ಜಗಳೂರು: ಜೀವ ಕಾರುಣ್ಯದ ಅನುಭಾವ ಕವಿ ವೇಮನ…

Suddivijaya
Suddivijaya January 19, 2023
Updated 2023/01/19 at 12:44 PM

ಸುದ್ದಿವಿಜಯ, ಜಗಳೂರು: ಜನ ಸಾಮಾನ್ಯರ ಕವಿ, ಜೀವ ಕಾರುಣ್ಯದ ಅನುಭಾವ ಕವಿ ಎಂದರೆ ಅದು 15ನೇ ಶತಮಾನದ ಮಹಾಯೋಗಿ ವೇಮನ ಎಂದು ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಬಣ್ಣಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ವೇಮನ ಮಹಾಯೋಗಿ ಅವರ ಜನ್ಮದಿನಾಚರಣೆ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಗುರುವಾರ ನಡೆದ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. 1412 ರಿಂದ 1480 ರವರೆಗೆ ಅಂದರೆ 68 ವರ್ಷಗಳ ಕಾಲ ಬದುಕಿದ್ದ ವೇಮನರು ತಮ್ಮ ಜೀವಿತಾವಧಿಯಲ್ಲಿ ಜಾತ್ಯಾತೀಕ, ಅಂಧ ಶ್ರದ್ಧೆ, ಮೇಲು ಕೀಳುಗಳನ್ನು ತಮ್ಮ ಪದ್ಯಗಳ ಮೂಲಕ ಧಿಕ್ಕರಿಸಿದವರು.

ಜೀವನದ ಸಂತೆಯೊಳಗಿದ್ದುಕೊಂಡೇ ಸಂತರಾಗಿ, ಮಹಾಂತರಾಗಿ ಬೆಳೆದಿದ್ದು ಅಪೂರ್ವ. ಕರ್ನಾಟಕದಲ್ಲಿ ಸರ್ವಜ್ಞನವರಂತೆ ಆಂಧ್ರದಲ್ಲೂ ಅನುಭಾವಿ ವಚನಕಾರರಾಗಿ ತೆಲುಗು ಭಾಷೆಯಲ್ಲಿ ಅದ್ಭುತವಾದ ಸಾಹಿತ್ಯ ರಚಿಸಿದ ಖ್ಯಾತಿ ಅವರದ್ದು ಎಂದು ವಿವರಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ವಿಶಾಲ ಆಂಧ್ರಪ್ರದೇಶದ ತೆಲುಗು ಭಾಷಿಕ ಶ್ರೇಷ್ಠ ವಚನಕಾರ, ಕವಿತಿಲಕ, ಸಮಾಜ ಚಿಂತಕ ಎಂದೇ ಖ್ಯಾತಿ ಪಡೆದ ವೇಮನರು ಮಾನವ ಕುಲದ ಏಳಿಗೆಗಾಗಿ ಶ್ರಮಪಟ್ಟವರಲ್ಲಿ ಅಗ್ರಗಣ್ಯರು ಎಂದು ಕೊಂಡಾಡಿದರು.

ಜಗಳೂರು ತಾಲೂಕು ಕಚೇರಿಯಲ್ಲಿ ವೇಮನ ಜಯಂತಿ ಆಚರಿಸಲಾಯಿತು.

ನಿವೃತ್ತ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ತಿಪ್ಪೇಸ್ವಾಮಿ ಮಾತನಾಡಿ, ವೇಶ್ಯಾಸ್ತ್ರೀ ಬಯಸಿದ್ದಕ್ಕಾಗಿ ವೇಮನರಿಗೆ ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿ ಬೇಕೆಂದು ವೇಮನ ಕೇಳುತ್ತಾರೆ. ಮಲ್ಲಮ್ಮ ಮೂಗುತಿ ಕೊಡಲು ಒಪ್ಪಿ ಕರಾರೊಂದನ್ನು ಹಾಕುತ್ತಾರೆ. ಅದೇನೆಂದರೆ ವೇಮನ ಕುಳಿತಿರುವ ಮಂಚವನ್ನು ವೇಶ್ಯಸ್ತ್ರೀ ಮೂರು ಸುತ್ತು ಹಾಕಿ ಹಿಂಬದಿ ಭಾಗಿ ಎರಡೂ ಕೈಗಳನ್ನು ಚಾಚಿ ವೇಮನನಿಂದ ಮೂಗುತಿಯನ್ನು ಪಡೆಯಬೇಕು ಎಂದು ಕಾರಾರು ಹಾಕುತ್ತಾರೆ.

ಅತ್ತಿಗೆ ಮಾತನನ್ನು ಚಾಚು ತಪ್ಪದೇ ಪಾಲಿಸಿದ ವೇಮನ ವೇಶ್ಯಸ್ತ್ರೀಯ ಸಗ್ನ ದೃಶ್ಯ ನೋಡಿದ ಅಂದೇ ಜಿಗುಪ್ಸೆ ಹುಟ್ಟಿ ಜ್ಞಾನೋದಯವಾಗಿ ಅನುಭಾವ ಕವಿಯಾಗಿ ವೈರಾಗ್ಯ ಜೀವನಕ್ಕೆ ತೆರಳಿದರು ಎಂದರು ವೇಮನ ಜೀವನ ಇತಿಹಾಸ ಬಿಚ್ಚಿಟ್ಟರು.

ಈ ವೇಳೆ ಪಪಂ ಸದಸ್ಯ ಬಿ.ಕೆ.ರಮೇಶ್, ಲುಕ್ಮಾನ್ ಉಲ್ಲಾ ಖಾನ್, ಬಿಸಿಎಂ ಅಧಿಕಾರಿ ಆಸ್ಮಾಭಾನು, ತೋಟಗಾರಿಕೆ ಇಲಾಖೆ ನಿರ್ದೇಶಕ ವೆಂಕಟೇಶ್ ಮೂರ್ತಿ, ಸತ್ಯಮೂರ್ತಿ, ರಂಗನಾಥ್, ಸುರೇಶ್ ರೆಡ್ಡಿ, ಬಿಇಒ ಉಮಾದೇವಿ, ಕಿಫಾಯತ್ ಅಹ್ಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!