ಸುದ್ದಿವಿಜಯ, ಜಗಳೂರು:ದೇವಿಕೆರೆ ವಿಎಸ್‌ಎಸ್‌ಎನ್ ವತಿಯಿಂದ ಸಮರ್ಪಕವಾಗಿ ಪಡಿತರ ವಿತರಣೆ ಮಾಡದೇ ಅಲೆದಾಡಿಸುತ್ತಿದ್ದಾರೆಂದು ಆಪಾಧಿಸಿ ಗುರುವಾರ ಶೆಟ್ಟಿಗೊಂಡನಹಳ್ಳಿ ಗ್ರಾಮಸ್ಥರು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಶೆಟ್ಟಿಗೊಂಡನಹಳ್ಳಿ ಗ್ರಾಮದಿಂದ ಆಟೋದಲ್ಲಿ ಆಗಮಿಸಿದ ಮಹಿಳೆಯರು-ಪುರುಷರು ವಿಎಸ್‌ಎಸ್‌ಎನ್ ವಿರುದ್ದ ತಾಲೂಕು ಕಚೇರಿ ಮುಂದೆ ಘೋಷಣೆಗಳನ್ನು ಕೂಗಿದರು.
ಗ್ರಾಮದಲ್ಲಿ 250ಕ್ಕೂ ಹೆಚ್ಚು ಕುಟುಂಬಳಿದ್ದು, ಇದರಲ್ಲಿ ೧೮೦ ಪಡಿತರ ಚೀಟಿ ಹೊಂದಿದ್ದಾರೆ.
ಇಲ್ಲಿರುವ ಬಹುತೇಕ ಕುಟುಂಬಗಳು ಕೃಷಿ, ಕೂಲಿಕಾರರಿದ್ದಾರೆ. ಸರ್ಕಾರದಿಂದ ಉಚಿತವಾಗಿ ಸಿಗುವ ಪಡಿತರ ಆಹಾರ ಧಾನ್ಯಗಳಿಂದ ತಿಂಗಳವರೆಗೂ ಜೀವನ ಸಾಗುತ್ತಿದೆ.
ಆದರೆ ರೇಷನ್ ಕೊಡುವುದರಲ್ಲಿಯೂ ಬಡವರಿಗೆ ಅನ್ಯಾಯ ಮಾಡಿದರೇ ಹೇಗೆ? ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ನಮ್ಮೂರಲ್ಲಿ ನ್ಯಾಯಬೆಲೆ ಅಂಗಡಿ ಇಲ್ಲ, ಹಾಗಾಗಿ ಸಮೀಪದಲ್ಲಿರುವ ದೇವಿಕೆರೆಯ ವಿಎಸ್‌ಎಸ್‌ಎನ್ ವತಿಯಿಂದ ಪಡಿತರ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ.
ಆದರೆ ವರ್ಷಗಳಿಂದಲೂ ತಿಂಗಳಿಂದಲೂ ಒಬ್ಬರಿಗೂ ಸರಿಯಾಗಿ ವಿತರಣೆ ಮಾಡದೆ ಅಲೆದಾಡಿಸುತ್ತಾರೆ. ತಿಂಗಳ ಆರಂಭದಲ್ಲಿಯೇ ಪಡಿತರ ಧಾನ್ಯ ಬರುತ್ತದೆ ಆದರೆ ವಿತರಣೆ ಮಾಡುವ ಉಮೇಶ್ ಎಂಬುವರು ತಿಂಗಳ ಕೊನೆಯವರೆಗೂ ನಾಳೆ ಬನ್ನಿ ಎಂದು ಸಬೂಬು ಹೇಳಿ ಎಬ್ಬೆಟ್ಟಿನ ಗುರುತು ಹಾಕಿಸಿಕೊಂಡು ದಿನ ದೂಡುತ್ತಾನೆ.
ತಿಂಗಳ ಕೊನೆ ದಿನದಲ್ಲಿ ರೇಷನ್ ಖಾಲಿಯಾಗಿದೆ. ಮುಂದಿನ ತಿಂಗಳು ಕೊಡುತ್ತೇನೆ ಎಂದು ವಾಪಸ್ಸು ಕಳಿಸುತ್ತಾರೆ. ಇದರಿಂದ ಎರಡು ತಿಂಗಳಿಗೊಮ್ಮೆ ಅಕ್ಕಿ. ಗೋದಿ ಸಿಗುತ್ತಿಲ್ಲ.
ನಮ್ಮ ಗ್ರಾಮಕ್ಕೆ ತುಂಬ ಅನ್ಯಾಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ತಹಸೀಲ್ದಾರ್ ಬಳಿ ದೂರಿದರು. ಪ್ರತಿ ತಿಂಗಳು ದೇವಿಕೆರೆಗೆ ಹೋಗಿ ರೇಷನ್ ತರಲು ತುಂಬ ತೊಂದರೆಯಾಗುತ್ತದೆ.
ವೃದ್ದರು, ಮಕ್ಕಳು ಓಡಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಶೆಟ್ಟಿಗೊಂಡನಹಳ್ಳಿ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯನ್ನು ಆರಂಭಿಸಿ ಬಡವರಿಗೆ ಸಹಾಯ ಮಾಡಬೇಕು.
ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲವೆಂದು ಗ್ರಾಮದ ಮುಖಂಡ ಜೆಸಿಬಿ ರಾಜಪ್ಪ ಎಚ್ಚರಿಕೆ ನೀಡಿದರು.
ಸರ್ಕಾರದಿಂದ ವಿತರಣೆ ಮಾಡುವ ಪಡಿತರ ಆಹಾರ ಧಾನ್ಯವನ್ನು ಬಡ ಜನರಿಗೆ ವಿತರಣೆ ಮಾಡದೇ ವಂಚನೆ ಮಾಡುತ್ತಿರುವುದು ಸರಿಯಲ್ಲಾ.
ಗ್ರಾಮಸ್ಥರಿಗೆ ಎಷ್ಟು ತಿಂಗಳು ವಿತರಣೆ ಮಾಡಿಲ್ಲ, ಗೋದಾಮಿನಲ್ಲಿ ಎಷ್ಟು ದಾಸ್ತಾನು ಮಾಡಿದ್ದಾನೆ. ಆಹಾರ ಇಲಾಖೆಯಿಂದ ಎಷ್ಟು ಖರೀದಿಸಿದ್ದಾನೆ ಎಂಬುವುದರ ಸಂಪೂರ್ಣ ಮಾಹಿತಿ ಪಡೆದು ವರದಿ ಸಲ್ಲಿಸಬೇಕು.
ಕೂಡಲೇ ಅವರ ವಿರುದ್ದ ಕ್ರಮಕೈಗೊಂಡು ಪರವಾನಿಗೆ ರದ್ದುಪಡಿಸುವಂತೆ ಆಹಾರ ಇಲಾಖೆ ಅಧಿಕಾರಿ ಪ್ರಕಾಶ್ ಅವರಿಗೆ ಸೂಚನೆ ನೀಡಿದರು.
ನಂತರ ಮಾತನಾಡಿ, ನಿಮಗೆ ಯಾವುದೆ ತೊಂದರೆಯಾಗದಂತೆ ರೇಷನ್ ವಿತರಣೆಗೆ ಕ್ರಮಕೈಗೊಳ್ಳುತ್ತೇನೆ.
ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು, ಸಾಧ್ಯವಾದರೆ ತಮ್ಮ ಗ್ರಾಮದಲ್ಲಿಯೇ ನ್ಯಾಯಬೆಲೆ ಅಂಗಡಿ ತೆರೆಯಲು ಪ್ರಯತ್ನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪ್ರಭು, ಬೋರೇಶ್, ನಾಗರಾಜ್, ಮಧು, ಸಂತೋಷ್, ಅಂಜಿನಪ್ಪ, ಪ್ರೇಮಕ್ಕ, ಶಾಂತಮ್ಮ, ಗೀತಮ್ಮ, ಚೌಡಮ್ಮ, ಚಂದ್ರಮ್ಮ, ಅಂಜಿನಮ್ಮ, ಗಿರಿಜಮ್ಮ ಸೇರಿದಂತೆ ಮತ್ತಿತರಿದ್ದರು.