ಸುದ್ದಿವಿಜಯ, ಜಗಳೂರು: ಅತ್ಯಂತ ಹಿಂದುಳಿದ ಮತ್ತು ಬರಪೀಡಿತ ತಾಲೂಕಿನ ಎಲ್ಲಾ 22 ಗ್ರಾಪಂಗಳ ಪಿಡಿಒಗಳು ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ನಿಗಾವಹಿಸಬೇಕು.
ತಾಲೂಕಿಗೆ 25 ಲಕ್ಷ ಹಣ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮೀಸಲಿಡಲಾಗಿದೆ ಎಂದು ಜಿಪಂ ಸಿಇಒ ಡಾ.ಸುರೇಶ್ ಇಟ್ನಾಳ್ ಸೂಚನೆ ನೀಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ವಾರ್ಷಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಗ್ರಾಮೀಣ ಮತ್ತು ಕುಡಿಯುವ ನೀರು ಇಲಾಖೆಯ ಎಇಇ ಸಾದಿಕ್ ಉಲ್ಲಾ ಅವರಿಂದ ಮಾಹಿತಿ ಪಡೆದರು.
ತಾಲೂಕಿನ ಉಚ್ಚಂಗಿಪುರ, ಉಜ್ಜಪ್ಪಒಡೇರಹಳ್ಳಿ, ಮದಕರಿಪುರ, ಕಲ್ಲೇನಹಳ್ಳಿ, ಲಿಂಗಣ್ಣನಹಳ್ಳಿ, ಹನುಮಂತಾಪುರ, ತಾರೇಹಳ್ಳಿ, ಹೊಸೂರು, ರಂಗಾಪುರ, ಪಲ್ಲಾಗಟ್ಟೆ, ಸಿದ್ದಮ್ಮನಹಳ್ಳಿ, ಮದಕರಿಪುರ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದ್ದು ತಕ್ಷಣವೇ ಸ್ಪಂದಿಸುತ್ತಿದ್ದೇವೆ ಎಂದು ಉತ್ತರಿಸಿದರು.ಅದಕ್ಕೆ ಪ್ರತಿಕ್ರಿಯೆ ನೀಡಿದ ಸಿಇಒ ಆಯಾ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾದರೆ ಅದನ್ನು ಬಗೆಹರಿಸುವ ಜವಾಬ್ದಾರಿ ಪಿಡಿಒಗಳದ್ದಾಗಿದೆ. ಮೊದಲಿಗೆ ಖಾಸಗಿ ಬೋರ್‍ವೆಲ್ ಮಾಲೀಕರ ಜೊತೆ ಒಪ್ಪಂದ ಮಾಡಿಕೊಳ್ಳಿ.
ಇಲ್ಲವೇ ಇರುವ ಬೋರ್‍ವೆಲ್‍ಗಳನ್ನು ಡೀಪ್ನಿಂಗ್ ಮತ್ತು ಪ್ಲಷಿಂಗ್ ಮಾಡಿಸಬೇಕು. ಅದೂ ಸಾಧ್ಯವಾಗದಿದ್ದರೆ ಮಾತ್ರ ಹೊಸ ಬೋರ್‍ವೆಲ್ ಕೊರೆಸಲು ನಮ್ಮಿಂದ ಒಪ್ಪಿಗೆ ಪಡೆದ ನಂತರವಷ್ಟೇ ಬೋರ್‍ವೆಲ್ ಹಾಕಿಸಬೇಕು.
ಖಾಸಗಿ ಅವರಿಂದ ನೀರು ಖರೀದಿಸಿದರೆ ಎಷ್ಟು ಹಣವಾಗುತ್ತದೆ ಎಂದು ಲೆಕ್ಕ ಹಾಕಿ. ಒಪ್ಪಂದದ ನಂತರ ಇಒ, ತಹಶೀಲ್ದಾರ್ ಗಮನಕ್ಕೆ ತನ್ನಿ ಎಂದು ಸಿಇಒ, ಪಿಡಿಒಗಳಿಗೆ ಸೂಚನೆ ನೀಡಿದರು.
ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಮೀಟಿಂಗ್ ನಲ್ಲಿ ಚರ್ಚಿಸಿ. ಈ ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ನೀರಿನ ಸಮಸ್ಯೆಯಾಗಬಾರದು ಎಂದು ಎಚ್ಚರಿಸಿದರು.
ನೀರಿನ ಸಮಸ್ಯೆ ಇರುವ ಆಯಾ ಗ್ರಾಪಂ ಪಿಡಿಒಗಳ ಜೊತೆ ಚರ್ಚಿಸಿದ ಅವರು, ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆ. ವಿದ್ಯುತ್ ಸಮಸ್ಯೆಯಾದರೆ ನಮ್ಮ ಗಮನಕ್ಕೆ ತನ್ನಿ.
ಟ್ಯಾಂಕರ್ ನವರು ಅವಶ್ಯಕತೆ ಸೃಷ್ಟಿಸುತ್ತಾರೆ. ಅದಕ್ಕೆಲ್ಲಾ ಅವಕಾಶ ಕೊಡದೇ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂದರು.
ಸಭೆಯಲ್ಲಿ ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಮುಖ್ಯಯೋಜನಾಧಿಕಾರಿ ಮಲ್ಲನಾಯ್ಕ್, ಡಿಡಿಪಿಐ, ಆಡಳಿತಾಧಿಕಾರಿ ಕೊಟ್ರೋಶಪ್ಪ, ತಾಪಂ ಇಒ ಕೆ.ಟಿ.ಕರಿಬಸಪ್ಪ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು.