ಸುದ್ದಿವಿಜಯ, ಜಗಳೂರು: ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳು ಎಂದೇ ಪ್ರಸಿದ್ಧವಾಗಿರುವ ಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು ರಚಿಸಿದ ಮಹರ್ಷಿ ವಾಲ್ಮೀಕಿ ನಿಜಕ್ಕೂ ಅಜರಾಮರ. ‘ಕೂಜಂತಂ ರಾಮ ರಮೇತಿ ಮಧುರಂ ಮಧುರಾಕ್ಷರಂ ಅರುಹ್ಯೆ ಕವಿತಾ ಶಾಖಾಂ ವಂದೇ ವಾಲ್ಮೀಕಿ ಕೋಕಿಲಂ’ ಎಂದು ಶಾಸಕ ಬಿ.ದೇವೇಂದ್ರಪ್ಪ ಮಹರ್ಷಿ ವಾಲ್ಮೀಕಿಯವರನ್ನು ಸ್ಮರಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ಎನ್ನುವ ಕೋಗಿಲೆಯು ಕಾವ್ಯ ಎನ್ನುವ ವೃಕ್ಷದ ಶಾಖೆಗಳ ಮೇಲೆ ಕುಳಿತ ರಾಮ ರಾಮ ಎನ್ನುವ ಮಧುರ ಪದಗಳನ್ನು ಕೂಗುತ್ತಿದೆ. ಆ ವಾಲ್ಮೀಕಿ ಕೋಕಿಲಕ್ಕೆ ನೂರಂದು ನಮನಗಳು.
ಮಹಾಕಾವ್ಯಗಳ ಮೂಲಕ ಜಗತ್ತಿಗೆ ಭಾರತದ ಸಂಸ್ಕೃತಿಯನ್ನು ಆದಿ ಕಾಲದಿಂದ ಇಂದಿನವರೆಗೂ ಅಜರಾಮರವಾಗಿ ಉಳಿಸಿದ ಮಹರ್ಷಿಗಳ ಕಾರ್ಯ ಸರ್ವ ಕಾಲಕ್ಕೂ ಶಾಶ್ವತ. ಅವರು ರಚಿಸಿದ ರಾಮಾಯಣದ ಆರು ಖಂಡಗಳಲ್ಲಿ 24 ಸಾವಿರ ಶ್ಲೋಕಗಳ ಅರ್ಥ ‘ದಶರಥನ ಕಂದ ರಾವಣನ ಕೊಂದ ಸೀತೆಯ ತಂದ’ ಎಂಬುದಾಗಿದೆ.
ಒಂದು ಹಕ್ಕಿಯ ಆಕ್ರಂದನದಲ್ಲಿ ಅವರು ಇಡಿಯ ಜಗತ್ತಿನ ಅಳುವನ್ನೇ ಕಂಡರು. ಈ ವಿಶ್ವಾತ್ಮಭಾವದ ಕಾರಣದಿಂದದಾಗಿಯೇ ಅವರ ಶೋಕವೇ ಶ್ಲೋಕವಾಯಿತು. ಈ ಸಹೃದಯಿತೆಯ ರಸಾಭಿವ್ಯಕ್ತಿಯಲ್ಲಿ ರಾಮ-ಸೀತೆಯ ಕಥೆ ರಾಮಾಯಣವಾಯಿತು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಪ್ರೊ.ರವಿಕುಮಾರ್, ಮಹರ್ಷಿ ವಾಲ್ಮೀಕಿ ಜೀವನ ಮತ್ತು ರಾಮಾಯಣ ರಚನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ, ಇಓ ಕೆಟಿ ಕರಿಬಸಪ್ಪ, ಪೊಲೀಸ್ ಇನ್‍ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್. ಕೆಪಿಸಿಸಿ ಸದಸ್ಯ ಕಲ್ಲೇಶ್‍ರಾಜ್ ಪಟೇಲ್,
ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ವಿ.ಲೋಹಿತ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಬಿ.ಮಹೇಶ್ವರಪ್ಪ, ಸಿ.ತಿಪ್ಪೇಸ್ವಾಮಿ, ಕಸಾಪಾ ಅಧ್ಯಕ್ಷೆ ಸುಜಾತಮ್ಮರಾಜು, ಎಸ್.ಕೆ.ರಾಮರೆಡ್ಡಿ, ನಾಯಕ ಸಂಘದ ಅಧ್ಯಕ್ಷ ಬಡಯ್ಯ ಸೇರಿದಂತೆ ಸಂಘದ ಕಾರ್ಯದರ್ಶಿಗಳು, ಪದಾಧಿಕಾರಿಗಳು, ಪಪಂ ಸದಸ್ಯರು ಇದ್ದರು.
ಅವ್ಯವಸ್ಥೆಗೆ ಆಕ್ರೋಶ:
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕರ್ಕಷ ಮೈಕ್ ಶಬ್ದ, ಅಶಿಸ್ತಿನಿಂದ ನಾಡಗೀತೆ ಹಾಡಿದ್ದು, ಸರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡದ ತಾಲೂಕು ಆಡಳಿತದ ವಿರುದ್ಧ ಶಾಸಕ ಬಿ.ದೇವೇಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ವಿಚಾರದಲ್ಲಿ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸುವಾಗ ಕರ್ತವ್ಯ ಲೋಪವಾದರೆ ನಾನು ಸಹಿಸುವುದಿಲ್ಲ. ಪೂರ್ವಭಾವಿ ಸಭೆಗಳನ್ನು ಮಾಡಿ ಎಂದು ಸಾಕಷ್ಟು ಸಾರಿ ಹೇಳುತ್ತೇನೆ. ಇನ್ನೊಂದು ಸಾರಿ ಹೀಗೆ ಆದರೆ ಒಂಟಿ ಕಾಲಿನಲ್ಲಿ ನಿಮ್ಮನ್ನು ನಿಲ್ಲಿಸುತ್ತೇನೆ ಎಚ್ಚರಾಗಿರಿ. ಕೋತಿ ಚೇಷ್ಟೇ ಮಾಡುತ್ತೀರಾ. ಇಂತಹ ಅಶಿಸ್ತನ್ನು ಸಹಿಸುವುದಿಲ್ಲ ಎಂದು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದರು.