್ದವಾಗಿಟ್ಟುಕೊಂಡು ಪೂಜಿಸುವ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಮನಸ್ಸಿಗೆ ನೆಮ್ಮದಿ, ಶಾಂತಿ ದೊರೆಯುತ್ತದೆ ಎಂದು ಶ್ರೀಗಳು ಭಕ್ತರಿಗೆ ಎಚ್ಚರಿಸಿದರು.
ಹೆತ್ತ ತಾಯಿ ಮತ್ತು ಜನ್ಮ ಭೂಮಿಯನ್ನು ಎಂದಿಗೂ ಮರೆಯ ಬೇಡಿ: ಉಜ್ಜಯಿನಿ ಶ್ರೀ