ಸುದ್ದಿವಿಜಯ, ಜಗಳೂರು: ನಾಲ್ಕು ಜಿಲ್ಲೆಗಳ ರೈತರ ಜೀವನಾಡಿಯಾದ ಭದ್ರಾ ಮೇಲ್ದಂಡೆ ಯೋಜನೆ ತ್ವರಿತಗತಿ ಕಾಮಗಾರಿ ಪೂರ್ಣಗೊಳಿಸಲು ಸಂಸದ ಜಿ.ಎಂ.ಸಿದ್ದೇಶ್ವರ್, ಪ್ರಧಾನಿ ನರೇಂದ್ರ ಮೋದಿ ಮೇಲೆ ಒತ್ತಡ ಹಾಕಿ 5300 ಕೋಟಿ ರೂ ಹಣ ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಕೆಪಿಸಿಸಿ ಸದಸ್ಯ, ಲೋಕಸಭಾ ಚುನಾವಣಾ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕಲ್ಲೇಶ್ ರಾಜ್ ಪಟೇಲ್ ಆಗ್ರಹಿಸಿದ್ದಾರೆ.
ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ತುಮಕೂರು ಜಿಲ್ಲೆಯ ಬರ ಪೀಡಿತ ರೈತರಿಗೆ ಅಪ್ಪರ್ ಭದ್ರಾ ಯೋಜನೆ ವರದಾನವಾಗಲಿದೆ.
ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ ಇದಕ್ಕಾಗಿ 5300 ಕೋಟಿ ರೂ ಹಣ ನೀಡುವುದಾಗಿ ಭರವಸೆ ನೀಡಲಾಗಿತ್ತು. ಯೋಜನೆಗೆ ಸಂಬಂಧಿಸಿದ ಕಡತ ಪ್ರಧಾನಿ ಕಚೇರಿಯಲ್ಲಿದೆ. ಇದುವರೆಗೂ ಕೇಂದ್ರ ಸರಕಾರದ ಸಚಿವ ಸಂಪುಟದ ಸಭೆಯ ಮುಂದೆ ತಂದಿಲ್ಲ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ಅಲ್ಲಲ್ಲಿ ಬೋರ್ಡ್‍ಗಳ್ನು ಹಾಕಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಸಾಕಷ್ಟು ಬಾಕಿ ಇದೆ ಎಂದರು.
ಈ ಯೋಜನೆಯಿಂದ ಜಗಳೂರು ತಾಲೂಕಿನ 18423 ಹೆಕ್ಟೇರ್ ಜಮೀನಿಗೆ ನೀರಾವರಿ ಹಾಗೂ 9 ಕೆರೆ ತುಂಬಿಸುವುದು ಸೇರಿದಂತೆ ಮಧ್ಯ ಕರ್ನಾಟಕದ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಅನುಕೂಲವಾಗುತ್ತದೆ.
ಸಂಸದರಾದ ಜಿ.ಎಂ ಸಿದ್ದೇಶ್ವರ್, ಚಿತ್ರದುರ್ಗ ಸಂಸದ ಹಾಗೂ ಕೇಂದ್ರ ಸಚಿವ ನಾರಾಯಣಸ್ವಾಮಿ, ಚಿಕ್ಕಮಗಳೂರು, ಉಡುಪಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ತುಮಕೂರು ಸಂಸದ ಬಸವರಾಜ್ ಒಟ್ಟಿಗೆ ಪ್ರಧಾನಿ ಮೋದಿಯನ್ನು ಭೇಟಿ ಮಾಡಿ ಒತ್ತಡಹಾಕಿ ಕೇಂದ್ರ ಸಂಪುಟದಲ್ಲಿ ಅನುಮೋದನೆ ಪಡೆದು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿಸಬೇಕು.
ಆದರೆ ಸಂಸದರು ಕೇವಲ ಚುನಾವಣೆ ತಯಾರಿಯಲ್ಲಿ ಮೈ ಮರೆತಿದ್ದಾರೆ. ಜನರ ಮೇಲೆ, ರೈತರ ಮೇಲೆ ಅವರಿಗೆ ಕಾಳಜಿಯಿಲ್ಲ. ಜನರ ಕಷ್ಟ ಸುಖಗಳಿಗೆ ಸ್ಪಂದಿಸದೇ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.