ಜಗಳೂರು: ನಮ್ಮನ್ನು ನಾವು ತಿದ್ದಿಕೊಳ್ಳಲು ವಚನಗಳು ಸಹಕಾರಿ

Suddivijaya
Suddivijaya August 3, 2023
Updated 2023/08/03 at 11:53 AM

ಸುದ್ದಿವಿಜಯ, ಜಗಳೂರು: ಬಸವಾದಿ ಶರಣರು ರಚಿಸಿರುವ ವಚನ ಸಾಹಿತ್ಯ ಕೇವಲ ಒಂದು ಪ್ರಾಂತ್ಯ, ಪ್ರದೇಶ, ಭಾಷೆಗೆ ಸೀಮಿತವಾಗದೆ ಜಗತ್ತಿನ ಜನರ ಬದುಕನ್ನು ಹಸನಾಗಿಸಲು ಬೇಕಾದ ಎಲ್ಲಾ ಅಗಣಿತ ಅಂಶಗಳನ್ನು ಒಳಗೊಂಡು ಕಾಲಾತೀತವಾಗಿ ಬೆಳೆದಿದೆ ಎಂದು ನಾಲಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಿ.ತಿಪ್ಪೇಸ್ವಾಮಿ ಹೇಳಿದರು.

ಬುಧವಾರ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ನಾಲಂದ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

  ಜಗಳೂರು ಪಟ್ಟಣದ ನಾಲಂದ ಪದವಿ ಪೂರ್ವ ಕಾಲೇಜಿನಲ್ಲಿ ದತ್ತಿ ಉಪನ್ಯಾಸದಲ್ಲಿ ವಚನಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ನೀಡಲಾಯಿತು.
  ಜಗಳೂರು ಪಟ್ಟಣದ ನಾಲಂದ ಪದವಿ ಪೂರ್ವ ಕಾಲೇಜಿನಲ್ಲಿ ದತ್ತಿ ಉಪನ್ಯಾಸದಲ್ಲಿ ವಚನಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಫ.ಗು ಹಳಕಟ್ಟಿ, ಎಂ.ಎಂ. ಕಲ್ಬುರ್ಗಿ, ಸುತ್ತೂರು ಜಗದ್ಗುರುಗಳು, ಸಿರಿಗೆರೆ ಜಗದ್ಗುರುಗಳು ಮುಂತಾದವರು ಕಾಪಿಟ್ಟುಕೊಟ್ಟಿರುವ ವಚನಗಳು ಒಂದು ಅಮೂಲ್ಯ ನಿಧಿ. ಅರಿತರೆ ಶರಣ ಮರೆತರೆ ಮಾನವ ಎನ್ನುವಂತೆ ವಚನಗಳ ಸಾರವನ್ನು ನಾವು ಅರಿತು ನಡೆಯಬೇಕಿದೆ.

ವಚನಗಳ ಓದಿನ ಹಿನ್ನೆಲೆಯಲ್ಲಿ ನಮಗೆ ನಾವು ನೂರು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ನಮ್ಮನ್ನು ನಾವು ತಿದ್ದಿಕೊಳ್ಳಲು ವಚನಗಳು ಸಹಕಾರಿ ಎಂಬ ಸತ್ಯವನ್ನು ಅರಿಯಬೇಕಿದೆ ಎಂದು ಅವರು ನುಡಿದರು.

ಲೇಖಕ ಡಾ.ಪ್ರಭಾಕರ್ ಲಕ್ಕೋಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರ ಬದುಕಿನ ಅನುಭವದ ಗಟ್ಟಿ ಸಾರವೇ ವಚನಗಳು. ಅವು ನಮ್ಮ ಅನುಭವಗಳು ಕೂಡ ಆಗಿ ನಮ್ಮ ಬದುಕನ್ನು ಆವರಿಸಿಕೊಂಡಿವೆ. ಹಾಗಾಗಿಯೇ 12ನೆಯ ಶತಮಾನ ದಿಂದ ಇಲ್ಲಿಯವರೆಗೆ ವಚನ ಸಾಹಿತ್ಯ ಗಟ್ಟಿಯಾಗಿ ನೆಲೆ ನಿಂತಿದೆ ಎಂದು ಬಣ್ಣಿಸಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್. ಟಿ. ಎರ್ರಿಸ್ವಾಮಿ ಅವರು ಪ್ರಸ್ತಾವಿಕ ನುಡಿದರು. ದತ್ತಿ ದಾನಿಗಳಾದ ಟಿ. ಆರ್. ಮಹದೇವಪ್ಪ, ಬಾಲರಾಜು, ಕದಳಿ ಮಹಿಳಾ ವೇದಿಕೆಯ ಲೀಲಾವತಿ, ರೇವತಿ ,ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಈ ಸತೀಶ್,ಚಂದ್ರಕಾಂತ್, ಡಿ.ಸಿ. ಮಲ್ಲಿಕಾರ್ಜುನ, ಎನ್.ಎಂ. ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!